ರಾಜ್ಯದಲ್ಲಿ ಕೊರೋನಾ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಜನರಲ್ಲಿ ಆತಂಕ ಮೂಡಿಸಿದೆ. ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ. ಮತ್ತೆ ಶಾಲೆ ಶಾಲೆ ಪುನಾರಂಭ ಮತ್ತು ಮತ್ತೆ ಲಾಕ್‌ಡೌನ್ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಸರ್ಕಾರ ನಿಲುವು ಏನಿದೆ ಎನ್ನುವುದನ್ನು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಮಾಹಿತಿ ಹಂಚಿಕೊಂಡಿದ್ದಾರೆ.
ಬೆಳಗಾವಿ, (ಜೂ..22): ಕೋವಿಡ್-19 ನಿಯಂತ್ರಣಕ್ಕೆ ರಾಜ್ಯ ಸರ್ಕಾರಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಇನ್ನು ಮುಂದೆ ಲಾಕ್ ಡೌನ್ ಪರಿಸ್ಥಿತಿ ಮುಂದುವರಿಯುವುದಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ತಿಳಿಸಿದ್ದಾರೆ.
ಸಚಿವರಾದ ಮೊದಲ ಬಾರಿಗೆ ಬೆಳಗಾವಿಗೆ ಆಗಮಿಸಿದ್ದ ಅವರು ಬಿಜೆಪಿ ಕಚೇರಿಯಲ್ಲಿ ಕಾರ್ಯಕರ್ತರ ಸ್ವಾಗತ ಸ್ವೀಕರಿಸಿ ಮಾತನಾಡಿದರು. ಕಾರ್ಮಿಕರು ಧೈರ್ಯವಾಗಿ ಹೋಗಿ ಕೆಲಸ ಮಾಡಬೇಕು. ರಾಜ್ಯ ಹಾಗು ರಾಷ್ಟ್ರದ ಪ್ರಗತಿಗಾಗಿ ಗಟ್ಟಿಯಾದ ಹೆಜ್ಜೆಗಳನ್ನು ಇಡಬೇಕಾದ ವೇಳೆಯಲ್ಲಿ ನಾವೆಲ್ಲರೂ ಇದ್ದೇವೆ ಎಂದು ಹೇಳಿದರು.
undefined
ಬೆಂಗ್ಳೂರಲ್ಲಿ ನಿಯಂತ್ರಣ ತಪ್ಪಿದ ಕೊರೋನಾ, ಯಾವಾಗ ವೀರ ಮದಕರಿ ಚಿತ್ರೀಕರಣ; ಜೂ.22ರ ಟಾಪ್ 10 ಸುದ್ದಿ!
ಶಿಕ್ಷಣ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲಾ ಕ್ಷೇತ್ರಗಳಲ್ಲೂ ಲಾಕ್‌ಡೌನ್ ನಿರ್ಬಂಧಗಳನ್ನು ನಿಧಾನವಾಗಿ ಕಡಿಮೆ ಮಾಡಲಾಗುತ್ತದೆ. ಮಕ್ಕಳ ವಿಷಯದಲ್ಲಿ ಪ್ರಧಾನಿ ಹಾಗು ಮುಖ್ಯಮಂತ್ರಿಗಳು ಬಹಳ ಎಚ್ಚರಿಕೆಯ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಒಂದು ವರ್ಷ ಮಕ್ಕಳ ಭವಿಷ್ಯವನ್ನು ಕಳೆದು ಕೊಳ್ಳುತ್ತೇವೆ. ಆದರೆ, ಒಂದು ಮಗುವನ್ನು ಕೋವಿಡ್-19ನಿಂದ ಕಳೆದುಕೊಳ್ಳುವುದಕ್ಕೆ ಸಿದ್ಧವಿಲ್ಲ ಎಂದು ಹೇಳಿದರು.
ಜನರಿಗೆ ಧೈರ್ಯ ಬರುವವರೆಗೂ ಶಾಲೆ ಪ್ರಾರಂಭವಿಲ್ಲ
ಶಾಲೆ ಆರಂಭ ಬಗ್ಗೆ ಪ್ರತಿಕ್ರಿಯಿಸಿ, ಮಕ್ಕಳು ಹಾಗು ಪೋಷಕರ ಮೇಲೆ ಏನನ್ನೂ ಹೇರಿಕೆ ಮಾಡುವುದಿಲ್ಲ. ಎಲ್ಲಿಯವರೆಗೆ ಪೋಷಕರಲ್ಲಿ ಧೈರ್ಯ ಬರುವುದಿಲ್ಲವೋ ಅಲ್ಲಿವರೆಗೆ ಶಾಲೆಯನ್ನು ಆರಂಭ ಮಾಡುವಂತಹ ಹುಚ್ಚು ನಿರ್ಣಯ ಮಾಡುವುದಕ್ಕೆ ಸರ್ಕಾರ ತಯಾರಿಲ್ಲ. ಸಚಿವ ಸಂಪುಟದಲ್ಲಿ ಈ ಬಗ್ಗೆ ಹಲವು ಬಾರಿ ಚರ್ಚಿಸಲಾಗಿದೆ. ಸಾರಿಗೆ ಬಸ್ ಓಡಿಸುತ್ತಿದ್ದೇವೆ. ಆದರೆ, ಜನರೇ ಬರುತ್ತಿಲ್ಲ. ಹೀಗಾಗಿ ಜನರಿಗೆ ಧೈರ್ಯ ಬರುವವರೆಗೂ ಶಾಲೆಗಳನ್ನು ಆರಂಭಿಸುವುದು ಸರಿಯಲ್ಲ ಎಂದು ನಿರ್ಣಯ ಮಾಡಿದ್ದೇವೆ ಎಂದರು.
SSLC ಪರೀಕ್ಷೆ ಸವಾಲಾಗಿ ಸ್ವೀಕರಿಸಿದ್ದೇವೆ ಎಂದ ಹೆಬ್ಬಾರ್.
ಇನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬಗ್ಗೆ ಮಾತನಾಡಿದ ಅವರು, ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಮಕ್ಕಳ ಸುರಕ್ಷತೆಗಾಗಿ ಎಲ್ಲ ರೀತಿಯ ಸಿದ್ಧತೆಯನ್ನೂ ಮಾಡಿಕೊಳ್ಳಲಾಗಿದೆ. ಪಕ್ಷದ ಕಾರ್ಯಕರ್ತರು ಹಾಗೂ ಪದಾಧಿಕಾರಿಗಳು ಸಹಕಾರ ಕೊಡಬೇಕು. ಜನಪ್ರತಿನಿಧಿಗಳು ಕೂಡ ನೆರವಾಗಬೇಕು ಎಂದು ಹೇಳಿದರು. ಈ ವೇಳೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಉಪಸ್ಥಿತರಿದ್ದರು.