ಹೊಸ ವರ್ಷದ ಕಿಕ್: ಹಂಪಿ, ಟಿಬಿ ಡ್ಯಾಂಗೆ ಹರಿದು ಬಂದ ಜನಸಾಗರ; ಲಾಡ್ಜ್ ದರ ಕೇಳಿದ್ರೆ ಪ್ರವಾಸಿಗರು ಸುಸ್ತೋ ಸುಸ್ತು!

Published : Dec 28, 2025, 05:45 PM IST
Hampi TB Dam Overcrowded for New Year; Hotel Prices Triple Amid Massive Tourist Influx

ಸಾರಾಂಶ

ಹೊಸ ವರ್ಷದ ರಜೆಗಳ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿ ಮತ್ತು ಹೊಸಪೇಟೆಯ ಪ್ರವಾಸಿ ತಾಣಗಳು ಜನಜಂಗುಳಿಯಿಂದ ತುಂಬಿಹೋಗಿವೆ. ಪ್ರವಾಸಿಗರ ದಟ್ಟಣೆಯಿಂದಾಗಿ ಹೋಟೆಲ್ ದರಗಳು ಗಗನಕ್ಕೇರಿದ್ದು, ವಿರೂಪಾಕ್ಷ ದೇವಾಲಯ, ಟಿಬಿ ಡ್ಯಾಂನಂತಹ ಸ್ಥಳಗಳು ಪ್ರವಾಸಿಗರಿಂದ ಕಂಗೊಳಿಸುತ್ತಿವೆ.

ಬಳ್ಳಾರಿ (ಡಿ.28): ಸತತ ರಜೆಗಳು ಹಾಗೂ ಹೊಸ ವರ್ಷದ ಸ್ವಾಗತಕ್ಕೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ, ವಿಶ್ವವಿಖ್ಯಾತ ಹಂಪಿ ಹಾಗೂ ಹೊಸಪೇಟೆಯ ಟಿಬಿ ಡ್ಯಾಂಗೆ ಪ್ರವಾಸಿಗರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ಹಲವು ತಿಂಗಳಿಂದ ಬಿಕೋ ಎನ್ನುತ್ತಿದ್ದ ವಿಜಯನಗರ ಜಿಲ್ಲೆಯ ಪ್ರವಾಸಿ ತಾಣಗಳು ಈಗ ಜನಜಂಗುಳಿಯಿಂದ ತುಂಬಿ ತುಳುಕುತ್ತಿವೆ.

ಹೊಸ ವರ್ಷದ ಸ್ವಾಗತಕ್ಕೆ ಪ್ರವಾಸಿಗರ ದಂಡು!

ಕ್ರಿಸ್‌ಮಸ್‌ನಿಂದ ಡಿಸೆಂಬರ್ 31ರವರೆಗೆ ಸತತ ರಜೆ ಇರುವುದರಿಂದ ಪ್ರವಾಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಕೇವಲ ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ಮಹಾರಾಷ್ಟ್ರ, ತಮಿಳುನಾಡು ಹಾಗೂ ಕೇರಳದಿಂದಲೂ ಸಾವಿರಾರು ಜನರು ಆಗಮಿಸುತ್ತಿದ್ದಾರೆ. ವಿದೇಶಿ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದ್ದು, ಹೊಸಪೇಟೆ ನಗರ ಹಾಗೂ ಹಂಪಿ ಪರಿಸರದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ.

