ಬೆಮೆಲ್ ಹಾಗೂ ಮೆಟ್ರೋಗೆ ಅಗತ್ಯವಾದ ಎಲೆಕ್ಟ್ರಾನಿಕ್ ಬಿಡಿ ಭಾಗಗಳನ್ನು ಸರಬರಾಜು ಮಾಡುತ್ತಿದ್ದ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಚ್ ಲಿಮಿಟೆಡ್ ಕಂಪನಿ ತನ್ನ ಟ್ರಾಕ್ಷನ್ ಮೋಟಾರ್ ಮತ್ತು ವಿವಿವಿಎಫ್ ಇನ್ವರ್ಟರ್ ಉತ್ಪಾದನಾ ಘಟಕ ಸ್ಥಗಿತಗೊಳಿಸಿದ್ದು, ಇದರಿಂದಾಗಿ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ.
ರಾಮನಗರ (ನ.09): ಬೆಮೆಲ್ ಹಾಗೂ ಮೆಟ್ರೋಗೆ ಅಗತ್ಯವಾದ ಎಲೆಕ್ಟ್ರಾನಿಕ್ ಬಿಡಿ ಭಾಗಗಳನ್ನು ಸರಬರಾಜು ಮಾಡುತ್ತಿದ್ದ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಚ್ ಲಿಮಿಟೆಡ್ ಕಂಪನಿ ತನ್ನ ಟ್ರಾಕ್ಷನ್ ಮೋಟಾರ್ ಮತ್ತು ವಿವಿವಿಎಫ್ ಇನ್ವರ್ಟರ್ ಉತ್ಪಾದನಾ ಘಟಕ ಸ್ಥಗಿತಗೊಳಿಸಿದ್ದು, ಇದರಿಂದಾಗಿ ಕಾರ್ಮಿಕರು ಬೀದಿಗೆ ಬಿದ್ದಿದ್ದಾರೆ. ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಚ್ ಲಿಮಿಟೆಡ್ ಕಂಪನಿ ತನ್ನ ನೌಕರರಿಗೆ ಸಣ್ಣ ಸುಳಿವನ್ನು ನೀಡದೆ ಎರಡು ಘಟಕಗಳಿಗೆ ಬಾಗಿಲು ಮುಚ್ಚಿದೆ.
ಈ ಘಟಕದಲ್ಲಿ ಕೆಲಸ ಮಾಡುತ್ತಿದ್ದ ಸುಮಾರು 56 ಮಂದಿ ನೌಕರರು ಆತಂಕದಲ್ಲಿದ್ದಾರೆ. ಈ ಘಟಕದಲ್ಲಿ ಬೆಳಗಾವಿ, ವಿಜಯಪುರ, ಮಂಡ್ಯ, ಹಾಸನ ಸೇರಿದಂತೆ ಹಲವು ಜಿಲ್ಲೆಗಳ ಯುವಕರು ಕೆಲಸ ಮಾಡುತ್ತಿದ್ದರು. ಬಿಡದಿ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿಕೊಂಡಿದ್ದರು. ಪ್ರತಿಯೊಬ್ಬ ಕಾರ್ಮಿಕನಿಗೆ 25ರಿಂದ 30 ಸಾವಿರ ರುಪಾಯಿ ವೇತನ ನೀಡಲಾಗುತ್ತಿತ್ತು. ಇದೀಗ ಕೆಲಸ ಕಳೆದುಕೊಂಡಿರುವ ನೌಕರರಲ್ಲಿ ಆತಂಕ ಮನೆ ಮಾಡಿದೆ. ಕಳೆದ ಶುಕ್ರವಾರ ಸಂಜೆ ನೌಕರರು ಕೆಲಸ ಮುಗಿಸಿ ಎಂದಿನಂತೆ ಮನೆಗಳಿಗೆ ತೆರಳಿದ್ದಾರೆ.
