
ವಿಜಯನಗರ/ರಾಮನಗರ (ಅ.05): ಕನ್ನಡ ಸಾಹಿತ್ಯ ಲೋಕದ ಹೆಮ್ಮೆಯ ಕಥೆಗಾರ, ಚಿಂತಕ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ. ಮೊಗಳ್ಳಿ ಗಣೇಶ್(60) ಅವರು ಇಂದು (ಸೇವಾ ನಿವೃತ್ತಿಯ ನಂತರ) ಬೆಳಗಿನ ಜಾವ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರ ಅಕಾಲಿಕ ನಿಧನವು ಕನ್ನಡ ಸಾಹಿತ್ಯ ವಲಯಕ್ಕೆ, ವಿಶೇಷವಾಗಿ ಕಥಾ ಕ್ಷೇತ್ರಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ.
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಮೊಗಳ್ಳಿ ಗ್ರಾಮದವರಾದ ಗಣೇಶ್, ತಮ್ಮ ಹುಟ್ಟೂರಿನ ಹೆಸರನ್ನೇ ಅಂಕಿತವಾಗಿರಿಸಿಕೊಂಡು ನಾಡಿನಾದ್ಯಂತ ಪರಿಚಿತರಾಗಿದ್ದರು. ಸರಳ, ಜನಪರ ಬದುಕು ಮತ್ತು ಅದಕ್ಕೆ ಪೂರಕವಾದ ಬರವಣಿಗೆಯ ಮೂಲಕ ಅವರು ಓದುಗರ ಮನಸ್ಸಿನಲ್ಲಿ ಅಚ್ಚಳಿಯದ ಸ್ಥಾನ ಪಡೆದಿದ್ದರು.
ಶಿಕ್ಷಣ ಮತ್ತು ಆಡಳಿತ ಕ್ಷೇತ್ರದಲ್ಲೂ ಗಣೇಶ್ ಕೊಡುಗೆ ಗಣನೀಯ. 1996ರಲ್ಲಿ ನಾಡೋಜ ಚಂದ್ರಶೇಖರ ಕಂಬಾರ ಅವರು ಕುಲಪತಿಗಳಾಗಿದ್ದ ಅವಧಿಯಲ್ಲಿ, ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸಂಶೋಧನಾ ಸಹಾಯಕರಾಗಿ ತಮ್ಮ ಸೇವೆಯನ್ನು ಆರಂಭಿಸಿದರು. ಕೇವಲ ಒಂದು ವರ್ಷದ ಬಳಿಕ, 1997ರಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ವೃತ್ತಿಜೀವನವನ್ನು ವಿಸ್ತರಿಸಿದರು. 2023ರ ವರೆಗೆ ಸುದೀರ್ಘ ಕಾಲ ಹಂಪಿ ಕನ್ನಡ ವಿವಿಯಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಈ ಅವಧಿಯಲ್ಲಿ ಹಂಪಿ ಕನ್ನಡ ವಿವಿಯ ಶೈಕ್ಷಣಿಕ ಬೆಳವಣಿಗೆಗೆ ಶ್ರಮಿಸಿದ್ದರು.
ಮೊಗಳ್ಳಿ ಗಣೇಶ್ ಅವರು ಮುಖ್ಯವಾಗಿ ತಮ್ಮ ಕಥೆಗಳ ಮೂಲಕವೇ ಖ್ಯಾತರಾದರು. ಅವರ ಮೊದಲ ಕಥಾಸಂಕಲನ 'ಬುಗರಿ' ಕನ್ನಡ ಓದುಗ ವಲಯದಲ್ಲಿ ಹೊಸ ಸಂಚಲನ ಮೂಡಿಸಿತ್ತು. ಇದರ ಜೊತೆಗೆ, ಹತ್ತಾರು ಮಹತ್ವದ ಕಥಾ ಸಂಕಲನಗಳು, ಲೇಖನಗಳು ಹಾಗೂ ವಿಮರ್ಶಾ ಪುಸ್ತಕಗಳನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ್ದಾರೆ. ಅವರ ಬರವಣಿಗೆಯ ವಿಶಿಷ್ಟ ಶೈಲಿ, ಗ್ರಾಮೀಣ ಸೊಗಡು, ಸೂಕ್ಷ್ಮ ಮನೋಭಾವ ಮತ್ತು ಪ್ರಖರ ವಿಮರ್ಶಾ ದೃಷ್ಟಿ ಗಮನಾರ್ಹವಾದುದು.
ಅವರ ಸಾಹಿತ್ಯದ ಸಾಧನೆಗೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಸಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಗೌರವಗಳನ್ನು ಪಡೆದಿದ್ದರು. ಅವರ ನಿಧನದ ಸಂದರ್ಭದಲ್ಲಿ ಹಾಲಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಅವರ ನಿಧನದ ಸುದ್ದಿ ತಿಳಿಯುತ್ತಿದ್ದಂತೆ ಸಾಹಿತ್ಯ ವಲಯದ ಗಣ್ಯರು, ಮಾಜಿ ವಿದ್ಯಾರ್ಥಿಗಳು, ಸಹೋದ್ಯೋಗಿಗಳು ಮತ್ತು ಅಪಾರ ಅಭಿಮಾನಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಕನ್ನಡದ ಹಿರಿಯ ಸಾಹಿತಿ ಡಾ. ಚಂದ್ರಶೇಖರ ಕಂಬಾರ, ಎಸ್.ಜಿ. ಸಿದ್ಧರಾಮಯ್ಯ ಸೇರಿದಂತೆ ಹಲವರು ಮೊಗಳ್ಳಿ ಗಣೇಶ್ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಡಾ. ಮೊಗಳ್ಳಿ ಗಣೇಶ್ ಅವರ ಅಂತ್ಯಕ್ರಿಯೆಯು ಇಂದು (ಅ.05ರ) ಸಂಜೆ ಹುಟ್ಟೂರು ಮೊಗಳ್ಳಿ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