'ದೇಶದ ಪ್ರಪ್ರಥಮ ಇ-ಗ್ರಂಥಾಲಯಕ್ಕೆ ದಾಖಲೆಯ 5 ಲಕ್ಷ ನೋಂದಣಿ'

By Kannadaprabha NewsFirst Published Sep 25, 2020, 9:48 AM IST
Highlights

ಗುರುವಾರದವರೆಗೆ ರಾಜ್ಯಾದ್ಯಂತ 5.02 ಲಕ್ಷ ಮಂದಿ ನೋಂದಣಿ| ವಿವಿಧ ಜಾಲತಾಣಗಳ ಲಿಂಕ್ಸ್‌ಗಳನ್ನು ಕರ್ನಾಟಕ ಡಿಜಿಟಲ್‌ ಸಾರ್ವಜನಿಕ ಗ್ರಂಥಾಲಯ ಜಾಲತಾಣದಲ್ಲಿ ಒದಗಿಸಲಾಗಿದೆ| ಕನ್ನಡದಲ್ಲಿ ಸುಮಾರು 4200ಕ್ಕೂ ಹೆಚ್ಚು ಇ-ಪುಸ್ತಕಗಳಿಗೆ ಮತ್ತು ಕನ್ನಡ ಭಾಷೆಯಲ್ಲಿ ಸುಮಾರು 600 ಕ್ಕೂ ಹೆಚ್ಚು ವಿಡಿಯೋ ಲಭ್ಯ| 

ಬೆಂಗಳೂರು(ಸೆ.25): ದೇಶದಲ್ಲಿಯೇ ಪ್ರಪ್ರಥಮವಾಗಿ ರಾಜ್ಯ ಗ್ರಂಥಾಲಯ ಇಲಾಖೆ ಅನುಷ್ಠಾನಗೊಳಿಸಿದ ಡಿಜಿಟಲ್‌ ಗ್ರಂಥಾಲಯ ಯೋಜನೆಗೆ 5 ಲಕ್ಷಕ್ಕೂ ಹೆಚ್ಚು ಮಂದಿ ನೋಂದಾಯಿಸಿದ್ದು, ದಾಖಲೆ ಸಂಖ್ಯೆಯ ಓದುಗರು ಇದರ ಪ್ರಯೋಜನ ಪಡೆದಿದ್ದಾರೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಕೋವಿಡ್‌-19 ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ದಿನಗಳಲ್ಲಿ ಇಲಾಖೆಯು ಸಾರ್ವಜನಿಕರಲ್ಲಿ ಓದುವ ಸಂಸ್ಕೃತಿಯನ್ನು ಬೆಳೆಸಲು ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಸಾರ್ವಜನಿಕ ಗ್ರಂಥಾಲಯಗಳನ್ನು ತಂತ್ರಜ್ಞಾನ ಮತ್ತು ಡಿಜಿಟಲ್‌ ಮೂಲಸೌಕರ್ಯದೊಂದಿಗೆ ಆಧುನೀಕರಿಸುವ ಮಹತ್ವಾಕಾಂಕ್ಷೆಯ ಯೋಜನೆ ಕೈಗೆತ್ತಿಕೊಂಡಿತ್ತು ಎಂದು ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಾಜ್ಯಾದ್ಯಂತ ಈ ಯೋಜನೆ ಅಡಿಯಲ್ಲಿ 26 ನಗರ ಕೇಂದ್ರ ಗ್ರಂಥಾಲಯಗಳು, 30 ಜಿಲ್ಲಾ ಕೇಂದ್ರ ಗ್ರಂಥಾಲಯಗಳು, 216 ತಾಲೂಕು ಗ್ರಂಥಾಲಯಗಳು ಸೇರಿ ಒಟ್ಟು 272 ಸಾರ್ವಜನಿಕ ಗ್ರಂಥಾಲಯಗಳಲ್ಲಿ ಪ್ರಥಮ ಹಂತವಾಗಿ ಡಿಜಿಟಲ್‌ ಗ್ರಂಥಾಲಯ ಸೌಲಭ್ಯವನ್ನು ಒದಗಿಸಲಾಗಿದೆ. ಸೆ.23ರವರೆಗೆ ರಾಜ್ಯಾದ್ಯಂತ ಒಟ್ಟು 5,02,512 ಸದಸ್ಯರು ಡಿಜಿಟಲ್‌ ಗ್ರಂಥಾಲಯದಲ್ಲಿ ನೋಂದಣಿಯಾಗಿದ್ದಾರೆ. ಸಾರ್ವಜನಿಕರು ಬಹಳ ಪರಿಣಾಮಕಾರಿಯಾಗಿ ಇದರ ಪ್ರಯೋಜನ ಪಡೆಯುತ್ತಿರುವುದು ಇಲಾಖೆಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ಡಿಜಿಟಲ್ ಗ್ರಂಥಾಲಯ ಉದ್ಘಾಟನೆ