ಗಗನಕ್ಕೇರಿದ ಲಾಡ್ಜ್ ದರ: ರೂಮ್ ಸಿಗದೆ ಪ್ರವಾಸಿಗರು ಹೈರಾಣ 

ಪ್ರವಾಸಿಗರ ಸಂಖ್ಯೆ ಹೆಚ್ಚಳದಿಂದಾಗಿ ಹೊಸಪೇಟೆಯ ಹೋಟೆಲ್, ಹೋಮ್ ಸ್ಟೇ ಹಾಗೂ ರೆಸಾರ್ಟ್‌ಗಳಿಗೆ ಫುಲ್ ಡಿಮಾಂಡ್ ಬಂದಿದೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಹೋಟೆಲ್ ಮಾಲೀಕರು ರೂಮ್ ದರವನ್ನು ಮೂರು ಪಟ್ಟು ಹೆಚ್ಚಿಸಿದ್ದಾರೆ. ಸದ್ಯ ಒಂದು ಎಸಿ ರೂಮ್‌ಗೆ ₹6,500 ಹಾಗೂ ನಾನ್ ಎಸಿ ರೂಮ್‌ಗೆ ₹6,000 ವರೆಗೆ ದರ ವಸೂಲಿ ಮಾಡಲಾಗುತ್ತಿದೆ. ದರ ಹೆಚ್ಚಿದ್ದರೂ ರೂಮ್‌ಗಳು ಸಿಗದೆ ಪ್ರವಾಸಿಗರು ವಾಪಸ್ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿರೂಪಾಕ್ಷನ ದರ್ಶನ ಪಡೆದು ಸ್ಮಾರಕಗಳ ವೀಕ್ಷಣೆ 

ಹಂಪಿಗೆ ಆಗಮಿಸುತ್ತಿರುವ ಪ್ರವಾಸಿಗರು ಮೊದಲು ಶ್ರೀ ವಿರೂಪಾಕ್ಷೇಶ್ವರ ದೇವಾಲಯಕ್ಕೆ ತೆರಳಿ ದೇವರ ದರ್ಶನ ಪಡೆಯುತ್ತಿದ್ದಾರೆ. ನಂತರ ಹಂಪಿಯ ಕಲ್ಲಿನ ತೇರು, ಉಗ್ರ ನರಸಿಂಹ ಮೂರ್ತಿ, ಮಹಾನವಮಿ ದಿಬ್ಬ ಹಾಗೂ ಸಾಸಿವೆಕಾಳು ಗಣಪತಿ ಸೇರಿದಂತೆ ವಿವಿಧ ಐತಿಹಾಸಿಕ ಸ್ಮಾರಕಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ. ಸ್ಮಾರಕಗಳ ಮುಂದೆ ಫೋಟೋ ಹಾಗೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ದೃಶ್ಯಗಳು ಎಲ್ಲೆಡೆ ಕಂಡುಬರುತ್ತಿವೆ.

ಜಲಾಶಯ ಮತ್ತು ಪ್ರಾಣಿ ಸಂಗ್ರಹಾಲಯಕ್ಕೆ ಭೇಟಿ

ಹಂಪಿಯ ಸ್ಮಾರಕಗಳ ಜೊತೆಗೆ ತುಂಗಭದ್ರಾ ಜಲಾಶಯ (TB Dam), ಹಂಪಿ ಪ್ರಾಣಿ ಸಂಗ್ರಹಾಲಯ (Zoo) ಹಾಗೂ ದರೋಜಿ ಕರಡಿಧಾಮಕ್ಕೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ. ಹನುಮಂತನ ಜನ್ಮಸ್ಥಳ ಅಂಜನಾದ್ರಿ ಬೆಟ್ಟಕ್ಕೆ ಸಾವಿರಾರು ಭಕ್ತರು ಮತ್ತು ಪ್ರವಾಸಿಗರು ಆಗಮಿಸುತ್ತಿದ್ದು, ಹೊಸ ವರ್ಷದ ಮುನ್ನಾದಿನ ವಿಜಯನಗರ ಜಿಲ್ಲೆಯ ಪ್ರವಾಸೋದ್ಯಮಕ್ಕೆ ದೊಡ್ಡ ಚೈತನ್ಯ ಬಂದಂತಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಈ ಕೆಟ್ಟ ವ್ಯವಸ್ಥೆಯಲ್ಲಿ ಆಗಲ್ಲ, 4 ಕೋಟಿ ತೆರಿಗೆ ಕಟ್ಟುತ್ತಿರುವ ಬೆಂಗಳೂರು ಕಂಪನಿ ವಿದೇಶಕ್ಕೆ ಶಿಫ್ಟ್
ರಾಜ್ಯದಲ್ಲಿ ಡ್ರಗ್ ಫ್ಯಾಕ್ಟರಿಗಳ ಅಟ್ಟಹಾಸ: ಗುಪ್ತಚರ ಇಲಾಖೆ ನಿದ್ದೆ ಮಾಡ್ತಿದೆಯೇ?- ಆರ್. ಅಶೋಕ್