'ರಾಮಮಂದಿರ ದೇಣಿಗೆ ಲೆಕ್ಕ ಕೇಳಲು ಕುಮಾರಸ್ವಾಮಿ ಯಾರು?'

By Kannadaprabha NewsFirst Published Feb 19, 2021, 12:07 PM IST
Highlights

ದೇಣಿಗೆ ಸಂಗ್ರಹದಲ್ಲಿ ಅಕ್ರಮ ನಡೆದಿದ್ದರೆ ತೋರಿಸಲಿ| ಮಂದಿರ ನಿರ್ಮಾಣಕ್ಕೆ ಕುಮಾರಸ್ವಾಮಿ ನಯಾಪೈಸೆ ನೀಡಿಲ್ಲ| ಈ ಹಿಂದೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಧರ್ಮದ ಬಗ್ಗೆ ಏನೇನು ಹೇಳಿದ್ದಾರೆ ಎಂದು ಗೊತ್ತಿದೆ| ದೇವೇಗೌಡ ಮುಂದಿನ ಜನ್ಮದಲ್ಲಿ ಎಲ್ಲಿ ಜನ್ಮ ತಾಳಬೇಕು ಎಂದು ಹೇಳಿರುವುದು ಗೊತ್ತಿದೆ: ಅಶೋಕ್‌| 

ಹಾಸನ(ಫೆ.19): ಮುಖ್ಯಮಂತ್ರಿ ಆಗಲು ರಾಜಕೀಯ ಗುರುವನ್ನು ತುಳಿದ ಜನರು ರಾಮನ ಬಗ್ಗೆ ಮಾತನಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಹೊರವಲಯದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ರಾಜ್ಯದ 21 ಪ್ರಕೋಷ್ಠಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಕ್ಕಾಗಿ ಅಹಿಂದ ಬಗ್ಗೆ ಮಾತನಾಡುವವರು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಹಣ ಕೇಳಿದರೆ ಕೆಟ್ಟದಾಗಿ ಮಾತನಾಡುತ್ತಿದ್ದೀರಿ ಎಂದರು.

ಇನ್ನು ನಿಂಬೆಹಣ್ಣು ಹಿಡಿದುಕೊಳ್ಳುವವರು, ದೇವರ ಆರಾಧನೆ ಮಾಡುವಂತವರು, ಜ್ಯೋತಿಷ್ಯ ಕೇಳುವವರು. ರಾಮಮಂದಿರ ನಿರ್ಮಾಣಕ್ಕೆ ಹಣ ಕೇಳಲು ಬರುವವರನ್ನು ಪುಂಡ ಪೋಕರಿಗಳು ಎಂದು ಜರಿಯುತ್ತಾರೆ. ಇದು ಒಳ್ಳೆಯದಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.

ಆರ್‌ಎಸ್‌ಎಸ್‌ ಕಾರ್ಯಕರ್ತರು ಪುಂಡ ಪೋಕರಿಗಳಲ್ಲ, ಹಿಂದೂ ಕಾರ್ಯಕರ್ತರು. ಇವತ್ತು ದೇಶದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಜಾತ್ಯತೀತತೆಯ ಬಗ್ಗೆ ಮಾತನಾಡುವವರು ಒಂದು ದೇವಾಲಯ ನಿರ್ಮಾಣ ಮಾಡಲಿಲ್ಲ. ಮಸೀದಿಗೆ, ಚಚ್‌ರ್‍ಗೆ ನೀವು ಹಣ ಹಾಕಿದಾಗ ನಾವು ಮಾತನಾಡಲಿಲ್ಲ. ಈಗ ರಾಮಮಂದಿರ ನಿರ್ಮಾಣದ ಬಗ್ಗೆ ಮಾತನಾಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಕುಮಾರಸ್ವಾಮಿಯೂ ರಾಮ​ಮಂದಿ​ರಕ್ಕೆ ದೇಣಿಗೆ ನೀಡ​ಬ​ಹು​ದು'

