ಆಸ್ಪತ್ರೆಯ ಬಿಲ್ ಪಾವತಿಸಿ, ಮೃತದೇಹ ಸ್ವೀಕರಿಸದ ಪುತ್ರ| ಬಿಬಿಎಂಪಿಗೆ ಮೃತದೇಹ ಹಸ್ತಾಂತರಿಸುವಂತೆ ಪುತ್ರ ಮನವಿ|ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆ ನಡೆಸಿದ ಶಾಸಕ ಜಮೀರ್ ಆಹಮದ್ ಖಾನ್ ಬೆಂಬಲಿಗರು|
ಬೆಂಗಳೂರು(ಆ.24): ಕೊರೋನಾ ಸೋಂಕು ತಗುಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟ ವ್ಯಕ್ತಿಯ ಶವವನ್ನು ಕುಟುಂಬಸ್ಥರು ಸ್ವೀಕರಿಸದ್ದರಿಂದ ಬಿಬಿಎಂಪಿ ಸಹಭಾಗಿತ್ವದಲ್ಲಿ ಚಾಮರಾಜಪೇಟೆ ಶಾಸಕ ಜಮೀರ್ ಅಹಮದ್ ಖಾನ್ ಬೆಂಬಲಿಗರು ಅಂತ್ಯಕ್ರಿಯೆ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಸುಮಾರು 63 ವರ್ಷದ ವ್ಯಕ್ತಿಯನ್ನು ಜುಲೈ ತಿಂಗಳ ಮೊದಲ ವಾರದಲ್ಲಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಕೊರೋನಾ ಸೋಂಕು ತಗುಲಿರುವುದು ದೃಢಪಟ್ಟಿದ್ದು, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತ ಪಟ್ಟಿದ್ದರು.
undefined
ರಾಜ್ಯದ ಓವೈಸಿ ಆಗಲು ಹೊರಟಿರುವ ಜಮೀರ್
ವ್ಯಕ್ತಿಯ ಮೃತದೇಹವನ್ನು ತೆಗೆದುಕೊಂಡು ಹೋಗುವಂತೆ ಮೃತರ ಸಂಬಂಧಿಕರಿಗೆ ಹಲವು ಬಾರಿ ಮನವಿ ಮಾಡಿದರೂ ಬರುವುದಾಗಿ ಹೇಳಿ ಇತ್ತ ಮುಖ ಮಾಡಿರಲಿಲ್ಲ. ಆಸ್ಪತ್ರೆಯಿಂದ ಪದೇ ಪದೇ ಕರೆ ಬರುತ್ತಿರುವುದನ್ನು ತಪ್ಪಿಸಿಕೊಳ್ಳಲು ಆಸ್ಪತ್ರೆಯ ದೂರವಾಣಿ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದರು.
ಅಲ್ಲದೆ, ಕೆಲ ದಿನಗಳ ಹಿಂದೆ ಆಸ್ಪತ್ರೆಗೆ ಬಂದಿದ್ದ ಮೃತರ ಪುತ್ರ, ಅಂತ್ಯಕ್ರಿಯೆ ಮಾಡುವುದಕ್ಕೆ ನಮ್ಮಿಂದ ಸಾಧ್ಯವಿಲ್ಲ. ಮೃತದೇಹವನ್ನು ಬಿಬಿಎಂಪಿಗೆ ಹಸ್ತಾಂತರಿಸಲು ಸೂಚಿಸಿದ್ದರು. ಅಲ್ಲದೆ, ಸಂಪೂರ್ಣ ಚಿಕಿತ್ಸಾ ವೆಚ್ಚ ಪಾವತಿಸಿದ್ದರು ಎಂದು ಕಿಮ್ಸ್ ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಇದಾದ ಬಳಿಕ ಬಿಬಿಎಂಪಿ ಸಿಬ್ಬಂದಿಯ ನೆರವಿನೊಂದಿಗೆ ಚಾಮರಾಜಪೇಟೆಯ ಶಾಸಕ ಜಮೀರ್ ಅಹಮದ್ ಖಾನ್ ಅವರ ಬೆಂಬಲಿಗರು ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆ ನಡೆಸಿದ್ದಾರೆ ಎಂದು ಅವರು ವಿವರಿಸಿದ್ದಾರೆ
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಶಾಸಕ ಜಮೀರ್ ಅಹಮದ್ ಖಾನ್ ಅವರು, ಸಾವು ನೋವು ನಮ್ಮೊಳಗಿನ ಮಾನವೀಯತೆಯನ್ನು ಜಾಗೃತಗೊಳಿಸಬೇಕೇ ಹೊರತು ಕಲ್ಲಾಗಿಸಬಾರದು. ಮೃತರ ಶವ ಸಂಸ್ಕಾರಕ್ಕೂ ಕುಟುಂಬಸ್ಥರು ಮುಂದೆ ಬಾರದಿರುವ ಸುದ್ದಿ ತಿಳಿದು ಮನ ಕಲಕಿತು. ಮೃತರ ಧರ್ಮದ ನಿಯಮಾನುಸಾರ ಶವಸಂಸ್ಕಾರ ನೆರವೇರಿಸಿದ್ದೇವೆ. ಇಂಥಾ ಪರಿಸ್ಥಿತಿ ಜಗತ್ತಿನ ಯಾವ ತಂದೆ - ತಾಯಂದಿರಿಗೂ ಬಾರದಿರಲಿ ದೇವರೇ ಎಂದು ಹೇಳಿದ್ದಾರೆ.