ಶಾಸಕ ಮಾಡಾಳ್‌ ವಿರುಪಾಕ್ಷಪ್ಪಗೆ ಏ.11ರವರೆಗೆ ನ್ಯಾಯಾಂಗ ಬಂಧನ: ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ

By Sathish Kumar KHFirst Published Apr 1, 2023, 8:37 PM IST
Highlights

ಅಕ್ರಮ ಹಣ ಸಂಪಾದನೆ ಮತ್ತು ಲಂಚ ಪಡೆಯುತ್ತಿದ್ದ ಪ್ರಕರಣದಲ್ಲಿ ಲೋಕಾಯುಕ್ತ ದಾಳಿಗೆ ಸಿಲುಕಿರುವ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರಿಗೆ ಏ.11ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಲಾಗಿದೆ.

ಬೆಂಗಳೂರು (ಏ.01): ಅಕ್ರಮ ಹಣ ಸಂಪಾದನೆ ಮತ್ತು ಲಂಚ ಪಡೆಯುತ್ತಿದ್ದ ಪ್ರಕರಣದಲ್ಲಿ ಲೋಕಾಯುಕ್ತ ದಾಳಿಗೆ ಸಿಲುಕಿರುವ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರಿಗೆ ಏ.11ರವರೆಗೆ ನ್ಯಾಯಾಂಗ ಬಂಧನವನ್ನು ವಿಸ್ತರಣೆ ಮಾಡಿ ವಿಶೇಷ ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.

ಕಳೆದ ಮಾ.2ರಂದು ನಡೆದ ಲೋಕಾಯುಕ್ತ ದಾಳಿಯ ವೇಳೆ ಲಂಚ ಪಡೆಯುವುದು ಹಾಗೂ 8 ಕೋಟಿ ರೂ. ಅಕ್ರಮ ಹಣ ಸಂಪಾದನೆ ಕುರಿತಂತೆ ಶಾಸಕ ಮಾಡಾಳು ವಿರುಪಾಕ್ಷಪ್ಪ ಅವರಿಗೆ ನೀಡಲಾಗಿದ್ದ ಮಧ್ಯಂತರ ಜಾಮೀನು ರದ್ದುಗೊಂಡ ಬೆನ್ನಲ್ಲೇ ಮಾ.27ರಂದು ಬಂಧನ ಮಾಡಲಾಗಿತ್ತು. ಅಂದಿನಿಂದ ಮಾ.31ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಆದರೆ, ಇಂದು ನ್ಯಾಯಾಂಗ ಬಂಧನ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ಕೋರ್ಟ್ ಗೆ ಕರೆದುಕೊಂಡು ಬಂದಿದ್ದರು. ಜನಪ್ರತಿನಿಧಿ ನ್ಯಾಯಾಲಯದ ಮುಂದೆ ಮಾಡಾಳ್ ವಿರೂಪಾಕ್ಷಪ್ಪ ಅವರನ್ನು ಹಾಜರುಪಡಿಸಲಾಗಿತ್ತು.

ಎದೆ ಹಿಡ್ಕೊಂಡು ಮಾಡಾಳ್‌ ಡ್ರಾಮಾ: ಏನ್‌ ತೊಂದ್ರೆ ಇಲ್ಲ ಕರ್ಕೊಂಡು ಹೋಗಿ ಎಂದ ವೈದ್ಯರು

ಏ.11ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ: ಲೋಕಾಯುಕ್ತ ಟ್ರ್ಯಾಪ್ ಪ್ರಕರಣದಲ್ಲಿ ಬಂಧನವಾಗಿದ್ದ ಮಾಡಾಳ್ ವಿರುಪಾಕ್ಷಪ್ಪ ಅವರ ಪ್ರಕರಣವನ್ನು ಇಂದು ವಿಚಾರಣೆ ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನ್ಯಾಯಾಂಗ ಬಂಧನವನ್ನು ಏಪ್ರಿಲ್ 11 ರವರೆಗೆ ವಿಸ್ತರಣೆ ಮಾಡಿದೆ. ಇನ್ನು ಶಾಸಕರ ಜಾಮೀನು ಅರ್ಜಿಯನ್ನು ಮುಂದೂಡಿಕೆ ಮಾಡಲಾಗಿದೆ. ಏ.6ಕ್ಕೆ ಜಾಮೀನು ಅರ್ಜಿಯ ಕುರಿತಂತೆ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಲಾಗಿದೆ. ನಂತರ ಸಿಟಿ ಸಿವಿಲ್ ಕೋರ್ಟ್ ನಿಂದ ಮಾಡಾಳ್‌ ವಿರುಪಾಕ್ಷಪ್ಪ ಅವರನ್ನು ಲೋಕಾಯುಕ್ತ ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗೆ ಕರೆದೊಯ್ದಿದ್ದಾರೆ. 

