ವಿಚ್ಛೇದನ ಆಗಿದ್ದರೂ ಪುತ್ರಿಯ ಪೋಷಣೆ ತಂದೆ ಕರ್ತವ್ಯ: ಹೈಕೋರ್ಟ್, ಏನಿದು ಪ್ರಕರಣ?

Kannadaprabha News, Ravi Janekal |   | Kannada Prabha
Published : Oct 08, 2025, 01:44 PM IST
high court ruling on child maintenance

ಸಾರಾಂಶ

ವಿಚ್ಛೇದಿತ ಪತ್ನಿ ಉದ್ಯೋಗದಲ್ಲಿದ್ದಾರೆ ಎಂಬ ಕಾರಣ ನೀಡಿ ಅಪ್ರಾಪ್ತ ಮಗಳಿಗೆ ಜೀವನಾಂಶ ನೀಡಲು ನಿರಾಕರಿಸಿದ ತಂದೆಯ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ತಾಯಿಗೆ ಆದಾಯವಿದ್ದರೂ, ಮಗುವನ್ನು ಪೋಷಿಸುವ ಶಾಸನಬದ್ಧ ಕರ್ತವ್ಯದಿಂದ ತಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ವೆಂಕಟೇಶ್‌ ಕಲಿಪಿ

ಬೆಂಗಳೂರು (ಅ.2) : ವಿಚ್ಛೇದನ ಮಂಜೂರಾಗಿದೆ ಹಾಗೂ ವಿಚ್ಛೇದಿತ ಪತ್ನಿ ಉದ್ಯೋಗ ಮಾಡುತ್ತಾ ವೇತನ ಪಡೆಯುತ್ತಿದ್ದಾರೆ ಎಂಬ ಕಾರಣದಿಂದ ತನ್ನ ಅಪ್ರಾಪ್ತ ಮಗುವಿಗೆ ಜೀವನಾಂಶ ಪಾವತಿಸುವ ಶಾಸನಬದ್ಧ ಕರ್ತವ್ಯದಿಂದ ತಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆದೇಶಿಸಿರುವ ಹೈಕೋರ್ಟ್‌, ಅಪ್ರಾಪ್ತ ಮಗಳಿಗೆ ನೀಡಲು ನಿಗದಿಪಡಿಸಲಾಗಿರುವ ಮಾಸಿಕ ಐದು ಸಾವಿರ ರು. ಜೀವನಾಂಶ ಮೊತ್ತವನ್ನು ಕಡಿತಗೊಳಿಸಲು ಕೋರಿದ ತಂದೆಯ ಕಿವಿ ಹಿಂಡಿದೆ.

ಅಪ್ರಾಪ್ತ ಮಗಳಿಗೆ ಮಾಸಿಕ ಐದು ಸಾವಿರ ರು. ಜೀವನಾಂಶ (ಜೀವನ ನಿರ್ವಹಣಾ ವೆಚ್ಚ) ನೀಡಲು 2014ರ ಸೆ.30ರಂದು ಚಾಮರಾಜನಗರದ ಜಿಲ್ಲಾ ಪ್ರಧಾನ ಸಿವಿಲ್‌ ಮತ್ತು ಜೆಎಂಎಫ್‌ಸಿ ಕೋರ್ಟ್‌ ಹೊರಡಿಸಿದ ಆದೇಶ ಹಾಗೂ ಅದನ್ನು ಕಾಯಂಗೊಳಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ (ಮರು ಪರಿಶೀಲನಾ ನ್ಯಾಯಾಲಯ) 2025ರ ಮಾ.28ರಂದು ಹೊರಡಿಸಿರುವ ಆದೇಶ ರದ್ದುಪಡಿಸಲು ಕೋರಿ ಮೈಸೂರು ಜಿಲ್ಲೆಯ ಟಿ.ನರಸೀಪುರ ಪಟ್ಟಣ ನಿವಾಸಿ ಎ.ಕೆ. ಅರುಣ್‌ ಹೈಕೋರ್ಟ್‌ಗೆ ಕ್ರಿಮಿನಲ್‌ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮೊಗದಂ ಅವರ ಪೀಠ ಈ ಆದೇಶ ಮಾಡಿದೆ.