Ramanagara: ಹೊಡೆದಾಟದಲ್ಲಿ ಮಾಜಿ ಶಾಸಕ ಬಾಲಕೃಷ್ಣ ಸ್ಪೆಷಲಿಸ್ವ್: ಸಚಿವ ಅಶ್ವತ್ಥ್
ಶನಿವಾರ 56 ಮಂದಿ ನೌಕರರ ವೈಯಕ್ತಿಕ ಖಾತೆಗಳಿಗೆ ಕಂಪನಿ 4 ಲಕ್ಷ ರುಪಾಯಿ ಹಣ ಹಾಕಿದೆ. ಇದನ್ನು ಗಮನಿಸಿದ ನೌಕರರು ವಿಚಾರಿಸಲು ಪ್ರಯತ್ನಿಸಿದಾಗ ಕಂಪನಿಯ ಎಚ್‌ಆರ್ ಸಂಪರ್ಕಕ್ಕೆ ಸಿಗಲಿಲ್ಲ. ಶನಿವಾರ ಹಾಗೂ ಭಾನುವಾರ ರಜೆ ಮುಗಿಸಿಕೊಂಡು ಕಾರ್ಮಿಕರು ಸೋಮವಾರ ಕೆಲಸಕ್ಕೆ ಬಂದಾಗ ಭದ್ರತಾ ಸಿಬ್ಬಂದಿಗಳು ಕಂಪನಿಯೊಳಗೆ ಬಿಡದೆ ತಡೆದಿದ್ದಾರೆ. ಆಗ ಕಂಪನಿಯ ಎಚ್ ಆರ್ ರವರು ಕಾರಣಾಂತರಗಳಿಂದ ಟ್ರಾಕ್ಷನ್ ಮೋಟಾರ್ ಮತ್ತು ವಿವಿವಿಎಫ್ ಇನ್ವರ್ಟರ್ ಉತ್ಪಾದನಾ ಘಟಕ ಮುಚ್ಚಲಾಗುತ್ತಿದೆ.
ಕಂಪನಿಯಿಂದ ಬರಬೇಕಿದ್ದ ಹಣವನ್ನು ನಿಮ್ಮ ಖಾತೆಗಳಿಗೆ ಜಮೆ ಮಾಡಲಾಗಿದೆ ಎಂದಷ್ಟೇ ಹೇಳಿ ವಾಪಸ್ಸಾಗಿದ್ದಾರೆ. ಈ ಮೊದಲು ಯೂನಿಟ್‌ನಲ್ಲಿ ಉತ್ಪಾದನೆ ಚೆನ್ನಾಗಿ ನಡೆಯುತ್ತಿತ್ತು.ಕಳೆದ ಆರು ತಿಂಗಳಿಂದ ಉತ್ಪಾದನೆ ಪ್ರಮಾಣ ಕಡಿಮೆಯಾಗಿತ್ತು. ಅದರಲ್ಲೂ ಮೂರು ತಿಂಗಳಿಂದ ಉತ್ಪಾದನೆ ಪ್ರಮಾಣ ತೀರಾ ಕಡಿಮೆಯಾಗಿದ್ದರಿಂದ ವಾರದಲ್ಲಿ 5 ದಿನ ಮಾತ್ರ ಕೆಲಸ ನಡೆಯುತ್ತಿತ್ತು ಎನ್ನಲಾಗಿದೆ. ಈಗ ಕೆಲಸ ಕಳೆದುಕೊಂಡು ದಿಕ್ಕು ತೋಚದಂತಾಗಿರುವ ನೌಕರರು ಪ್ರತಿಭಟನೆ ಹಾದಿ ಹಿಡಿಯಲು ನಿರ್ಧರಿಸಿದ್ದು, ಕಾರ್ಮಿಕ ಇಲಾಖೆ ಸೇರಿದಂತೆ ಹಿರಿಯ ಅಧಿಕಾರಿಗಳನ್ನು ಭೇಟಿಯಾಗಿ ನ್ಯಾಯ ಕೊಡಿಸುವಂತೆ ಮನವಿ ಮಾಡುತ್ತಿದ್ದಾರೆ.
ಉತ್ಪನ್ನಗಳ ಬೇಡಿಕೆ ಕುಸಿತವೇ ಯೂನಿಟ್‌ಗಳ ಸ್ಥಗಿತಕ್ಕೆ ಕಾರಣ: ಟ್ರಾಕ್ಷನ್ ಮೋಟಾರ್ ಮತ್ತು ವಿವಿವಿಎಫ್ ಇನ್ವರ್ಟರ್ಗಳ ಬೇಡಿಕೆ ತೀವ್ರವಾಗಿ ಕುಸಿತವಾಗಿರುವ ಹಿನ್ನೆಲೆಯಲ್ಲಿ ಮಿಟ್ಸುಬಿಷಿ ಎಲೆಕ್ಟ್ರಿಕ್ ಇಂಡಿಯಾ ಪ್ರೈವೇಚ್ ಲಿಮಿಟೆಡ್ ಕಂಪನಿ ತನ್ನ ಉತ್ಪಾದನಾ ಘಟಕವನ್ನು ಸ್ಥಗಿತಗೊಳಿಸುತ್ತಿದೆ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಕಝುಹಿಕೊ ತಮುರಾ ತಿಳಿಸಿದ್ದಾರೆ. ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕಂಪನಿ ಬಿಡದಿಯ ಉತ್ಪಾದನಾ ಘಟಕದಲ್ಲಿ ಟ್ರಾಕ್ಷನ್ ಮೋಟಾರ್‌ಗಳು ಮತ್ತು ವಿವಿವಿಎಫ್ ಇನ್ವರ್ಟರ್ ಗಳ ಉತ್ಪಾದನೆ ಸ್ಥಗಿತಗೊಳಿಸಿದೆ.