ಸಿದ್ದು, ಎಚ್‌ಡಿಕೆ ಕ್ಷಮೆಯಾಚಿಸಲಿ: ಕಾರ್ಣಿಕ್‌

ಮಂಗಳೂರಿನಲ್ಲಿ ಮಾತನಾಡಿದ ಬಿಜೆಪಿ ವಕ್ತಾರ ಕ್ಯಾ. ಗಣೇಶ್‌ ಕಾರ್ಣಿಕ್‌ ಅವರು, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಕುರಿತಂತೆ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಬೇಜವಾಬ್ದಾರಿಯ ಹೇಳಿಕೆ ನೀಡುತ್ತಿದ್ದು, ಅವರು ನಾಡಿನ ಜನತೆಯ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಸ್ತುತ ರಾಜಕೀಯದಲ್ಲಿ ಮೂಲೆಗುಂಪಾಗಿ ಪಕ್ಷದ ಉಳಿವಿಗಾಗಿ ಒಂದು ವರ್ಗದ ಓಲೈಕೆಗಾಗಿ ರಾಜಕೀಯ ದುರುದ್ದೇಶದಿಂದ ಕುಮಾರಸ್ವಾಮಿ ನೀಡಿರುವ ಹೇಳಿಕೆ ಅವರ ಒಡೆದು ಆಳುವ ಮನಸ್ಸಿಗೆ ಕೈಗನ್ನಡಿಯಾಗಿದೆ. ಅದೇ ರೀತಿ ತಮ್ಮ ಹೇಳಿಕೆಗಳ ಸಮಾಜದಲ್ಲಿ ವಿಷಬೀಜ ಬಿತ್ತಿ ತಮ್ಮ ರಾಜಕೀಯ ಭವಿಷ್ಯವನ್ನು ಭದ್ರಗೊಳಿಸುವ ಉದ್ದೇಶದಿಂದ ಸಿದ್ದರಾಮಯ್ಯ ಅವರ ಹೇಳಿಕೆ ಖಂಡನೀಯ ಎಂದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗುತ್ತಿರುವುದು ವಿವಾದಿತ ಸ್ಥಳದಲ್ಲಿ ಎಂಬ ಸಿದ್ದರಾಮಯ್ಯ ಅವರ ಹೇಳಿಕೆ ಸವೋಚ್ಚ ನ್ಯಾಯಾಲಯದ ತೀರ್ಪನ್ನು ಧಿಕ್ಕರಿಸುವಂತಾಗಿದೆ ಎಂದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧೀರ್‌ ಶೆಟ್ಟಿಕಣ್ಣೂರು, ಜಿಲ್ಲಾ ವಕ್ತಾರ ರಣದೀಪ್‌ ಇದ್ದರು.

ರಾಮ ಮಂದಿರ ದೇಣಿಗೆ; ವಿವಾದಾತ್ಮಕ ಹೇಳಿಕೆ ನೀಡಿ ಕೈಸುಟ್ಟುಕೊಂಡ ಹೆಚ್‌ಡಿಕೆ, ಸಿದ್ದು!