ಇದನ್ನೂ ಓದಿ: ಅಪ್ರಾಪ್ತೆ ಮೇಲೆ ಗ್ಯಾಂಗ್‌ರೇಪ್‌: 68 ವರ್ಷದ ವ್ಯಕ್ತಿಗೆ ಜಾಮೀನಿಲ್ಲ, 'ಇದು ಕರುಣೆಯಿಲ್ಲದ ಕೃತ್ಯ' ಎಂದ ಕೋರ್ಟ್

ವಿಚಾರಣಾ ನ್ಯಾಯಾಲಯಗಳು ನಿಗದಿಸಿರುವ ಜೀವನಾಂಶದ ಮೊತ್ತ ಹೆಚ್ಚಿದೆ ಹಾಗೂ ತನ್ನ ಸಾಮರ್ಥ್ಯಕ್ಕೆ ಮೀರಿದೆ. ವಿಚ್ಛೇದಿತ ಪತ್ನಿ ಉದ್ಯೋಗ ಮಾಡುತ್ತಿದ್ದು, ಮಾಸಿಕ 61 ಸಾವಿರ ರು. ವೇತನ ಪಡೆಯುತ್ತಿದ್ದಾರೆ. ವಿವಾಹ ಅಸಿಂಧುಗೊಂಡು, ವಿಚ್ಚೇದನ ಮಂಜೂರಾಗಿದ್ದರೂ ಮತ್ತು ಪತ್ನಿಯು ಮಗುವನ್ನು ಆರೈಕೆ ಮಾಡಲು ಆರ್ಥಿಕ ಸಾಮರ್ಥ್ಯ ಹೊಂದಿದ್ದರೂ ವಿಚಾರಣಾ ನ್ಯಾಯಾಲಯಗಳು ಮಗುವಿನ ಜೀವನಾಂಶಕ್ಕೆಂದು ಮಾಸಿಕ 5 ಸಾವಿರ ರು. ನೀಡಬೇಕೆಂಬ ಹೊರೆ ಹಾಕಿದೆ. ಇದು ನ್ಯಾಯಸಮ್ಮತವಾಗಿಲ್ಲ. ಆದ್ದರಿಂದ ಜೀವನಾಂಶ ಮೊತ್ತವನ್ನು ಕಡಿತಗೊಳಿಸುವ ಅಗತ್ಯವಿದೆ ಎಂದು ಅರ್ಜಿದಾರರು ಕೋರಿದ್ದರು.

ಈ ವಾದ ಒಪ್ಪದ ಹೈಕೋರ್ಟ್‌, ವಿಚ್ಛೇದಿತ ಪತ್ನಿ 61 ಸಾವಿರ ರು. ಮಾಸಿಕ ವೇತನ ಪಡೆಯುತ್ತಾರೆ ಎಂಬುದನ್ನು ಸಾಬೀತುಪಡಿಸಲು ಅಗತ್ಯವಾದ ಸಾಕ್ಷ್ಯ-ದಾಖಲೆಗಳನ್ನು ಅರ್ಜಿದಾರರು ನ್ಯಾಯಾಲಯಗಳ ಮುಂದಿರಿಸಿಲ್ಲ. ಹಾಗೊಂದು ವೇಳೆ ಮಗುವಿನ ತಾಯಿ ಆದಾಯ ಮೂಲ ಹೊಂದಿರುವುದಾಗಿ ಕಲ್ಪಿಸಿಕೊಂಡರೂ ಸಹ ಮಗಳ ಜೀವನ ನಿರ್ವಹಣೆಯ ಕಾನೂನುಬದ್ಧ ಹೊಣೆಗಾರಿಕೆಯಿಂದ ತಂದೆ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.

ಅಪರಾಧ ಪ್ರಕ್ರಿಯಾ ಸಂಹಿತೆ 1973ರ ಸೆಕ್ಷನ್ 125 ಅಡಿ ಪ್ರಕಾರ ತನ್ನ ಗಳಿಕೆಯ ಸಾಮರ್ಥ್ಯ ಮತ್ತು ಜೀವನದಲ್ಲಿನ ಸ್ಥಾನಮಾನಕ್ಕೆ ಅನುಗುಣವಾಗಿ ಅಪ್ರಾಪ್ತ ಮಗುವಿನ ಅಗತ್ಯಗಳನ್ನು ಪೂರೈಸುವ ಶಾಸನಬದ್ಧ ಬಾಧ್ಯತೆ ಹಾಗೂ ಕರ್ತವ್ಯವನ್ನು ತಂದೆ ಹೊಂದಿರುತ್ತಾರೆ. ಅಧೀನ ನ್ಯಾಯಾಲಯದ ಆದೇಶ ಸೂಕ್ತವಾಗಿದೆ. ಮಾಸಿಕ ಐದು ಸಾವಿರ ರು. ಹೆಚ್ಚಲ್ಲ ಮತ್ತು ವಿಚಾರಹೀನವಾಗಿಲ್ಲ ಎಂದು ಹೈಕೋರ್ಟ್‌ ಕಟುವಾಗಿ ನುಡಿದಿದೆ.

