
ಬೆಂಗಳೂರು : ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಂದ ಅಕ್ರಮ ಬಂಧನಕ್ಕೆ ಗುರಿಯಾಗಿರುವ ಅಥಣಿ ಶಾಸಕ ಮಹೇಶ ಕುಮಟಳ್ಳಿ ಅವರನ್ನು ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿ ಸಂಬಂಧ ರಾಜ್ಯ ಗೃಹ ಇಲಾಖೆಗೆ ಹೈಕೋರ್ಟ್ ಸೋಮವಾರ ನೋಟಿಸ್ ಜಾರಿಗೊಳಿಸಿದೆ.
ಬೆಳಗಾವಿ ಜಿಲ್ಲೆಯ ಅಥಣಿಯ ವಕೀಲ ಹಾಗೂ ಯುವ ಕಾಂಗ್ರೆಸ್ ಕಾರ್ಯದರ್ಶಿ ಪ್ರಮೋದ ದಯಾನಂದ ಹಿರೇಮನಿ ಸಲ್ಲಿಸಿದ್ದ ಹೇಬಿಯಸ್ ಕಾಪರ್ಸ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಹಾಗೂ ನ್ಯಾಯಮೂರ್ತಿ ಕೆ. ನಟರಾಜನ್ ಅವರಿದ್ದ ವಿಭಾಗೀಯ ಪೀಠ, ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ, ಗೃಹ ಇಲಾಖೆ ಹಾಗೂ ಅಥಣಿ ಪೊಲೀಸರಿಗೆ ನೋಟಿಸ್ ಜಾರಿಗೊಳಿಸಿತು.
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ರಮೇಶ ಜಾರಕಿಹೊಳಿ ತಮ್ಮ ಮೇಲೆ ತುಂಬಾ ಒತ್ತಡ ಹಾಕುತ್ತಿದ್ದಾರೆ ಹಾಗೂ ಅಪಹರಿಸಿಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಮಹೇಶ ಕುಮಟಳ್ಳಿ ಈಚೆಗೆ ತಮ್ಮ ಮುಂದೆ ಹೇಳಿಕೊಂಡಿದ್ದರು. ಈ ಮಧ್ಯೆ ಒಂದು ತಿಂಗಳಿಂದ ಶಾಸಕರು ತಮ್ಮ ಸಂಪರ್ಕಕ್ಕೆ ಸಿಕ್ಕಿಲ್ಲ. ಅಥಣಿಯಲ್ಲೂ ಕಾಣಿಸಿಕೊಂಡಿಲ್ಲ. ಈ ಬಗ್ಗೆ ಶಾಸಕ ಕುಮಟಹಳ್ಳಿ ಅವರ ಕುಟುಂಬದವರು, ಸಂಬಂಧಿಕರು, ಆಪ್ತರ ಬಳಿ ಕೇಳಿದರೂ ಸ್ಪಷ್ಟಉತ್ತರ ಕೊಡುತ್ತಿಲ್ಲ. ಮತ್ತೊಂದೆಡೆ ರಮೇಶ ಜಾರಕಿಹೊಳಿಯವರ ಬಗ್ಗೆ ಮಹೇಶ ಕುಮಟಳ್ಳಿ ಕೆಲ ಸಂಶಯದ ಹೇಳಿಕೆ ನೀಡಿದ್ದಾರೆ. ಅದನ್ನು ಗಮನಿಸಿದರೆ ಅವರೇ ಶಾಸಕ ಮಹೇಶ್‌ರನ್ನು ಬಲವಂತವಾಗಿ ಕರೆದುಕೊಂಡು ಹೋಗಿ, ಅಕ್ರಮ ಬಂಧನದಲ್ಲಿಟ್ಟಿದ್ದಾರೆ ಎಂಬ ಸಂಶಯ ಕಾಡುತ್ತಿದೆ ಎಂದು ಅರ್ಜಿಯಲ್ಲಿ ದೂರಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