
ಬೆಂಗಳೂರು (ಜು.19): ಖಾಸಗಿ ಆಂಗ್ಲ ಮಾಧ್ಯಮ ಶಾಲೆಯೊಂದರ ಮಕ್ಕಳ ಪೋಷಕರು ಕನ್ನಡ ಭಾಷೆ ಬೋಧನೆ ಬೇಡವೆಂದು ಆಗ್ರಹಿಸಿರುವ ವಿಚಾರಕ್ಕೆ ಕನ್ನಡಿಗರಿಂದ ತೀವ್ರ ಆಕ್ರೋಶ ವ್ಯಕ್ತವಾಗಿರುವ ಬೆನ್ನಲ್ಲೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಅವರು ಭಾಷಾ ಅಸ್ಮಿತೆಗೆ ಧಕ್ಕೆ ತರುವಂಥ ಸಂಗತಿಗೆ ಆಸ್ಪದ ನೀಡಬಾರದು ಹಾಗೂ ಶಾಲೆ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಇದು ಕನ್ನಡ ಭಾಷೆ ಅಸ್ಮಿತೆಗೆ ಸಂಬಂಧಪಟ್ಟಸಂಗತಿಯಾಗಿದ್ದು, ಗಂಭೀರವಾಗಿ ಪರಿಗಣಿಸಬೇಕಿದೆ. ಬೆಂಗಳೂರು ಪ್ರತಿಷ್ಠಿತ ಆಂಗ್ಲಮಾಧ್ಯಮ ಶಾಲೆ ತನ್ನ ಎಂಟನೇ ತರಗತಿಯಲ್ಲಿ ಎರಡನೇ ಭಾಷೆಯಾಗಿ ಕನ್ನಡ ಬೋಧನೆಯಿಂದ ಹಿಂದೆ ಸರಿವ ಪ್ರಕ್ರಿಯೆಗೆ ಚಾಲನೆ ನೀಡಿದ, ಕೆಲ ಪೋಷಕರು ತಮ್ಮ ಮಕ್ಕಳಿಗೆ ಕನ್ನಡ ಬೋಧನೆ ಅಗತ್ಯವಿಲ್ಲವೆಂದು ಶಾಲಾ ಆಡಳಿತ ಮಂಡಳಿಗೆ ತಿಳಿಸಿರುವ ಹಿನ್ನೆಲೆಯಲ್ಲಿ ಶಾಲೆ ಈ ಕ್ರಮಕ್ಕೆ ಮುಂದಾಗಿದೆ. ಅಲ್ಲದೆ, ಕಾನೂನು ಹೋರಾಟಕ್ಕೂ ಸಿದ್ಧತೆ ನಡೆಸಿದೆ ಎಂಬ ವಿಚಾರ ಪತ್ರಿಕೆಗಳಿಂದ ತಿಳಿದುಬಂದಿದೆ.
ಸಿದ್ದು ಸಿಎಂ ಆಗಿದ್ದಕ್ಕೆ ಸೌದಿಯಿಂದ ಬಂದು ಹರಕೆ ತೀರಿಸಿದ ಅಭಿಮಾನಿ
ಇದು ಕನ್ನಡ ನಾಡು-ನುಡಿಗೆ ಹಾಗೂ ಕನ್ನಡ ಭಾಷೆಗೆ ಎಸಗುವ ಅಪಚಾರ. ತಾವು ನೆಲೆಸಿದ ನೆಲದ ಭಾಷೆಯನ್ನು ವ್ಯವಹಾರಿಕವಾಗಿ ಬಳಸುವಷ್ಟುಕಲಿಯಬೇಕಾಗುತ್ತದೆ. ಹಾಗಾಗಿ ರಾಜ್ಯದ ಪ್ರತಿಯೊಂದು ಶಾಲೆಯು ಕನ್ನಡ ಭಾಷಾ ಬೋಧನೆ ಮಾಡಲೇಬೇಕಾದದ್ದು ಅವುಗಳ ಆದ್ಯತೆ ಮತ್ತು ಕರ್ತವ್ಯ ಎಂದು ಸಚಿವರು ಹೇಳಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಒಳದಾರಿ ಹುಡುಕುವುದಕ್ಕೆ ಅಸ್ಪದ ಕೊಡಬಾರದು. ದ್ವಿತೀಯ ಭಾಷೆಯಾಗಿ ಕನ್ನಡ ಕಲಿಸುವ ನಿಯಮದಲ್ಲಿ ಸಡಿಲಿಕೆ, ವಿನಾಯಿತಿ ನೀಡಬಾರದು. ಜೊತೆಗೆ ಶಾಲೆ ಕಾನೂನು ಹೋರಾಟ ಮಾಡಲು ಸಿದ್ಧತೆ ನಡೆಸಿದ್ದನ್ನು ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಚಿವ ತಂಗಡಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದಲ್ಲಿ ಹಿಂದೂಗಳು ಬದುಕಲು ಆಗದ ವಾತಾವರಣ ಇದೆ: ಯತ್ನಾಳ್
ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ನೋಟಿಸ್ ಇನ್ನು, ಪೋಷಕರು ಪತ್ರ ಬರೆದಿರುವ ವಿಚಾರ ಹಾಗೂ ಕನ್ನಡ ಬೋಧನೆ ಕೈಬಿಡುವ ಯೋಜಿಸಿದೆ ಎನ್ನಲಾದ ಖಾಸಗಿ ಆಂಗ್ಲಮಾಧ್ಯಮ ಹೆಣ್ಣುಮಕ್ಕಳ ಶಾಲೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನೋಟಿಸ್ ನೀಡಿದ್ದು, ಮೂರು ದಿನಗಳಲ್ಲಿ ಸ್ಪಷ್ಟನೆ ನೀಡುವಂತೆ ಸೂಚಿಸಿದೆ. ಪೋಷಕರ ಪತ್ರ, ಆಡಳಿತ ಮಂಡಳಿಯ ಪ್ರತಿಕ್ರಿಯೆ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಕನ್ನಡ ಭಾಷಾ ಕಲಿಕೆ ಅಧಿನಿಯಮ ಹಾಗೂ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದ ಪ್ರಕಾರ ರಾಜ್ಯದ ಎಲ್ಲ ಶಾಲೆಗಳಲ್ಲಿ ಕನ್ನಡ ಭಾಷಾ ಕಲಿಕೆ ಕಡ್ಡಾಯ. ಈ ವಿಚಾರವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಗಂಭೀರವಾಗಿ ಪರಿಗಣಿಸಿದ್ದು, ಸ್ಪಷ್ಟನೆ ನೀಡುವಂತೆ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ್ ಹಾನಗಲ್ಲ ಅವರು ನೋಟಿಸ್ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