ಗುಡ್ ನ್ಯೂಸ್ : 2-3 ದಿನಗಳಲ್ಲಿ ರೈತರ ಖಾತೆಗಳಿಗೆ ನೇರವಾಗಿ ಹಣ ಜಮೆ

By Suvarna NewsFirst Published Jul 8, 2021, 3:55 PM IST
Highlights

 •    ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ರಾಗಿ, ಭತ್ತ, ಗೋಧಿ ಖರೀದಿ
•    2-3 ದಿನಗಳಲ್ಲಿ ರೈತರ ಖಾತೆಗಳಿಗೆ ನೇರವಾಗಿ ಬೆಂಬಲ ಬೆಲೆ ಜಮಾ
•    ಮುಂದಿನ ವರ್ಷಗಳಲ್ಲಿ ಬೆಂಬಲ ಬೆಲೆಯಡಿ ಖರೀದಿ, ಹಣ ಪಾವತಿ ಸಮಸ್ಯೆ ತಪ್ಪಿಸಲು ಸಭೆಯಲ್ಲಿ ಚರ್ಚೆ
 

ಬೆಂಗಳೂರು (ಜು.08): ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ 4-5 ತಿಂಗಳ ಹಿಂದೆ ಖರೀದಿ ಮಾಡಲಾಗಿದ್ದ ರಾಗಿ, ಭತ್ತ ಹಾಗೂ ಗೋಧಿಗೆ ಬಾಕಿ ಹಣವು ಸುಮಾರು 721 ಕೋಟಿ ರೂಪಾಯಿಯಷ್ಟಿದ್ದು, ಇದನ್ನು ಇನ್ನು 2-3 ದಿನಗಳಲ್ಲಿ ಪಾವತಿಸುವುದಾಗಿ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಬೆಂಗಳೂರಿನಲ್ಲಿಂದು ನಡೆದ ಸಚಿವ ಸಂಪುಟ ಉಪ ಸಮಿತಿ ಸಭೆ ಬಳಿಕ ಮಾತನಾಡಿದ ಸಚಿವ ಸೋಮಶೇಖರ್ ನಾಲ್ಕೈದು ತಿಂಗಳ ಹಿಂದೆಯೇ ರಾಗಿ, ಭತ್ತ ಹಾಗೂ ಗೋಧಿಯನ್ನು ಕನಿಷ್ಠ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಮಾಡಲಾಗಿತ್ತು. ಆದರೆ, ಬೆಂಬಲ ಬೆಲೆ ಹಣ ಬಿಡುಗಡೆಯಾಗದೆ ಸಮಸ್ಯೆಯಾಗುತ್ತಿದೆ. ಕೂಡಲೇ ಬಾಕಿ ಹಣವನ್ನು ಪಾವತಿಸುವಂತೆ ಒತ್ತಡ ಬರುತ್ತಿದ್ದವು. ಇದೀಗ ಬಾಕಿ 721 ಕೋಟಿ ರು. ಮುಖ್ಯಮಂತ್ರಿ ಬಿಡುಗಡೆ ಮಾಡಲು ಆದೇಶ ನೀಡಿದ್ದು, ಇನ್ನು 2-3 ದಿನಗಳಲ್ಲಿ ರೈತರ ಖಾತೆಗಳಿಗೆ ನೇರವಾಗಿ ಜಮಾ ಮಾಡಲಾಗುವುದು ಎಂದು ಸಚಿವರು ತಿಳಿಸಿದರು. 

ಕೊರೋನಾದಿಂದ ಮೃತಪಟ್ಟ ರೈತರ ಸಾಲಮನ್ನಾ ..

 ಕನಿಷ್ಠ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಖರೀದಿ ಪ್ರಕ್ರಿಯೆ ಮತ್ತು ರೈತರಿಗೆ ಹಣ ಪಾವತಿಸುವ ಸಂಬಂಧ ಆಗುತ್ತಿರುವ ವಿಳಂಬವನ್ನು ತಪ್ಪಿಸುವ ಉದ್ದೇಶವನ್ನು ಹೊಂದಿದ್ದೇವೆ. ಈ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ತೆಗೆದುಕೊಳ್ಳಬೇಕಾದ ಕ್ರಮಗಳು ಸಾಕಷ್ಟಿದ್ದು, ಅವುಗಳ ಸಂಬಂಧ ಚರ್ಚೆ ನಡೆಸುವ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.