ತುಮಕೂರಿನ ಕ್ಯಾತಸಂದ್ರ ಬಳಿ ಅರೆಸ್ಟ್‌: ಅಕ್ರಮ ಹಣ ಸಂಪಾದನೆ ಹಾಗೂ ಲಂಚ ಪಡೆಯುವ ಆರೋಪದಡಿ ಎ1 ಆರೋಪಿಯಾಗಿದ್ದ ಬಿಜೆಪಿ ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಅವರನ್ನು ಮಾ.27ರಂದು ಲೋಕಾಯುಕ್ತ ಪೊಲಿಸರು ಬಂಧಿಸಿದ್ದರು. ಮಾ.8ರಂದು ಹೈಕೋರ್ಟ್‌ನಿಂದ ಪಡೆದಿದ್ದ ಮಧ್ಯಂತರ ಜಾಮೀನು ಮಾ.27ರಂದು ರದ್ದಾದ ಬೆನ್ನಲ್ಲೇ ಚನ್ನಗಿರಿಯಿಂದ ಕಾರಿನಲ್ಲಿ ಹೊರಟ ಮಾಡಾಳ ವಿರುಪಾಕ್ಷಪ್ಪ ಅವರನ್ನು ತುಮಕೂರಿನ ಕ್ಯಾತಸಂದ್ರ ಟೋಲ್‌ಗೇಟ್‌ ಬಳಿ ಬಂಧಿಸಿದ್ದರು. ನಂತರ ವಶಕ್ಕೆ ಪಡೆದ ಲೋಕಾಯುಕ್ತ ಪೊಲೀಸರು ಎದೆ ನೋವು ಎಂದು ನಾಟಕ ಮಾಡುತ್ತಿದ್ದ ಶಾಸಕರನ್ನು ಬೌರಿಂಗ್‌ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿ, ಯಾವುದೇ ಆರೋಗ್ಯ ಸಮಸ್ಯೆಯಿಲ್ಲ ಎಂದು ವೈದ್ಯಕೀಯ ಪ್ರಮಾಣಪತರವನ್ನು ಪಡೆದುಕೊಂಡು ವಶಕ್ಕೆ ಪಡೆದುಕೊಂಡಿದ್ದರು.

Breaking: ಶಾಸಕ ಮಾಡಾಳ್‌ ವಿರುಪಾಕ್ಷಪ್ಪ ಬಂಧನ: ಲೋಕಾಯುಕ್ತ ಪೊಲೀಸರಿಂದ ವಶ

6 ದಿನ ಕಣ್ತಪ್ಪಿಸಿಕೊಂಡಿದ್ದ ವಿರುಪಾಕ್ಷಪ್ಪ: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಅಧ್ಯಕ್ಷರಾಗಿದ್ದ ಮಾಡಾಳು ವಿರುಪಾಕ್ಷಪ್ಪ ಖಾಸಗಿ ಕಂಪನಿಯೊಂದರ ಪ್ರಕರಣವನ್ನು ಖುಲಾಸೆ ಮಾಡುವ ಕಾರಣಕ್ಕೆ 40 ಲಕ್ಷ ರೂ. ಲಂಚ ಪಡೆಯುತ್ತಿದ್ದರು ಎಂಬ ಆರೋಪದಡಿ ಅವರನ್ನೇ 1 ಆರೋಪಿಯನ್ನಾಗಿ ಮಾಡಲಾಗಿತ್ತು. ಉಳಿದಂತೆ ಅವರ ಪುತ್ರ ಮಾಡಾಳು ಪ್ರಶಾಂತ, ಹಣ ಕೊಡಲು ಬಂದಿದ್ದ ಕಂಪನಿಯ ಇಬ್ಬರು ವ್ಯಕ್ತಿಗಳು ಹಾಗೂ ಮಾಡಾಳು ವಿರುಪಾಕ್ಷಪ್ಪ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಆದರೆ, ಮಾಡಾಳು ವಿರುಪಾಕ್ಷಪ್ಪ ಮಾತ್ರ 6 ದಿನಗಳವರೆಗೆ ಯಾರ ಕೈಗೂ ಸಿಗದಂತೆ ತಪ್ಪಿಸಿಕೊಂಡಿದ್ದರು. ಇನ್ನು ಹೈಕೋರ್ಟ್‌ನಲ್ಲಿ ಜಾಮೀನು ಲಭ್ಯವಾದ ನಂತರವೇ ಬಹಿರಂಗವಾಗಿ ಪ್ರತ್ಯಕ್ಷ ಆಗಿದ್ದರು.

click me!