ಶ್ಯೆಕ್ಷಣಿಕ ಮತ್ತು ಕಲಿಕೆಗೆ ಅಗತ್ಯವಿರುವ ಎಲ್ಲಾ ವಿಭಾಗಗಳಲ್ಲಿನ ವಿಷಯಗಳಿಗೆ ಸಂಬಂಧಿಸಿದ ಇತ್ತೀಚಿನ ತಂತ್ರಜ್ಞಾನದೊಂದಿಗೆ ಡಿಜಿಟಲ್‌ ಗ್ರಂಥಾಲಯ ಸ್ಥಾಪಿಸಲಾಗಿದ್ದು ವಿಷಯವಾರು ಇ-ಕಂಟೆಂಟ್‌ಗಳನ್ನು ನೂತನವಾಗಿ ಅಳವಡಿಸಲಾಗಿದೆ. ಈ ಉಪಕ್ರಮವು ಕನ್ನಡ, ಆಂಗ್ಲ, ಹಿಂದಿ, ಉರ್ದು, ಮರಾಠಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಪಾಠಗಳನ್ನು ಒದಗಿಸುತ್ತದೆ. ರಾಜ್ಯ ಮತ್ತು ಸಿಬಿಎಸ್‌ಇ ಮಂಡಳಿಯ ಪಠ್ಯಕ್ರಮದ ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು ಡಿಜಿಟಲ್‌ ರೂಪದಲ್ಲಿ ಮಾಹಿತಿಯನ್ನು ಸಹ ಒದಗಿಸುತ್ತದೆ. ಕಲೆ, ವ್ಯಕ್ತಿತ್ವ ಕೌಶಲ್ಯ ಮತ್ತು ಸಾಹಿತ್ಯವನ್ನು ಒಳಗೊಂಡಂತೆ ಶಾಲೆ-ಕಾಲೇಜು ಮುಂತಾದ ವಿವಿಧ ವಿಷಯಗಳಿಗೆ ಸಂಬಂಧಿಸಿದ ಸುಮಾರು 5000ಕ್ಕೂ ಹೆಚ್ಚು ಕನ್ನಡ ವಿಷಯಗಳಿವೆ ಎಂದಿದ್ದಾರೆ.

ನಿರ್ದಿಷ್ಟವಾಗಿ ರಾಜ್ಯ ಮತ್ತು ಸಿಬಿಎಸ್‌ಇ ಶಾಲಾ ಮಕ್ಕಳಿಗೆ ಪಠ್ಯಕ್ರಮದ ಪ್ರಕಾರ ಇ-ಪುಸ್ತಕಗಳು ಮತ್ತು ವಿಡಿಯೋಗಳನ್ನು ಒದಗಿಸಲಾಗಿದ್ದು, 1 ರಿಂದ 12ನೇ ತರಗತಿಯವರೆಗೆ ಸಂಪೂರ್ಣ ವಿಷಯಗಳನ್ನು ಒಳಗೊಂಡಿದೆ. ಕನ್ನಡದಲ್ಲಿ ಸುಮಾರು 4200ಕ್ಕೂ ಹೆಚ್ಚು ಇ-ಪುಸ್ತಕಗಳಿಗೆ ಮತ್ತು ಕನ್ನಡ ಭಾಷೆಯಲ್ಲಿ ಸುಮಾರು 600 ಕ್ಕೂ ಹೆಚ್ಚು ವಿಡಿಯೋಗಳಿವೆ ಎಂದು ಸುರೇಶ್‌ ಕುಮಾರ್‌ ತಿಳಿಸಿದ್ದಾರೆ. ಸಾರ್ವಜನಿಕರು ಡಿಜಿಟಲ್‌ ಗ್ರಂಥಾಲಯ ಆ್ಯಪ್‌ ಡೌನ್ಲೋಡ್‌ ಮಾಡಿಕೊಳ್ಳುವ ಮೂಲಕ ಓದುವುದರಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಇಲಾಖೆಯ ಸೌಲಭ್ಯಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಸುರೇಶ್‌ ಕುಮಾರ್‌ ಕೋರಿದ್ದಾರೆ.

ಸಾವರ್ಜನಿಕ ಸೇವೆಗೆ ಮೊಬೈಲ್‌ ಆ್ಯಪ್‌

ಡಿಜಿಟಲ್‌ ಗ್ರಂಥಾಲಯವನ್ನು ಮೊಬೈಲ್‌ ಮೂಲಕ ವೀಕ್ಷಿಸಲು ​e-sarvajanikagranthalaya ಆ್ಯಪ್‌ ಅನ್ನು ಸಾರ್ವಜನಿಕ ಸೇವೆಗೆ ಒದಗಿಸಲಾಗಿದೆ. ವಿವಿಧ ಜಾಲತಾಣಗಳ ಲಿಂಕ್ಸ್‌ಗಳನ್ನು ಕರ್ನಾಟಕ ಡಿಜಿಟಲ್‌ ಸಾರ್ವಜನಿಕ ಗ್ರಂಥಾಲಯ ಜಾಲತಾಣದಲ್ಲಿ ಒದಗಿಸಲಾಗಿದೆ. ‘ಕನ್ನಡಪ್ರಭ’ ಸೇರಿದಂತೆ ವಿವಿಧ ದಿನಪತ್ರಿಕೆಗಳ ಲಿಂಕ್‌ಗಳನ್ನು ಕರ್ನಾಟಕ ಡಿಜಿಟಲ್‌ ಜಾಲತಾಣದಲ್ಲಿ ಅಳವಡಿಸಲಾಗಿದೆ ಎಂದು ತಿಳಿಸಿದ್ದಾರೆ.
 

click me!