
ಬೆಂಗಳೂರು (ಅ.8): ಬಡತನ, ಮುಗ್ಧತೆ ಮತ್ತು ಸಮುದಾಯದ ಲಾಭ ಪಡೆದು ಲೈಂಗಿಕ ದೌರ್ಜನ್ಯ ನಡೆಸುವುದು ಕರುಣೆಯಿಲ್ಲದ ಕೃತ್ಯವೆಂದು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾ೧ಚಾರ ಎಸಗಿದ ಆರೋಪ ಎದುರಿಸುತ್ತಿರುವ 68 ವರ್ಷದ ವ್ಯಕ್ತಿಗೆ ಜಾಮೀನು ನೀಡಲು ನಿರಾಕರಿಸಿದೆ.
ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡಲು ಕೋರಿ ಆರೋಪಿ ಚನ್ನಪ್ಪರ್ ಅಲಿಯಾಸ್ ರಾಜಯ್ಯ (68) ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿ ನ್ಯಾಯಮೂರ್ತಿ ಎಸ್.ರಾಚಯ್ಯ ಅವರ ಪೀಠ ಆದೇಶಿಸಿದೆ.
ಸಂತ್ರಸ್ತೆಯ ಬಡತನ, ಮುಗ್ಧತೆ ಮತ್ತು ನಿರ್ದಿಷ್ಟ ಸಮುದಾಯದ ಲಾಭ ಪಡೆದು ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಅತ್ಯಂತ ನಿರ್ದಯ ಕೃತ್ಯ. ಪ್ರಕರಣದಲ್ಲಿ ಮೇಲ್ಮನವಿದಾರ ಆರೋಪಿ ಮತ್ತು ಇತರರು ಅಪ್ರಾಪ್ತೆಯ ಮೇಲೆ ಸಾಮೂಹಿಕವಾಗಿ ಲೈಂಗಿಕ ದೌರ್ಜನ್ಯ ಎಸಗಿರುವುದು ಖಂಡನೀಯ. ಮೇಲ್ಮನವಿದಾರನಿಗೆ ವಯಸ್ಸಾಗಿದೆ. ಇಂತಹ ಘೋರ ಅಪರಾಧ ಮಾಡದಂತೆ ಇತರ ಆರೋಪಿಗಳಿಗೆ ಸಲಹೆ ನೀಡಬೇಕಿತ್ತು. ಕೃತ್ಯವನ್ನು ತಡೆಯಲು ಗ್ರಾಮದ ಹಿರಿಯರ ಗಮನಕ್ಕೆ ತರಬೇಕಿತ್ತು. ಅದು ಬಿಟ್ಟು ತಾನು ಸಹ ಲೈಂಗಿಕ ದೌರ್ಜನ್ಯ ಎಸಗಿರುವುದು ಅತಿರೇಕದ ಸಂಗತಿ ಎಂದು ಆದೇಶದಲ್ಲಿ ನ್ಯಾಯಪೀಠ ಕಟುವಾಗಿ ನುಡಿದಿದೆ.
ಜತೆಗೆ, ತಿನಿಸು ಮತ್ತು ಹೊಸ ಬಟ್ಟೆ ಕೊಡಿಸುವುದಾಗಿ ಸಂತ್ರಸ್ತೆಯನ್ನು ಪ್ರೇರೇಪಿಸಿ ಹಲವು ಬಾರಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಹೀಗಾಗಿ ಆರೋಪಿ ಜಾಮೀನಿಗೆ ಅರ್ಹನಲ್ಲ ಎಂದು ಪೀಠ ತಿಳಿಸಿದೆ.
