ಕೊರೋನಾ ಲಕ್ಷಣ ಇಲ್ಲದಿದ್ದರೂ ಖಾಸಗಿ ಆಸ್ಪತ್ರೆಗಳು ಚಿಕಿತ್ಸೆ ನೀಡುತ್ತಿವೆ: ಸಚಿವ ಅಶೋಕ್‌

By Kannadaprabha NewsFirst Published Jul 18, 2020, 7:33 AM IST
Highlights

ಕೋವಿಡ್‌ ಸೋಂಕಿಲ್ಲದವರನ್ನು ಇಟ್ಟುಕೊಂಡು ಹಾಸಿಗೆ ಇಲ್ಲ ಎನ್ನುತ್ತಿವೆ: ಅಶೋಕ್‌| ಖಾಸಗಿ ಆಸ್ಪತ್ರೆಗಳ ಈ ಕ್ರಮದಿಂದ ನಿಜವಾಗಿಯೂ ಚಿಕಿತ್ಸೆ ಅಗತ್ಯವಿರುವವರಿಗೆ ಬೆಡ್‌ಗಳು ಲಭ್ಯವಾಗುತ್ತಿಲ್ಲ| ಹೀಗಾಗಿ ಕೂಡಲೇ ರೋಗ ಲಕ್ಷಣಗಳು ಇಲ್ಲದವರನ್ನು ಬಿಡುಗಡೆ ಮಾಡಬೇಕು| ಅಂತಹ ರೋಗಿಗಳನ್ನು ಕೊರೋನಾ ಆರೈಕೆ ಕೇಂದ್ರಗಳು ಅಥವಾ ಹೋಂ ಐಸೊಲೇಷನ್‌ಗೆ ಕಳುಹಿಸಿಕೊಡಲಾಗುವುದು|

ಬೆಂಗಳೂರು(ಜು. 18): ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಲ್ಲಿ ಪ್ಯಾಕೇಜ್‌ ಶುಲ್ಕ ನಿಗದಿ ಮಾಡಿ ಸೋಂಕಿನ ಲಕ್ಷಣಗಳಿಲ್ಲದವರಿಗೂ ಅನಗತ್ಯವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿವೆ. ಅಂತಹ ಸೋಂಕು ಲಕ್ಷಣಗಳಿಲ್ಲದ ಸೋಂಕಿತರನ್ನು ಕೂಡಲೇ ಆಸ್ಪತ್ರೆಯಿಂದ ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗುವುದು’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೊಂದಿಗಿನ ಸಭೆ ಬಳಿಕ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಯವರು ಸೋಂಕು ಲಕ್ಷಣಗಳಿಲ್ಲದವರನ್ನು ಆಸ್ಪತ್ರೆಯಲ್ಲಿ ಇಟ್ಟುಕೊಂಡು, ಹಾಸಿಗೆಗಳು ಲಭ್ಯವಿಲ್ಲ ಎಂದು ಸಬೂಬು ಹೇಳುತ್ತಿವೆ. ಹಲವು ಖಾಸಗಿ ಆಸ್ಪತ್ರೆಗಳು ಲಕ್ಷಣ ಇಲ್ಲದಿದ್ದರೂ ಚಿಕಿತ್ಸೆ ನೀಡುತ್ತಿದ್ದಾರೆ. ಜತೆಗೆ ಅವರಿಂದ ಪ್ಯಾಕೇಜ್‌ ರೀತಿ ಹಣ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ಖಾಸಗಿ ಆಸ್ಪತ್ರೆಗಳ ಈ ಕ್ರಮದಿಂದ ನಿಜವಾಗಿಯೂ ಚಿಕಿತ್ಸೆ ಅಗತ್ಯವಿರುವವರಿಗೆ ಬೆಡ್‌ಗಳು ಲಭ್ಯವಾಗುತ್ತಿಲ್ಲ. ಹೀಗಾಗಿ ಕೂಡಲೇ ರೋಗ ಲಕ್ಷಣಗಳು ಇಲ್ಲದವರನ್ನು ಬಿಡುಗಡೆ ಮಾಡಬೇಕು’ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಆದೇಶ ಹೊರಡಿಸಿದ್ದಾರೆ. ಬಳಿಕ ಅಂತಹ ರೋಗಿಗಳನ್ನು ಕೊರೋನಾ ಆರೈಕೆ ಕೇಂದ್ರಗಳು ಅಥವಾ ಹೋಂ ಐಸೊಲೇಷನ್‌ಗೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.

ಕೊರೋನಾ ಆರ್ಭಟ: 100 ಟಿಟಿ ವಾಹನಗಳು ಆ್ಯಂಬುಲೆನ್ಸಾಗಿ ಪರಿವರ್ತನೆ

ಇಂದು ಸಂಜೆ ಖಾಸಗಿ ಆಸ್ಪತ್ರೆಗಳೊಂದಿಗೆ ಸಭೆ

ಖಾಸಗಿ ಆಸ್ಪತ್ರೆಗಳು ಕೊರೋನಾ ಸೋಂಕಿತರಿಗೆ ಅಗತ್ಯವಿರುವ ಹಾಸಿಗೆಗಳನ್ನು ನೀಡುತ್ತಿಲ್ಲ. ಹೀಗಾಗಿ ಶನಿವಾರ ಸಂಜೆ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಚಿವ ಆರ್‌.ಅಶೋಕ್‌ ತಿಳಿಸಿದರು.

ಸರ್ಕಾರಿ ಆಸ್ಪತ್ರೆಗಳು 5 ಸಾವಿರ ಹಾಸಿಗೆಗಳನ್ನು ನೀಡಬೇಕಿತ್ತು. ಆದರೆ ಈವರೆಗೂ ಅಷ್ಟುಹಾಸಿಗೆಗಳನ್ನು ನೀಡಿಲ್ಲ. ಇದರಿಂದ ಬಹುತೇಕರಿಗೆ ಆರೋಗ್ಯ ಸೇವೆ ದೊರೆಯದಂತಾಗಿದೆ. ಹೀಗಾಗಿ ಪರಸ್ಪರ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸಲು ಮುಖ್ಯಮಂತ್ರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದರು.
 

click me!