
ಹಳಿಯಾಳ (ಆ.17) : ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ಜನರೊಂದಿಗೆ ಗೌರವದಿಂದ ವ್ಯವಹರಿಸಿ, ಗಂಭೀರ ಪ್ರಕರಣವಾಗಿದ್ದರೇ ಅಥವಾ ಅವಶ್ಯಕವಾಗಿದ್ದರೇ ಮಾತ್ರ ರೋಗಗಳನ್ನು ಬೇರೆ ಆಸ್ಪತ್ರೆಗೆ ರೇಪರ್ ಮಾಡಿ ಎಂದು ಶಾಸಕ ಆರ್.ವಿ. ದೇಶಪಾಂಡೆ ಆದೇಶಿಸಿದರು.
ಬುಧವಾರ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ನಡೆದ ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ಆಸ್ಪತ್ರೆಯ ವೈದ್ಯರಿಗೆ ಹಾಗೂ ಸಿಬ್ಬಂದಿಗೆ ಜನಸೇವೆಯ ಪಾಠ ಬೋಧಿಸಿ ಸರಿಯಾಗಿ ಸೇವೆ ಸಲ್ಲಿಸದಿದ್ದರೇ ತಲೆದಂಡ ನಿಶ್ಚಿತ ಎಂದು ಎಚ್ಚರಿಸಿದರು.
ಖಾಸಗಿ ಕ್ಲಿನಿಕ್ ಯಾಕೆ?:
ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು ಖಾಸಗಿ ಕ್ಲಿನಿಕ್ ನಡೆಸಬಹುದೇ ಎಂದು ಶಾಸಕ ದೇಶಪಾಂಡೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ರಮೇಶ ಕದಂ ಅವರನ್ನು ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಡಾ. ಕದಂ, ಆರೋಗ್ಯ ಇಲಾಖೆಯ ಪರವಾನಗಿ ಪಡೆದು ಸರ್ಕಾರಿ ವೈದ್ಯರು ತಮ್ಮ ಸೇವಾವಧಿ ಮುಗಿದ ನಂತರ ಖಾಸಗಿ ಕ್ಲಿನಿಕ್ ನಡೆಸಬಹುದು ಎಂದು 2018ರ ಸರ್ಕಾರದ ಸುತ್ತೋಲೆಯಲ್ಲಿ ಆದೇಶಿಸಲಾಗಿದೆ ಎಂದರು. ಉತ್ತರ ಕೇಳಿ ಅಸಮಾಧಾನಗೊಂಡ ಶಾಸಕರು, ಖಾಸಗಿ ಕ್ಲಿನಿಕ್‌ನ್ನು ಯಾರೆಲ್ಲ ನಡೆಸುತಿದ್ದಾರೆಂದು ಸಭೆಯಲ್ಲಿದ್ದ ಆಸ್ಪತ್ರೆಯ ವೈದರನ್ನು ವಿಚಾರಿಸಿದರು.
ಬಿಜೆಪಿಗೆ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ವಿಶ್ವಾಸ ಇಲ್ಲ: ದೇಶಪಾಂಡೆ
ಸಭೆಯಲ್ಲಿದ್ದ ಮಹಿಳಾ ವೈದ್ಯರ ಸೇವೆ ಹಾಗೂ ವರ್ತನೆಯ ಬಗ್ಗೆ ತೀವ್ರ ಗರಂ ಆದ ದೇಶಪಾಂಡೆ ವೈದ್ಯೆಯನ್ನು ತರಾಟೆಗೆ ತೆಗೆದುಕೊಂಡರು. ಸರ್ಕಾರ ನಿಮಗೆ ಉತ್ತಮ ಸಂಬಳ ನೀಡುತ್ತಿರುವಾಗ ಖಾಸಗಿ ಕ್ಲಿನಿಕ್ ನಡೆಸುವ ಅವಶ್ಯಕತೆಯಾದರೂ ಏನು ಎಂದು ಪ್ರಶ್ನಿಸಿದರು. ಖಾಸಗಿ ಕ್ಲಿನಿಕ್ ಬಗ್ಗೆ ವೈದ್ಯರು ತಾಳುತ್ತಿರುವ ಆಸಕ್ತಿಯಿಂದ ಸರ್ಕಾರಿ ಆಸ್ಪತ್ರೆಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಗುಣಮಟ್ಟದ ಸೇವೆಯು ದೊರೆಯುತ್ತಿಲ್ಲ ಎಂದು ಕಿಡಿಕಾರಿದರು.