ಇದರ ಕಾರಣದಿಂದಾಗಿ ಟ್ರಾನ್ಸ್ ಪೋರ್ಚ್ ಸಿಸ್ಟಂ ವಿಭಾಗದ ಭಾಗವಾಗಿದ್ದ ಘಟಕದಲ್ಲಿರುವ 56 ಕಾರ್ಮಿಕರನ್ನು ಉದ್ಯೋಗದಿಂದ ಬಿಡುಗಡೆ ನೀಡಲಾಗಿದೆ ಎಂದಿದ್ದಾರೆ. ಈ ಕ್ರಮ ನವೆಂಬರ್ 5ರಿಂದ ಅನ್ವಯವಾಗುತ್ತದೆ. ಈಗಾಗಲೇ ಬಾಧಿತ ಉದ್ಯೋಗಿಗಳಿಗೆ ಸಮಾನ ಹಾಗೂ ಕಾನೂನು ಬದ್ಧವಾಗಿ ಪರಿಹಾರ ನೀಡಲಾಗಿದೆ. ಕಂಪನಿಯ ಕಾರ್ಯನಿರ್ವಹಣೆಯ ಅಗತ್ಯಗಳಿಗೆ ಕೆಲ ಸಿಬ್ಬಂದಿಯನ್ನು ಉಳಿಸಿಕೊಂಡಿದೆ. ಉತ್ಪಾದನಾ ಘಟಕವನ್ನು ಮುಚ್ಚುವ ಯಾವುದೇ ತಕ್ಷಣದ ಆಲೋಚನೆಗಳಿಲ್ಲ ಎಂದು ಹೇಳಿದ್ದಾರೆ.
ಕಂಪನಿಯ ನಿರ್ಧಾರದಿಂದ ವಿವಿವಿಎಫ್ ಇನ್ವರ್ಟರ್ ಮತ್ತು ಟ್ರಾಕ್ಷನ್ ಮೋಟಾರ್‌ಗಳಿಗೆ ಸಂಬಂಧಿಸಿದ ಉದ್ಯಮ ವಿಭಾಗಕ್ಕೆ ಮಾತ್ರ ಪರಿಣಾಮ ಉಂಟಾಗಿದೆ. ಕಂಪನಿ ಹಾಗೂ ಸಮೂಹ ಭಾರತದಲ್ಲಿ ಹೂಡಿಕೆ ಹಾಗೂ ಪ್ರಗತಿಯನ್ನು ಮುಂದುವರಿಸಲಿದೆ. ಈ ಹಿನ್ನಡೆಯ ನಡುವೆಯೂ ಸಮೂಹವು ತನ್ನ ಇತರೆ ಉದ್ಯಮಗಳಾದ ಫ್ಯಾಕ್ಟರಿ ಆಟೊಮೇಷನ್, ಏರ್ ಕಂಡೀಷನಿಂಗ್/ಚಿಲ್ಲರ್ ಸೆಮಿಕಂಡಕ್ಟರ್, ಎಲಿವೇಟರ್ ಮತ್ತಿತರೆ ಉದ್ಯಮಗಳ ಮೂಲಕ ಕರ್ನಾಟಕದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸಲು ಬದ್ಧವಾಗಿದೆ ಎಂದು ಕಝುಹಿಕೊ ತಮುರಾ ತಿಳಿಸಿದ್ದಾರೆ.
ನಾನೂ ಸಚಿವ ಸ್ಥಾನದ ಆಕಾಂಕ್ಷಿ: ಸಿ.ಪಿ.ಯೋಗೇಶ್ವರ್
ನಾವು ಕಂಪನಿಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದೇವು. ಏಕಾಏಕಿ ಕಂಪನಿ ಎರಡು ಯೂನಿಟ್ ಗಳನ್ನು ಸ್ಥಗಿತಗೊಳಿಸಿದರೆ ನೌಕರರ ಗತಿ ಏನಾಗಬೇಕು. ಯಾವ ಕಾರಣದಿಂದಾಗಿ ಯೂನಿಟ್ ಗಳನ್ನು ಬಂದ್ ಮಾಡಲಾಗಿದೆ ಎಂಬುದಕ್ಕೆ ನಿಖರವಾದ ಕಾರಣ ನೀಡಬೇಕು.
- ಹರೀಶ್, ಅಧ್ಯಕ್ಷರು, ಕಾರ್ಮಿಕರ ಸಂಘ