ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ: ಬಿಎಸ್‌ವೈ ಇಂದು ಸಿಐಡಿ ಮುಂದೆ ಹಾಜರು?

Published : Jun 17, 2024, 08:35 AM IST
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ: ಬಿಎಸ್‌ವೈ ಇಂದು ಸಿಐಡಿ ಮುಂದೆ ಹಾಜರು?

ಸಾರಾಂಶ

ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ. 

ಬೆಂಗಳೂರು (ಜೂ.17): ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಎದುರಿಸುತ್ತಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸೋಮವಾರ ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಲಿದ್ದಾರೆ ಎಂದು ತಿಳಿದು ಬಂದಿದೆ. ಪೋಕ್ಸೋ ಪ್ರಕರಣ ಸಂಬಂಧ ಜೂ.12ರಂದು ವಿಚಾರಣೆಗೆ ಹಾಜರಾಗುವಂತೆ ಯಡಿಯೂರಪ್ಪಗೆ ಸಿಐಡಿ ನೋಟಿಸ್‌ ನೀಡಿತ್ತು. ಆದರೆ, ಯಡಿಯೂರಪ್ಪ ವಿಚಾರಣೆಗೆ ಗೈರು ಹಾಜರಾಗಿದ್ದರು. 

ಈ ಕುರಿತು ಪಕ್ಷದ ಪೂರ್ವ ನಿಗದಿತ ಕಾರ್ಯಕ್ರಮದ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿರುವುದರಿಂದ ಜೂ.17ರಂದು ವಿಚಾರಣೆಗೆ ಹಾಜರಾಗುವುದಾಗಿ ತನಿಖಾಧಿಕಾರಿಗೆ ಪತ್ರ ಬರೆದು ಮನವಿ ಮಾಡಿದ್ದರು. ಈ ನಡುವೆ ಸಿಐಡಿ ಅಧಿಕಾರಿಗಳು ಯಡಿಯೂರಪ್ಪ ವಿಚಾರಣೆಗೆ ಗೈರು ಹಾಜರಾಗಿರುವ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದು ಜಾಮೀನು ರಹಿತ ಬಂಧನಕ್ಕೆ ವಾರೆಂಟ್‌ ಜಾರಿಗೊಳಿಸುವಂತೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ಮಾಡಿದ ನ್ಯಾಯಾಲಯವು ಜಾಮೀನು ರಹಿತ ಬಂಧನ ವಾರೆಂಟ್‌ ಜಾರಿಗೊಳಿಸಿತ್ತು. 

ಇದರ ಬೆನ್ನಲ್ಲೇ ಯಡಿಯೂರಪ್ಪ ಅವರು ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದುಗೊಳಿಸುವಂತೆ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ಹೈಕೋರ್ಟ್, ಯಡಿಯೂರಪ್ಪರನ್ನು ಬಂಧಿಸದಂತೆ ಸಿಐಡಿಗೆ ನಿರ್ದೇಶನ ನೀಡಿತ್ತು ಮತ್ತು ಅಧೀನ ನ್ಯಾಯಾಲಯ ಹೊರಡಿಸಿದ್ದ ಜಾಮೀನು ರಹಿತ ಬಂಧನದ ವಾರಂಟ್ ಅಮಾನತಿನಲ್ಲಿ ಇರಿಸಿತ್ತು. ಅಂತೆಯೇ ಜೂ.17ರಂದು ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಿ ತನಿಖೆ ಸಹಕರಿಸುವಂತೆ ಯಡಿಯೂರಪ್ಪ ಅವರಿಗೆ ಸೂಚಿಸಿತ್ತು. ಬಂಧನದ ಭೀತಿಯಲ್ಲಿದ್ದ ಯಡಿಯೂರಪ್ಪ ಹೈಕೋರ್ಟ್‌ ಆದೇಶದಿಂದ ಬಂಧನದಿಂದ ಪಾರಾಗಿದ್ದರು. ಇದರ ಬೆನ್ನಲ್ಲೇ ಶನಿವಾರ ದೆಹಲಿಯಿಂದ ಬೆಂಗಳೂರಿಗೆ ವಾಪಾಸ್‌ ಆಗಿದ್ದರು.

ಒಂದು ವರ್ಷದಲ್ಲಿ ಎಲ್ಲಾ ರೀತಿ ಬೆಲೆ ಏರಿಕೆ ಭಾಗ್ಯ: ವಿಜಯೇಂದ್ರ, ಎಚ್‌ಡಿಕೆ ಆಕ್ರೋಶ

ಬಿಎಸ್‌ವೈ ಬಂಧನ ವಾರಂಟ್‌ ಹಿಂದೆ ರಾಜ್ಯ ಸರ್ಕಾರದ ಕೈವಾಡ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಬಂಧನ ವಾರಂಟ್ ಹಿಂದೆ ರಾಜ್ಯ ಸರ್ಕಾರದ ಕೈವಾಡವಿದೆ. ಕಾಂಗ್ರೆಸ್ಸಿನವರೇ ಇದಕ್ಕೆಲ್ಲ ಪ್ರಮುಖ ಸೂತ್ರದಾರರು ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆರೋಪಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಒಂದೇ ನೋಟಿಸ್ ನೀಡಿ ಯಡಿಯೂರಪ್ಪರ ಬಂಧನಕ್ಕೆ ವಾರಂಟ್‌ ನೀಡಲಾಗಿತ್ತು, ಇದರ ಹಿಂದೆ ರಾಜ್ಯ ಸರ್ಕಾರದ ಷಡ್ಯಂತ್ರ ಅಡಗಿತ್ತು. ಜಾಮೀನುರಹಿತ ವಾರಂಟ್ ಹೊರಡಿಸಿರುವುದೇ ತಪ್ಪು ಎಂದು ಕೋರ್ಟ್‌ ಹೇಳಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸೇಡಿನ ರಾಜಕಾರಣ ಮಾಡುತ್ತಿದ್ದಾರೆ. ರಾಹುಲ್ ಗಾಂಧಿಯವರ ನಿರ್ದೇಶನದ ಮೇಲೆ ತಮ್ಮ ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳಲು ಈ ರೀತಿಯಾಗಿ ಸೇಡಿನ ರಾಜಕೀಯಕ್ಕೆ ಮುಂದಾಗಿದ್ದಾರೆ. ನ್ಯಾಯಾಲಯ ತಕ್ಕ ಉತ್ತರ ನೀಡಿದ್ದು, ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಬಲವಾಗಿದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕುಡುಕರ ಲಿವರ್‌ ಚಿಕಿತ್ಸೆಗೆ ಹಣ ಕೇಳಿದ ಶಾಸಕರು: ಪರಿಷತ್‌ನಲ್ಲಿ ಸ್ವಾರಸ್ಯಕರ ಚರ್ಚೆ
ಸಾಲುಮರದ ತಿಮ್ಮಕ್ಕ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ಪ್ರದಾನ: ಸಿಎಂ ಸಿದ್ದರಾಮಯ್ಯ