ಪವಿತ್ರ ವೃತ್ತಿ ನಿಮ್ಮದು:
ಎಲ್ಲ ವೃತ್ತಿಗಳಲ್ಲಿ ನಿಮ್ಮದು ಪವಿತ್ರ ವೃತ್ತಿ ಸೇವೆಯಾಗಿದೆ ಎಂದ ದೇಶಪಾಂಡೆ, ಸಮಾಜವು ವೈದ್ಯರನ್ನು ಗೌರವದಿಂದ ಕಾಣುತ್ತಿದೆ. ಹೀಗಿರುವಾಗ ವೈದ್ಯರು ಹಣದ ಹಪಾಹಪಿತನದಿಂದ ಪವಿತ್ರ ಸೇವಾವೃತ್ತಿಯನ್ನು ವ್ಯಾಪಾರವಾಗಿ ಆಗಿ ಪರಿವರ್ತಿಸಿದ್ದೀರಿ. ಹಣದ ಹಿಂದೆ ಬಿದ್ದಿರುವ ನಿಮಗೆ ಜನಸೇವೆಯು ಅರ್ಥವಾಗುತ್ತಿಲ್ಲ. ಗಡಿಯಾರದ ಮುಳ್ಳನ್ನು ನೋಡಿ ಡ್ಯೂಟಿ ಮಾಡುವ ವೃತ್ತಿ ನಿಮ್ಮದಲ್ಲ, ದಿನದ ಇಪ್ಪತ್ತನಾಲ್ಕು ಗಂಟೆ ಸೇವೆ ಸಲ್ಲಿಸಲು ನೀವು ಸಿದ್ಧರಾಗಿರಬೇಕು ಎಂದರು.
ತಾಲೂಕು ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುವ ವೈದ್ಯರು ಕೇಂದ್ರ ಸ್ಥಾನದಲ್ಲಿಯೇ ವಾಸಿಸಬೇಕು. ರಾತ್ರಿ ಡ್ಯೂಟಿ ಮಾಡುವ ವೈದ್ಯರ ಹೆಸರು ಹಾಗೂ ಅವರ ಮೊಬೈಲ್ ಸಂಖ್ಯೆಯನ್ನು ಕಡ್ಡಾಯವಾಗಿ ಆಸ್ಪತ್ರೆಯ ಸೂಚನಾ ಫಲಕದಲ್ಲಿ ಹಾಕಬೇಕು ಎಂದು ಶಾಸಕರು ಸೂಚಿಸಿದರು.
ಸಾರ್ವಜನಿಕ ಅಹವಾಲು:
ತಾಲೂಕು ಆಸ್ಪತ್ರೆಯಲ್ಲಿನ ವೈದ್ಯರ ಸೇವಾ ಲೋಪ ಹಾಗೂ ಇನ್ನಿತರ ಕೊರತೆ ಪ್ರಶ್ನಿಸಿ ಆ. 18ರಂದು ಪ್ರತಿಭಟನೆಗೆ ಕರೆ ನೀಡಿರುವ ದಲಿತ ಸಂಘರ್ಷ ಸಮಿತಿ( ಕೆಂಪು ಸೇನೆ)ಯ ಪದಾಧಿಕಾರಿಗಳ ಅಹವಾಲನ್ನು ಶಾಸಕ ದೇಶಪಾಂಡೆ ಆಲಿಸಿದರು. ಸಭೆಯಲ್ಲಿದ್ದ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಸರಿಯಾಗಿ ಸೇವೆ ಸಲ್ಲಿಸುವಂತೆ ತಾಕೀತು ಮಾಡಿದರು. ಪ್ರತಿಭಟನೆಗೆ ಕರೆ ನೀಡಿದ ಸಂಘಟನೆಯ ಬಹುತೇಕ ಸಮಸ್ಯೆಗಳನ್ನು ಸಭೆಯಲ್ಲಿ ಚರ್ಚಿಸಿ ಇತ್ಯರ್ಥ ಪಡಿಸಿದರು. ಚಿಕಿತ್ಸೆಗೆ ಬರುವ ಸಾರ್ವಜನಿಕರೊಂದಿಗೆ ಉದ್ದಟತನದಿಂದ ವರ್ತಿಸಬಾರದು, ನಿಮ್ಮ ಹುದ್ದೆಯ ಗತ್ತನ್ನು ಪ್ರದರ್ಶಿಸಲು ಹೋಗಬೇಡಿ ಎಂದು ವೈದ್ಯರು, ಸಿಬ್ಬಂದಿಗೆ ಎಚ್ಚರಿಸಿದರು.
ಸೇವಾ ಮನೋಭಾವದ ವೈದ್ಯರು ಸಂಖ್ಯೆ ಹೆಚ್ಚಾಗಲಿ: ಸಚಿವ ಪರಮೇಶ್ವರ್
ಸಹಾಯಕ ಆಯುಕ್ತೆ ಜಯಲಕ್ಷ್ಮಿ ರಾಯಕೋಡ್, ಪ್ರಭಾರ ತಹಸೀಲ್ದಾರ್ ರತ್ನಾಕರ ಜಿ.ಕೆ, ದಾಂಡೇಲಿ ಡಿವೈಎಸ್ಪಿ ಶಿವಾನಂದ ಕಟಗಿ, ಹಳಿಯಾಳ ಸಿಪಿಐ ಸುರೇಶ ಶಿಂಗೆ, ಆರೋಗ್ಯ ರಕ್ಷಾ ಸಮಿತಿಯ ಸದಸ್ಯ ಉಮೇಶ ಬೊಳಶೆಟ್ಟಿ, ರವಿ ತೋರಣಗಟ್ಟಿ, ಪುರಸಭೆ ಮಾಜಿ ಉಪಾಧ್ಯಕ್ಷೆ ಸುವರ್ಣ ಮಾದರ ಇದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