CAA ವಿರುದ್ಧ ರಾಜ್ಯದಲ್ಲಿ ಪ್ರತಿಭಟನೆ ನಡೆಯುತ್ತಿದ್ದು ಇದೇ ವೇಳೆ ನೂರಾರು ಮಂದಿ ಆಂಗ್ಲಭಾಷೆಯ ಎಫ್ ಪದ ಬಳಸಿ ಅವಾಚ್ಯವಾಗಿ ನಿಂದಿಸುವ ಧೋರಣೆ ಪ್ರದರ್ಶಿಸುತ್ತಿದ್ದಾರೆ.
ಬೆಂಗಳೂರು (ಡಿ.21): ದೇಶದ ಹಲವೆಡೆ ಪೌರತ್ವ ಕಾಯ್ದೆ ವಿರೋಧದ ಕಿಚ್ಚು ಹೊತ್ತಿ ಉರಿಯುತ್ತಿರುವುದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ಇದರ ವಿರುದ್ಧ ಎಫ್ ಮೋದಿ, ಎಫ್ ಅಮಿತ್ ಶಾ, ಎಫ್ ಹಿಂದುತ್ವ ಎಂದು ಹಿಂದುತ್ವ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅವಾಚ್ಯವಾಗಿ ನಿಂದಿಸುವ ಟ್ರೆಂಡ್ ಸೃಷ್ಟಿಸುವ ಪ್ರಯತ್ನಗಳು ನಡೆದಿವೆ.
ಸಾಮಾಜಿಕ ಜಾಲತಾಣಗಳಲ್ಲಿ ಇದು ಟ್ರೆಂಡ್ ಆಗಿದ್ದು, ನೂರಾರು ಮಂದಿ ಆಂಗ್ಲಭಾಷೆಯ ಎಫ್ ಪದ ಬಳಸಿ ಅವಾಚ್ಯವಾಗಿ ನಿಂದಿಸುವ ಧೋರಣೆ ಪ್ರದರ್ಶಿಸುತ್ತಿದ್ದಾರೆ. ಶುಕ್ರವಾರ ಸಂಜೆ ನಗರದ ಸರ್ಕಾರಿ ಕಲಾ ಕಾಲೇಜಿನ ಆವರಣದಲ್ಲಿ ದಿಢೀರ್ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಗುಂಪು ಕೂಡ ‘ಎಫ್ ಹಿಂದುತ್ವ’ ಎಂಬ ಅವಹೇಳನಕಾರಿ ಪೋಸ್ಟರ್ ಪ್ರದರ್ಶಿಸಿದ್ದು, ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಒಳಗಾಗಿದೆ.
ಬೆಂಗಳೂರಿನಲ್ಲಿ ಶುಕ್ರವಾರ ನಿಷೇಧಾಜ್ಞೆ ಮುಂದುವರೆಸಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದ್ದರಿಂದ ಯಾವುದೇ ದೊಡ್ಡಮಟ್ಟದ ಪ್ರತಿಭಟನೆಗಳಿಗೆ ಅವಕಾಶವಾಗದಿದ್ದರೂ, ವಿದ್ಯಾರ್ಥಿಗಳ ಗುಂಪೊಂದು ನಗರದ ಸರ್ಕಾರಿ ಕಲಾ ಕಾಲೇಜು (ಗ್ಯಾಸ್ ಕಾಲೇಜು) ಆವರಣದಲ್ಲಿ ಸಂಜೆ ಪೌರತ್ವ ಕಾಯ್ದೆ ಜಾರಿ ವಿರುದ್ಧ ಏಕಾಏಕಿ ಪ್ರತಿಭಟನೆ ನಡೆಸಿತು. ಕೇಂದ್ರ ಸರ್ಕಾರ, ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿಗಳು ಆಜಾದಿ ಆಜಾದಿ ಎಂದು ಘೋಷಣೆ ಕೂಗಿದರು. ಅಷ್ಟೇ ಅಲ್ಲದೆ, ಕೆಲವು ವಿದ್ಯಾರ್ಥಿಗಳು ‘ಎಫ್ ಹಿಂದುತ್ವ’ ಎಂದು ಬರೆಯಲಾದ ಹಾಗೂ ಅದರ ಮೇಲೆ ದೇವನಾಗರಿ ಲಿಪಿಯಲ್ಲಿ ಓಂ ಅಕ್ಷರವನ್ನು ಸ್ವಸ್ತಿಕ್ ಮಾದರಿಯಲ್ಲಿ ಚಿತ್ರಿಸಿರುವ ಕೆಂಪು ಬಣ್ಣದ ಪೋಸ್ಟರ್ ಪ್ರದರ್ಶಿಸಿದರು.
ಹಿಂಸಾಚಾರ ಪೊಲೀಸರ ಪೂರ್ವ ನಿಯೋಜಿತ ಕೃತ್ಯ: ಆರೋಪ...
ತಾವು ಯಾವ ಸಂಘಟನೆ ಅಥವಾ ಯಾವ ಕಾಲೇಜಿಗೆ ಸೇರಿದವರು ಎಂಬ ಬಗ್ಗೆ ಯಾವುದೇ ಮಾಹಿತಿ ನೀಡದ ವಿದ್ಯಾರ್ಥಿಗಳು ಮಾಧ್ಯಮಗಳೊಂದಿಗೆ ಮಾತನಾಡಲೂ ನಿರಾಕರಿಸಿದರು. ಬಳಿಕ ಸ್ಥಳಕ್ಕೆ ಬಂದ ಪೊಲೀಸರು ಅವರನ್ನು ಚದುರಿಸಿ ಕಳುಹಿಸಿದರು. ಈ ಮಧ್ಯೆ, ಕಾಲೇಜಿನ ಪ್ರಾಂಶುಪಾಲರು ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ವಿದ್ಯಾರ್ಥಿಗಳು ಯಾರೆಂದು ಗೊತ್ತಿಲ್ಲ. ಅನಧಿಕೃತವಾಗಿ ಕಾಲೇಜು ಪ್ರವೇಶಿಸಿ ಪ್ರತಿಭಟಿಸಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಇದರ ಬೆನ್ನಲ್ಲೇ ಪ್ರತಿಭಟನೆಯಲ್ಲಿ ಹಿಂದುತ್ವದ ಬಗ್ಗೆ ಅವಹೇಳನಕಾರಿ ಪೋಸ್ಟರ್ ಪ್ರದರ್ಶಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರತಿಭಟನಾ ನಿರತರ ವಿರುದ್ಧ ವ್ಯಾಪಕ ಟೀಕೆ, ಆಕ್ರೋಶಗಳು ವ್ಯಕ್ತವಾಗುತ್ತಿವೆ.
ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟಿಸುವ ಬರದಲ್ಲಿ ವಿದ್ಯಾರ್ಥಿಗಳು ಪ್ರದರ್ಶಿಸಿರುವ ಇಂತಹ ಪೋಸ್ಟರ್‌ಗಳು ಪ್ರಚೋದನೆಗೆ ಒಳಗಾಗಿ, ಕೋಮುಗಲಭೆ ಸೃಷ್ಟಿಸಬಹುದು. ಪೊಲೀಸರು ಇಂತಹ ವಿದ್ಯಾರ್ಥಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಗಳು ಕೇಳಿಬರುತ್ತಿವೆ.
ಡಿ.21ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