ಉಮೇಶ್ ಕತ್ತಿ ನಿಧನ: ಬೆಳಗಾವಿ ಜಿಲ್ಲೆಯಾದ್ಯಂತ ಒಂದು ದಿನದ ಶೋಕಾಚರಣೆ!

By Govindaraj S  |  First Published Sep 7, 2022, 11:08 AM IST

ಸಚಿವ ಉಮೇಶ್​ ಕತ್ತಿ ನಿಧನ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಒಂದು ದಿನದ ಶೋಕಾಚರಣೆ ಘೋಷಣೆ ಮಾಡಲಾಗಿದೆ. ರಾಷ್ಟ್ರಧ್ವಜ ಹಾರಿಸಲ್ಪಡುವ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಅರ್ಧಮಟ್ಟದಲ್ಲಿ ಹಾರಿಸಲು ಸೂಚನೆ ನೀಡಲಾಗಿದೆ.


ಬೆಳಗಾವಿ (ಸೆ.07): ಸಚಿವ ಉಮೇಶ್​ ಕತ್ತಿ ನಿಧನ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲೆಯಾದ್ಯಂತ ಸರ್ಕಾರಿ ಕಚೇರಿಗಳಲ್ಲಿ ಒಂದು ದಿನದ ಶೋಕಾಚರಣೆ ಘೋಷಣೆ ಮಾಡಲಾಗಿದೆ. ರಾಷ್ಟ್ರಧ್ವಜ ಹಾರಿಸಲ್ಪಡುವ ಸರ್ಕಾರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಅರ್ಧಮಟ್ಟದಲ್ಲಿ ಹಾರಿಸಲು ಸೂಚನೆ ನೀಡಲಾಗಿದ್ದು, ಬೆಳಗಾವಿ ಜಿಲ್ಲೆಯಾದ್ಯಂತ ಇಂದು ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ ಎಂದು ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಆದೇಶ ಹೊರಡಿಸಿದ್ದಾರೆ.

ಹೃದಯಾಘಾತದಿಂದ ನಿಧನ: ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಅರಣ್ಯ ಖಾತೆ ಸಚಿವ ಉಮೇಶ್‌ ಕತ್ತಿ ಅವರು ಮಂಗಳವಾರ ರಾತ್ರಿ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬೆಳಗಾವಿ ಜಿಲ್ಲೆಯ ತಮ್ಮ ಸ್ವಕ್ಷೇತ್ರ ಹುಕ್ಕೇರಿ ಪ್ರವಾಸದಿಂದ ಬೆಂಗಳೂರಿಗೆ ವಾಪಸಾಗಿದ್ದ ಅವರು ರಾತ್ರಿ ಭೋಜನ ಸ್ವೀಕರಿಸಿದ ಬಳಿಕ ಶೌಚಾಲಯಕ್ಕೆ ತೆರಳಿದ ವೇಳೆ ಹೃದಯಾಘಾತ ಸಂಭವಿಸಿದೆ. ಅಲ್ಲೇ ಕುಸಿದು ಬಿದ್ದಿದ್ದ ಅವರನ್ನು ಸಮೀಪದ ಎಂ.ಎಸ್‌.ರಾಮಯ್ಯ ಆಸ್ಪತ್ರೆಗೆ ಕರೆತಂದರೂ ಯಾವುದೇ ಪ್ರಯೋಜನವಾಗಲಿಲ್ಲ.

Tap to resize

Latest Videos

RIP Umesh Katti ಹೃದಯಾಘಾತದಿಂದ ಸಚಿವ ಉಮೇಶ್ ಕತ್ತಿ ನಿಧನ, ಸಿಎಂ ಬೊಮ್ಮಾಯಿ ಸಂತಾಪ!

ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ವೈದ್ಯರು ತಪಾಸಣೆ ನಡೆಸಿದಾಗ ಎದೆಬಡಿತ ಸ್ಥಗಿತಗೊಂಡಿರುವುದು ಪತ್ತೆಯಾಗಿದೆ. ಎದೆ ಭಾಗದಲ್ಲಿ ಪಂಪ್‌ ಮಾಡಿ 30 ನಿಮಿಷಗಳ ಕಾಲ ತುರ್ತು ಚಿಕಿತ್ಸೆ ನೀಡಿದರೂ ಉಸಿರಾಟ ಆರಂಭವಾಗಲಿಲ್ಲ. ಆ ಬಳಿಕ ಸಚಿವರು ಮೃತಪಟ್ಟಿದ್ದಾರೆ ಎಂದು ವೈದ್ಯರು ದೃಢೀಕರಿಸಿದರು. ವೈದ್ಯರ ಮಾಹಿತಿ ಅನುಸಾರ ಕತ್ತಿ ಅವರು ತಮ್ಮ ನಿವಾಸದಲ್ಲಿಯೇ ಕೊನೆ ಉಸಿರು ಎಳೆದಿದ್ದಾರೆ.

