
ವರದಿ: ಶಶಿಧರ ಮಾಸ್ತಿಬೈಲು, ಏಷ್ಯಾನೆಟ್ ಸುವರ್ಣ ನ್ಯೂಸ್, ಉಡುಪಿ
ಉಡುಪಿ (ನ.11): ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ದೇವಾಲಯಗಳಲ್ಲಿ ಮುದ್ರಾ ಧಾರಣೆಗೆ ಅವಕಾಶವಿಲ್ಲ ಎಂಬ ಆದೇಶವನ್ನು ವಾಪಸ್ ಪಡೆಯುವುದಾಗಿ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದ್ದಾಗಿ ಉಡುಪಿ ಶಾಸಕ ಕೆ . ರಘುಪತಿ ಭಟ್ ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ತಿಳಿಸಿದ್ದಾರೆ. ಈ ಕುರಿತು ಬೆಂಗಳೂರಿನಲ್ಲಿ ಸಚಿವೆಯನ್ನು ಭೇಟಿ ಮಾಡಿದ ಶಾಸಕರು, ಮಾಧ್ವ ಸಮುದಾಯದಲ್ಲಿ ಈ ಆದೇಶದ ಬಗ್ಗೆ ವ್ಯಕ್ತ ಗೊಂಡಿರುವ ಆಕ್ರೋಶದ ಬಗ್ಗೆ ಮನವರಿಕೆ ಮಾಡಿದ್ದರು. ಇದು ಮಾಹಿತಿ ಕೊರತೆಯಿಂದ ಆಗಿರುವ ಆದೇಶ.
ಈ ಬಗ್ಗೆ ಸಚಿವರಿಗೆ ಪೂರ್ಣ ಮಾಹಿತಿ ನೀಡಿರುವುದರಿಂದ ಆದೇಶ ವಾಪಾಸು ಪಡೆಯುವ ಭರವಸೆ ನೀಡಿದ್ದಾರೆ. ಮುಂದೆ ಏನಾಗುತ್ತೋ ನೋಡೋಣ ಎಂದು ಶಾಸಕ ಭಟ್ ಹೇಳಿದ್ದಾರೆ. ಈ ವಿಚಾರ ಸಂಬಂಧ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಶಾಸಕರ ಮೂಲಕ ಮೊಬೈಲ್ ನಲ್ಲಿ ಸಚಿವೆ ಜೊತೆ ಮಾತನಾಡಿದ್ದರು. ಈ ಆದೇಶದಿಂದ ಮಾಧ್ವ ತತ್ವ ಅನುಯಾಯಿಗಳಿಗೆ ಆಗಿರುವ, ನೋವನ್ನು ತಿಳಿಸಿದ್ದರು.
ಧಾರ್ಮಿಕ ದತ್ತಿ ದೇವಾಲಯದಲ್ಲಿ ಮುದ್ರಾಧಾರಣೆ ನಿಷೇಧ, ಸರ್ಕಾರದ ಆದೇಶಕ್ಕೆ ಮಾಧ್ವರ ವಿರೋಧ
ಏನಿದು ಆದೇಶ? ಯಾಕೆ ವಿರೋಧ?: ಮುಜರಾಯಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಆಗಮ ಶಾಸ್ತ್ರ ಪದ್ಧತಿ, ಸಂಪ್ರದಾಯಗಳಿಗೆ ವಿರುದ್ಧವಾಗಿ ನಡೆಯುವ ಧಾರ್ಮಿಕ ಸಂಪ್ರದಾಯ ಮತ್ತು ಆಚರಣೆಗಳನ್ನು ನಿಷೇಧಿಸುವ ಕುರಿತು ರಾಜ್ಯ ಧಾರ್ಮಿಕ ಪರಿಷತ್ ನಿರ್ಣಯ ಕೈಗೊಂಡಿತ್ತು. ಈ ಹಿನ್ನೆಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರು ನವೆಂಬರ್ ಎರಡರಂದು ಸುತ್ತೋಲೆ ಹೊರಡಿಸಿದ್ದರು. ಈ ಸುತ್ತೋಲೆಯ ಪ್ರಕಾರ ಮುದ್ರಾ ಧಾರಣೆ, ಜಯಂತಿ ಆಚರಣೆ ಸೇರಿದಂತೆ ಕೆಲ ಪದ್ಧತಿಗಳಿಗೆ ಅವಕಾಶವಿಲ್ಲ ಎಂದು ಹೇಳಲಾಗಿತ್ತು. ಈ ಸುತ್ತೋಲೆಗೆ ವೈಷ್ಣವ ಸಂಪ್ರದಾಯದ ಮಾಧ್ವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೇ ಸಂಪ್ರದಾಯಕ್ಕೆ ಸೇರಿದ ಉಡುಪಿ ಶಾಸಕ ಕೆ. ರಘುಪತಿ ಭಟ್ ಕೂಡ ವಿರೋಧ ವ್ಯಕ್ತಪಡಿಸಿ ಸರಕಾರದ ಗಮನ ಸೆಳೆಯುವುದಾಗಿ ಹೇಳಿದ್ದರು. ಈ ಸುತ್ತೋಲೆಯನ್ನು ವಾಪಾಸು ಪಡೆಯುವಂತೆ ಒತ್ತಡ ವ್ಯಕ್ತವಾಗಿತ್ತು. ಇತ್ತೀಚಿನ ದಿನಗಳಲ್ಲಿ ದೇವಾಲಯದಲ್ಲಿ ನಡೆದು ಬಂದಿರುವ ಪದ್ಧತಿಗಳಿಗೆ ವಿರುದ್ಧವಾಗಿ ಕೆಲ ಧಾರ್ಮಿಕ ಆಚರಣೆಗಳನ್ನು ನಡೆಸಲಾಗುತ್ತಿದೆ. ನಾಮಫಲಕ , ಫೋಟೋ ಇತ್ಯಾದಿಗಳನ್ನು ಅಳವಡಿಸುತ್ತಿರುವ ಬಗ್ಗೆ ಆಕ್ಷೇಪ ಹಾಗೂ ದೂರುಗಳು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆಯ ವ್ಯಾಪ್ತಿಯ ದೇವಾಲಯಗಳಲ್ಲಿ ಆಚರಣೆಯಲ್ಲಿರುವ ಪದ್ಧತಿ ಸಂಪ್ರದಾಯಗಳಿಗೆ ವಿರುದ್ಧವಾದ ಧಾರ್ಮಿಕ ಆಚರಣೆ ನಡೆಸುವುದು ಸರಿಯಲ್ಲ ಎಂಬ ಕಾರಣಕ್ಕೆ ಆದೇಶ ಮಾಡಲಾಗಿತ್ತು.
Udupi; ಅಮೇರಿಕಾದ ಆಸ್ಟಿನ್ ನಗರದಲ್ಲಿ ಪುತ್ತಿಗೆ ಶ್ರೀಗಳಿಂದ ಮುದ್ರಾಧಾರಣೆ
ಪೇಜಾವರ ಶ್ರೀ ಅಭಿನಂದನೆ: ವಿವಾದಕ್ಕೆ ಕಾರಣವಾಗಿದ್ದ ಸುತ್ತೋಲೆಯನ್ನು ವಾಪಾಸು ಪಡೆಯುವ ಭರವಸೆ ನೀಡಿರುವ ಮುಜರಾಯಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅವರ ನಿರ್ಧಾರವನ್ನು ಉಡುಪಿ ಪೇಜಾವರ ಮಠದ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಸ್ವಾಗತಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