ಪ್ರಕರಣದ ಹಿನ್ನೆಲೆ:
ಹೊಟ್ಟೆನೋವಿಂದ ನರಳುತ್ತಿದ್ದ ಸಂತ್ರಸ್ತೆಯನ್ನು ತಾಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಪರೀಕ್ಷೆ ನಡೆಸಿದ್ದ ವೈದ್ಯರು ಸಂತ್ರಸ್ತೆ ಗರ್ಭಿಣಿಯಾಗಿರುವುದಾಗಿ ತಿಳಿಸಿದ್ದರು. ಬಳಿಕ ದೂರು ದಾಖಲಾಗಿ ವಿಚಾರಣೆ ನಡೆಸಿದಾಗ ಅರ್ಜಿದಾರರು ಸೇರಿದಂತೆ ಐವರು ಲೈಂಗಿಕ ದೌರ್ಜನ್ಯ ಎಸಗಿ, ಸಂತ್ರಸ್ತೆಯನ್ನು ಗರ್ಭಿಣಿಯಾಗಿಸಿರುವ ಸಂಗತಿ ಬಯಲಾಗಿತ್ತು. ಕೆ.ಆರ್.ಪೇಟೆ ಗ್ರಾಮೀಣ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು. ಅಧೀನ ನ್ಯಾಯಾಲಯ ಮೇಲ್ಮನವಿದಾರ ಆರೋಪಿಗೆ ಜಾಮೀನು ನಿರಾಕರಿಸಿತ್ತು. ಇದರಿಂದ ಆತ ಹೈಕೋರ್ಟ್ ಮೊರೆ ಹೋಗಿದ್ದರು.
ಆರೋಪಿ ಪರ ವಕೀಲರು ವಾದ:
ಆರೋಪಿ ಪರ ವಕೀಲರು, 2024ರ ಮೇ 1ರಿಂದ ಜೂನ್ 30ರವರೆಗೂ ಸಂತ್ರಸ್ತೆ ಮೇಲೆ ಮೇಲ್ಮನವಿದಾರ ಲೈಂಗಿಕ ದೌರ್ಜನ್ಯ ಎಸಗಿರುವುದಾಗಿ ಆರೋಪ ಹೊರಿಸಲಾಗಿದೆ. ಆದರೆ, ನ.9ರಂದು ಪ್ರಕರಣ ದಾಖಲಾಗಿದೆ. ಅಲ್ಲದೆ, ಸಂತ್ರಸ್ತೆ ಹೊಟ್ಟೆಯಲ್ಲಿರುವ ಮಗುವಿನ ಭ್ರೂಣಕ್ಕೆ ಅರ್ಜಿದಾರರ ಡಿಎನ್ಎ ಹೊಂದಾಣಿಕೆಯಾಗಿಲ್ಲ. ಹೀಗಾಗಿ, ಜಾಮೀನು ಮಂಜೂರು ಮಾಡಬೇಕು ಎಂದು ಪೀಠಕ್ಕೆ ಕೋರಿದ್ದರು.
ಪೊಲೀಸರ ಪರ ವಕೀಲರ ವಾದ:
ಪೊಲೀಸರ ಪರ ಸರ್ಕಾರಿ ಅಭಿಯೋಜಕರು, ಸಂತ್ರಸ್ತೆಯ ಹೇಳಿಕೆಯು ಅಂಗಡಿಯಿಂದ ತಿನಿಸು ಕೊಡಿಸುವ ನೆಪದಲ್ಲಿ ಮೇಲ್ಮನವಿದಾರ ಸೇರಿ ಐವರು ಆರೋಪಿಗಳು ಸಾಮೂಹಿಕ ಅತ್ಯಾ೧ಚಾರ ಎಸಗಿರುವುದನ್ನು ಸೂಚಿಸುತ್ತದೆ. ಬಾಲಕಿ ಪರಿಶಿಷ್ಟ ಜಾತಿಗೆ ಸೇರಿದವಳಾಗಿದ್ದು, ಘಟನೆ ನಡೆದ ದಿನಾಂಕದಂದು ಆಕೆ ಅಪ್ರಾಪ್ತ ವಯಸ್ಕಳಾಗಿದ್ದಳು. 68 ವರ್ಷ ವಯಸ್ಸಿನವರಾಗಿರುವ ಮೇಲ್ಮನವಿದಾರ, ತನ್ನ ಮೊಮ್ಮಗಳಷ್ಟು ವಯಸ್ಸಿನ ಸಂತ್ರಸ್ತೆಯ ಮೇಲೆ ಘೋರ ಅಪರಾಧ ಎಸಗಿದ್ದು, ಅರ್ಜಿ ವಜಾಗೊಳಿಸಬೇಕು ಎಂದು ಮನವಿ ಮಾಡಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