ಮುಂದಿನ ಸಾಲಿನಲ್ಲಿ ಅಂದರೆ 2021-22ರ ಸಾಲಿನಲ್ಲಿ ಇಂತಹ ಸಮಸ್ಯೆಗಳು ತಲೆದೋರದಿರುವಂತೆ ಮಾಡಲು ಏನೆಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು? ಏನು ಮಾಡಬಹುದು ಎಂಬಿತ್ಯಾದಿ ವಿಷಯಗಳ ಬಗ್ಗೆ ಸಚಿವ ಸಂಪುಟ ಉಪ ಸಮಿತಿ ಸಭೆಯಲ್ಲಿ ಚರ್ಚಿಸಲಾಯಿತು. ದಿನಾಂಕ 29/07/2021ರಂದು ಸಚಿವ ಸಂಪುಟ ಉಪ ಸಮಿತಿ ಸಭೆಯನ್ನು ಕರೆಯಲಾಗಿದ್ದು, ಪ್ರಸಕ್ತ ಸಾಲಿನಲ್ಲಿ ಯಾವ ರೀತಿಯಾಗಿ ಬೆಂಬಲ ಬೆಲೆಯನ್ನು ನಿಗದಿಪಡಿಸಬೇಕು ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಸಾಲ ಪಡೆದು ರಾಜ್ಯಕ್ಕೆ ಜಿಎಸ್‌ಟಿ ಪರಿಹಾರ: ಕೇಂದ್ರದ ಭರವಸೆ .

“ಬೆಂಬಲ ಬೆಲೆ” ಪ್ರಥಮ ಸಭೆ

ರೈತರಿಗೆ ಬೆಂಬಲ ಬೆಲೆ ನೀಡುವ ಸಂಬಂಧ ಇಂದು ಪ್ರಥಮ ಸಭೆಯನ್ನು ನಡೆಸಲಾಯಿತು. ಕೃಷಿ ಸಚಿವ ಬಿ.ಸಿ.ಪಾಟೀಲ್, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ, ಪೌರಾಡಳಿತ ಮತ್ತು ಸಕ್ಕರೆ ಸಚಿವ ಶಂಕರ್, ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಸಭೆಯಲ್ಲಿ ಉಪಸ್ಥಿತರಿದ್ದರು. ರೈತರಿಗಾಗುತ್ತಿರುವ ಸಮಸ್ಯೆಗಳು ಹಾಗೂ ಅದಕ್ಕೆ ಬೇಕಿರುವ ಪರಿಹಾರಗಳ ಬಗ್ಗೆ ಚರ್ಚಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
 
ಕೇಂದ್ರದಲ್ಲಿ ಸಹಕಾರ ಸಚಿವಾಲಯ; ಎಸ್ ಟಿ ಎಸ್ ಅಭಿನಂದನೆ

ಸಹಕಾರ ಕ್ಷೇತ್ರ ಎಂದರೆ ಕೃಷಿಗೆ ಪೂರಕವಾಗಿರುವ ಕ್ಷೇತ್ರವಾಗಿದೆ. ಕೃಷಿ ಚಟುವಟಿಕೆಗೆ ನೇರ ಸಂಬಂಧವನ್ನು ಹೊಂದಿರುವ ಸಹಕಾರ ಕ್ಷೇತ್ರಕ್ಕೆ ಕೃಷಿ ಇಲಾಖೆಯಷ್ಟು ಮಹತ್ವವಾಗಲೀ, ಸಮಯವಾಗಲೀ ಸಿಗುತ್ತಿರಲಿಲ್ಲ. ಈಗ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರದಿಂದ ಐತಿಹಾಸಿಕ ತೀರ್ಮಾನವನ್ನು ತೆಗೆದುಕೊಳ್ಳಲಾಗಿದೆ. ಪ್ರತ್ಯೇಕವಾಗಿ ಸಹಕಾರ ಸಚಿವಾಲಯ ಹಾಗೂ ಸಚಿವರನ್ನು ನೇಮಿಸುವ ಮೂಲಕ ದಿಟ್ಟ ಹೆಜ್ಜೆಯನ್ನು ಇಡಲಾಗಿದೆ. ಇದಕ್ಕೆ ಪ್ರಧಾನಿಗಳಿಗೆ ನನ್ನ ಅಭಿನಂದನೆಗಳು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಈಗ ಸಹಕಾರ ಇಲಾಖೆಗೆ ಸಂಬಂಧಪಟ್ಟಂತೆ ನಮಗೆ ಯಾವುದಾದರೂ ಸಮಸ್ಯೆ ತಲೆದೋರಿದರೆ ನೇರವಾಗಿ ಕೇಂದ್ರದಲ್ಲಿ ಸಹಕಾರ ಸಚಿವರನ್ನು ಭೇಟಿ ಮಾಡಬಹುದಾಗಿದೆ. ಸೂಕ್ತವಾದ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಜನತೆ ಪರವಾಗಿ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಸಚಿವರು ತಿಳಿಸಿದರು.

click me!