ರಾಮನ ಲೆಕ್ಕ ಕೇಳಲು ಎಚ್‌ಡಿಕೆ ಯಾರು: ಸಚಿವ ಅಶೋಕ್‌ ಕಿಡಿ

ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಕುರಿತ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಆರೋಪಕ್ಕೆ ಆಡಳಿತ ಪಕ್ಷ ಬಿಜೆಪಿ ಟೀಕಾಪ್ರಹಾರ ನಡೆಸುವುದನ್ನು ಮುಂದುವರಿಸಿದ್ದು, ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹದಲ್ಲಿ ಅವ್ಯವಹಾರವಾಗಿದ್ದರೆ ತೋರಿಸಲಿ, ರಾಮನ ಲೆಕ್ಕ ಕೇಳಲು ಇವರು ಯಾರು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಕಿಡಿಕಾರಿದ್ದಾರೆ. ಗುರುವಾರ ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ತಮಗೆ ಬೆದರಿಕೆ ಹಾಕಿರುವ ಬಗ್ಗೆ ಕುಮಾರಸ್ವಾಮಿ ಪ್ರಸ್ತಾಪಿಸಿದ್ದಾರೆ. ಆದರೆ, ರಾಜ್ಯದಲ್ಲಿ ಯಾರಾದರೂ ಅವರಿಗೆ ಬೆದರಿಕೆ ಹಾಕಲು ಆಗುತ್ತದೆಯೇ? ಇವರೇ ಶಾಸಕರಿಗೆ ಬೆದರಿಕೆ ಹಾಕುತ್ತಾರೆ. ರಾಮಮಂದಿರ ನಿರ್ಮಾಣಕ್ಕೆ ಕುಮಾರಸ್ವಾಮಿ ಒಂದು ಪೈಸೆಯನ್ನೂ ನೀಡಿಲ್ಲ ಎಂದು ಟೀಕಿಸಿದರು.

ಅಯೋಧ್ಯೆಗೆ ತೆರಳಿ ದೇಣಿಗೆ ನೀಡಲು ಶಾಸಕ ಶಿವಲಿಂಗೇಗೌಡ ಮುಂದಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅಶೋಕ್‌, ಅದನ್ನಾದರೂ ಮಾಡಲಿ ಬಿಡಿ. ಅವರೇ ಅಯೋಧ್ಯೆಗೆ ಹೋಗಿ ಕೊಡುತ್ತಾರೆಂದರೆ ಸಂತೋಷದ ವಿಚಾರ. ಈ ಹಿಂದೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಧರ್ಮದ ಬಗ್ಗೆ ಏನೇನು ಹೇಳಿದ್ದಾರೆ ಎಂದು ಗೊತ್ತಿದೆ. ದೇವೇಗೌಡ ಅವರು ಮುಂದಿನ ಜನ್ಮದಲ್ಲಿ ಎಲ್ಲಿ ಜನ್ಮ ತಾಳಬೇಕು ಎಂದು ಹೇಳಿರುವುದು ಗೊತ್ತಿದೆ. ಧಾರ್ಮಿಕವಾಗಿ ದೇಶದ ಜನ ರಾಮನನ್ನು ಒಪ್ಪಿದ್ದಾರೆ. ಅವರ ಶಾಸಕರೇ ಕುಮಾರಸ್ವಾಮಿ ಮಾತು ಕೇಳಲ್ಲ. ಮೊದಲು ಅವರ ಶಾಸಕರಿಗೆ ಬುದ್ಧಿ ಹೇಳಿಲಿ ಎಂದು ಟಾಂಗ್‌ ಕೊಟ್ಟರು.

ಸ್ವಾಮೀಜಿ ಜತೆ ಚರ್ಚೆ:

ಒಕ್ಕಲಿಗ ಸಮುದಾಯದವರು ಮೀಸಲಾತಿಗೆ ಬೇಡಿಕೆ ಇಟ್ಟಿದ್ದು, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಜತೆ ಮಾತನಾಡುತ್ತೇನೆ. ಯಾವುದೇ ಜಾತಿ, ಸಮುದಾಯಗಳಿಗೆ ಅನ್ಯಾಯವಾಗಬಾರದು. ತೀರಾ ಹಿಂದುಳಿದ ಸಮುದಾಯಗಳಿಗಾಗಿ ಸಂವಿಧಾನಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಮೀಸಲಾತಿ ತಂದಿದ್ದು, ಅವರ ಮೂಲ ಆಶಯಕ್ಕೆ ಧಕ್ಕೆ ಆಗದ ರೀತಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಅಶೋಕ್‌ ತಿಳಿಸಿದರು.
 

click me!