ಶಿವಮೊಗ್ಗ (ಜೂ.13): ವೈದ್ಯರ ಹುದ್ದೆ ಸಮಾಜದಲ್ಲಿ ಮಾನ್ಯತೆ ಪಡೆದ ಗೌರವಯುತ ಹುದ್ದೆಯಾಗಿದ್ದು, ಸರ್ಕಾರಿ ಕರ್ತವ್ಯಕ್ಕೆ ನಿಯೋಜಿಯವಾಗಿರುವ ವೈದ್ಯರು ಖಾಸಗಿಯಾಗಿ ಕೆಲಸ ನಿರ್ವಹಿಸುವುದು ಸರಿಯಲ್ಲ ಎಂದು ಸಚಿವ ಡಾ.ಸುಧಾಕರ್ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ಸಿಮ್ಸ್ ವೈದ್ಯಕೀಯ ಸಂಸ್ಥೆಗೆ ಭೇಟಿ ನೀಡಿ, ಕೊರೋನಾ ಸೋಂಕು ನಿಯಂತ್ರಿಸುವಲ್ಲಿ ಆರೋಗ್ಯ ಇಲಾಖೆ ವತಿಯಿಂದ ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವೈದ್ಯಾಧಿಕಾರಿಗಳು ಹಾಗೂ ಅಲ್ಲಿನ ಸಿಬ್ಬಂದಿಯೊಂದಿಗೆ ಸಮಾಲೋಚನೆ ನಡೆಸಿ, ಮಾಹಿತಿ ಪಡೆದ ಅವರು ಸರ್ಕಾರಿ ವೈದ್ಯರು ಖಾಸಗಿಯಾಗಿ ಪ್ರ್ಯಾಕ್ಟೀಸ್ ಮಾಡಬಾರದು ಎಂದು ಸೂಚಿಸಿದರು.
5 ಕೇಸ್ ಪತ್ತೆಯಾದ್ರೆ ಹಳ್ಳಿ ಸೀಲ್‌ಡೌನ್: ಸಚಿವ ಸುಧಾಕರ್ ..
ಸ್ವಯಂ ಪ್ರೇರಿತವಾಗಿ ಕಾರ್ಯಕ್ಷೇತ್ರವನ್ನು ಆಯ್ಕೆ ಮಾಡಿಕೊಂಡು ಕರ್ತವ್ಯಕ್ಕೆ ನಿಯೋಜಿತರಾಗಿರುವ ವೈದ್ಯರು ಒತ್ತಾಯಪೂರ್ವಕವಾಗಿ ಕಾರ್ಯನಿರ್ವಹಿಸುವುದು ಸರಿಯಲ್ಲ. ಪ್ರಸ್ತುತ ಹಿರಿಯ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ವೈದ್ಯರಿಗೆ ಸುಮಾರು 2 ಲಕ್ಷದಿಂದ 3ಲಕ್ಷ ರು. ವೇತನ ನೀಡಲಾಗುತ್ತಿದೆ. ವೈದ್ಯರ ಹುದ್ದೆ ಸಮಾಜದಲ್ಲಿ ಮಾನ್ಯತೆ ಪಡೆದ ಗೌರವಯುತ ಹುದ್ದೆಯಾಗಿದ್ದು, ಆ ಗೌರವವನ್ನು ಉಳಿಸುವುದು ವೈದ್ಯರ ಜವಾಬ್ದಾರಿಯಾಗಿದೆ ಎಂದರು.
ರಾಜ್ಯದಲ್ಲಿ ಹೊಸ ವ್ಯವಸ್ಥೆ ತರಲು ಆದೇಶಿಸಲಾಗಿದೆ. ಪ್ರತಿ ಐಸಿಯು, ವಾರ್ಡ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ತೀರ್ಮಾನಿಸಲಾಗಿದೆ. ಜೊತೆಗೆ ಜಿಯೋ ಫೆನ್ಸಿಂಗ್ ತಂತ್ರಜ್ಞಾನ ತರಲಾಗುತ್ತಿದೆ. ಸಿಬ್ಬಂದಿ ಅಥವಾ ವೈದ್ಯರು ಸಂಸ್ಥೆಯಿಂದ ಹೊರಗೆ 100 ಮೀ. ದೂರ ಹೋದರೆ ಈ ತಂತ್ರಜ್ಞಾನದಲ್ಲಿ ಗೊತ್ತಾಗುತ್ತದೆ. ಬಯೋಮೆಟ್ರಿಕ್‌ನಲ್ಲಿ ಪಂಚ್ ಮಾಡಿ ಹೋದರೆ ಗೊತ್ತಾಗದೇ ಹೋಗಬಹುದು. ಆದರೆ ಈ ಹೊಸ ತಂತ್ರಜ್ಞಾನದಿಂದ ಕರ್ತವ್ಯದ ಅವಧಿಯಲ್ಲಿ ಹೊರಗೆ ಹೋದರೆ ತಿಳಿದುಬರುತ್ತದೆ ಎಂದು ತಿಳಿಸಿದರು.