ಕತ್ತಿ ಅವರಿಗೆ 61 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರ ಅಂತ್ಯಕ್ರಿಯೆಯನ್ನು ಹುಟ್ಟೂರಾದ ಬೆಲ್ಲದ ಬಾಗೇವಾಡಿಯಲ್ಲಿ ಬುಧವಾರ ನೆರವೇರಿಸಲಾಗುವುದು. ಅದಕ್ಕೂ ಮೊದಲು ಬೆಳಗ್ಗೆ ಅವರ ಬೆಂಗಳೂರು ನಿವಾಸದ ಬಳಿ ಸಾರ್ವಜನಿಕರಿಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಳಿಕ ವಿಶೇಷ ವಿಮಾನದಲ್ಲಿ ಹುಟ್ಟೂರಿಗೆ ಕೊಂಡೊಯ್ಯಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಕತ್ತಿ ಅವರನ್ನು ಆಸ್ಪತ್ರೆಗೆ ಕರೆತಂದ ಸುದ್ದಿ ತಿಳಿಯುತ್ತಿದ್ದಂತೆಯೇ ಅವರ ಆಪ್ತರು ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳು ಆಸ್ಪತ್ರೆಗೆ ಧಾವಿಸಿ ಬಂದರು. ಕೆಲಹೊತ್ತಿನ ಬಳಿಕ ಮಳೆ ಹಾನಿ ಸಂಬಂಧ ರಾತ್ರಿ ಹೊತ್ತಿನಲ್ಲಿ ಮಹದೇವಪುರ ವಲಯದಲ್ಲಿ ಪರಿಶೀಲನೆ ನಡೆಸಲು ತೆರಳಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೂ ಆಗಮಿಸಿದರು. ಬೊಮ್ಮಾಯಿ ಹಾಗೂ ಸಚಿವರು, ಶಾಸಕರು ಕತ್ತಿ ನಿಧನಕ್ಕೆ ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಹಿಂದೆ 2 ಬಾರಿ ಹೃದಯಾಘಾತ: ಉಮೇಶ್‌ ಕತ್ತಿ ಅವರಿಗೆ ಈ ಹಿಂದೆ ಎರಡು ಬಾರಿ ಹೃದಯಾಘಾತವಾಗಿತ್ತು. ಆ ವೇಳೆ ಸ್ಟೆಂಟ್‌ಗಳನ್ನು ಅಳವಡಿಸಲಾಗಿತ್ತು. ಅಗತ್ಯ ಚಿಕಿತ್ಸೆ ಬಳಿಕ ಅವರು ಚೇತರಿಸಿಕೊಂಡಿದ್ದರು. ಆದರೆ, ಮೂರನೇ ಬಾರಿಯ ಹೃದಯಾಘಾತ ಅವರ ಜೀವವನ್ನೇ ಪಡೆಯಿತು. ಕತ್ತಿ ಅವರ ತಂದೆಗೂ ಹೃದಯ ಸಂಬಂಧಿ ಕಾಯಿಲೆಯಿತ್ತು.

ಮುರುಘಾ ಶ್ರೀಗಳ ವಿರುದ್ಧ ಆರೋಪಿಸಿದ್ದು ತಪ್ಪು: ಉಮೇಶ್ ಕತ್ತಿ

ಶೌಚಾಲಯದ ಬಾಗಿಲು ಒಡೆದರು: ಉಮೇಶ್‌ ಕತ್ತಿ ಅವರು ರಾತ್ರಿ ಊಟ ಮಾಡಿದ ಕೆಲಹೊತ್ತಿನ ಬಳಿಕ ಶೌಚಾಲಯಕ್ಕೆ ತೆರಳಿದ್ದರು. ಕೆಲ ಸಮಯವಾದರೂ ಹೊರ ಬಾರದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರು ಬಾಗಿಲು ಬಡಿದಿದ್ದಾರೆ. ಆಗಲೂ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಕಾರಣ ಸಹಾಯಕರು ಶೌಚಾಲಯದ ಬಾಗಿಲು ಒಡೆದು ಒಳಗೆ ಹೋಗಿ ನೋಡಿದಾಗ ಕತ್ತಿ ಅವರು ಕುಸಿದು ಬಿದ್ದಿರುವುದು ಕಂಡು ಬಂತು. ತಕ್ಷಣ ಕಾರಿನಲ್ಲಿ ಆಸ್ಪತ್ರೆಗೆ ಕರೆತರಲಾಯಿತಾದರೂ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

click me!