ಇದನ್ನೂ ಓದಿ: ಪತಿಗೆ ಕಿರುಕುಳ ನೀಡಿ ಮರುಜೀವನ ಬೇಕೆಂದ ಪತ್ನಿ ಅರ್ಜಿ ವಜಾ: ಹೈಕೋರ್ಟ್‌ ಆದೇಶ

ಜೀವನಾಂಶ ಮೊತ್ತ ಕಡಿಮೆಯಿದೆ:

ಪ್ರಸ್ತುತ ನಿರಂತರವಾಗಿ ಜೀವನ ವೆಚ್ಚ, ಶೈಕ್ಷಣಿಕ ವೆಚ್ಚ, ವೈದ್ಯಕೀಯ ಅಗತ್ಯತೆಗಳ ವೆಚ್ಚು ಹೆಚ್ಚುತ್ತಿದೆ. ಬೆಳೆಯುತ್ತಿರುವ ಮಗುವಿನ ಅಗತ್ಯತೆಗಳನ್ನು ಗಮನಿಸಿದರೆ ವಿಚಾರಣಾ ನ್ಯಾಯಾಲಯಗಳು ನಿಗದಿಪಡಿಸಿರುವ ಜೀವನಾಂಶ ಮೊತ್ತ ಕಡಿಮೆ ಇದೆ. ಆದ್ದರಿಂದ ಅಧೀನ ನ್ಯಾಯಾಲಯಗಳ ಆದೇಶದಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ. ಯಾವುದೇ ದೃಷ್ಟಿಕೋನದಿಂದಲೂ ಅರ್ಜಿದಾರರ ವಾದ ಒಪ್ಪಲಾಗದು ಎಂದು ತಿಳಿಸಿದ ಪೀಠ ಅರ್ಜಿ ವಜಾಗೊಳಿಸಿ ಆದೇಶಿಸಿದೆ.

ಆದರೆ, ಭವಿಷ್ಯದಲ್ಲಿ ಪರಿಸ್ಥಿತಿಯಲ್ಲಿ ಗಣನೀಯ ಬದಲಾವಣೆಗಳು ಸೃಷ್ಟಿಯಾದರೆ ಜೀವನಾಂಶದ ಮೊತ್ತದಲ್ಲಿ ಮಾರ್ಪಾಡು ಮಾಡಲು ಅಧೀನ ನ್ಯಾಯಾಲಯವನ್ನು ಕೋರುವ ಮುಕ್ತ ಅವಕಾಶವನ್ನು ಅರ್ಜಿದಾರರು ಹೊಂದಿದ್ದಾರೆ ಎಂದು ಪೀಠ ಇದೇ ವೇಳೆ ಸ್ಪಷ್ಟಪಡಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಡೇಂಜರ್ ಡಿಸೆಂಬರ್: ಅಡಿಕೆ ತೋಟದಲ್ಲಿ ವಿದ್ಯುತ್ ಶಾಕ್, ಕೂಲಿ ಕಾರ್ಮಿಕ ಬಲಿ! ಆಸ್ಪತ್ರೆಗೆ ಸಚಿವ ಮಧು ಬಂಗಾರಪ್ಪ ದೌಡು
ನಮ್ಮ ಹತ್ರ ದುಡ್ಡಿಲ್ಲ ಎಂದ ಶಾಸಕ; 'ಜಾಗ ಕೊಡ್ರಪ್ಪ ಸಾಕು, ಪ್ರಾಜೆಕ್ಟ್ ನಾನು ಮಾಡ್ತೀನಿ' ಕೇಂದ್ರ ಸಚಿವ ಸೋಮಣ್ಣ ಖಡಕ್ ಕೌಂಟರ್!