ಗ್ರಾಮವಾಸ್ತವ್ಯ ನಂತರ ದಲಿತರ ಮನೇಲಿ ಅಶೋಕ್‌ ಉಪಾಹಾರ

By Kannadaprabha News  |  First Published Jan 23, 2023, 7:03 AM IST

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಭಾನುವಾರ ಬೆಳಗ್ಗೆ ಗ್ರಾಮದ ಪರಿಶಿಷ್ಟ ಜಾತಿಯ ಗಿರಿಜಮ್ಮ ಹಾಗೂ ಮುನಿಯಪ್ಪ ದಂಪತಿ ಮನೆಯಲ್ಲಿ ಉಪಾಹಾರ ಸೇವಿಸಿದರು. 


ಹೊಸಕೋಟೆ (ಜ.23): ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿಯಲ್ಲಿ ಗ್ರಾಮವಾಸ್ತವ್ಯ ಮಾಡಿದ್ದ ಕಂದಾಯ ಸಚಿವ ಆರ್‌.ಅಶೋಕ್‌ ಅವರು ಭಾನುವಾರ ಬೆಳಗ್ಗೆ ಗ್ರಾಮದ ಪರಿಶಿಷ್ಟ ಜಾತಿಯ ಗಿರಿಜಮ್ಮ ಹಾಗೂ ಮುನಿಯಪ್ಪ ದಂಪತಿ ಮನೆಯಲ್ಲಿ ಉಪಾಹಾರ ಸೇವಿಸಿದರು. ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ ಸಚಿವರು ಅಲ್ಲಿದ್ದ ಕುರಿಮರಿಗಳನ್ನು ಎತ್ತಿಆಡಿಸಿ ಸಂತಸಪಟ್ಟರು. ಕುಟುಂಬ ಸದಸ್ಯರು ತಯಾರಿಸಿದ್ದ ಕೇಸರಿಬಾತ್‌, ಉಪ್ಪಿಟ್ಟು, ಚಿತ್ರಾನ್ನ, ವಡೆ, ಚಟ್ನಿ ಸವಿದರು. ಮನೆಯವರು ತೋರಿದ ಪ್ರೀತಿ ಹಾಗೂ ಶುಚಿ ರುಚಿಯಾದ ಉಪಾಹಾರಕ್ಕೆ ಸಂತೃಪ್ತಿ ವ್ಯಕ್ತಪಡಿಸಿದರು.

ಉಪಾಹಾರದ ನಂತರ ಮನೆ ಆವರಣದಲ್ಲಿ ಕೆಲಕಾಲ ಕುಳಿತು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದ ಸಚಿವರು ಸ್ಥಳೀಯ ಆಶಾ ಕಾರ್ಯಕರ್ತೆ ನಂಜಮ್ಮ ಅವರು ತಮ್ಮ ಪುತ್ರನ ಚಿಕಿತ್ಸೆಗೆ ನೆರವಾಗಲು ಕೋರಿದಾಗ ತಕ್ಷಣ ಸ್ಪಂದಿಸಿದ ಸಚಿವರು ಬೆಂಗಳೂರಿನ ಮಾರತ್‌ಹಳ್ಳಿಯ ಶಂಕರ್‌ ಕಣ್ಣಿನ ಆಸ್ಪತ್ರೆ ತಜ್ಞ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆಗೆ ಅಗತ್ಯ ಸಹಾಯ ನೀಡಲು ಸೂಚಿಸಿದರು. ಸಚಿವರಾದ ಎಂಟಿಬಿ ನಾಗರಾಜ್‌, ಜಿಲ್ಲಾ​ಕಾರಿ ಆರ್‌.ಲತಾ ಮತ್ತಿತರರು ಇದ್ದರು.

Tap to resize

Latest Videos

Grama Vastavya: ಜನರಿಗೆ ಮತ್ತೆ 10 ಕೆ.ಜಿ ಪಡಿತರ ಅಕ್ಕಿ: ಸಚಿವ ಅಶೋಕ್‌

ಆಸ್ತಿ ದಾಖಲೆ ಮನೆ ಬಾಗಿಲಿಗೆ: ರೈತ ಕುಟುಂಬಗಳು ತಮ್ಮ ಆಸ್ತಿ ಭಾಗ ಮಾಡಿಕೊಳ್ಳುವುದು ಈ ಹಿಂದೆ ಬಹಳ ಸವಾಲಿನ ಕಾರ್ಯವೆನಿಸಿತ್ತು. ಜಿಲ್ಲಾ​ಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ, ಪೌತಿ ಖಾತೆ ಆಂದೋಲನದ ಪರಿಣಾಮವಾಗಿ ಇದೀಗ ಜನರ ಮನೆ ಬಾಗಿಲಿಗೆ ಆಸ್ತಿ ದಾಖಲೆಗಳು ಬರುವಂತಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದರು.

ಜಡಿಗೇನಹಳ್ಳಿಯಲ್ಲಿ ಪೌತಿಖಾತೆ ಆಂದೋಲನದಲ್ಲಿ ಖಾತೆ ಪತ್ರಗಳನ್ನು ವಿತರಿಸಿ ಮಾತನಾಡಿ, ಪೌತಿಖಾತೆ ಆಂದೋಲನದ ಮೂಲಕ ಜನರ ಮನೆ ಬಾಗಿಲಿಗೆ ಆಸ್ತಿ ದಾಖಲೆ ತಲುಪಿಸುವ ಮಹತ್ವದ ಸುಧಾರಣಾ ಕ್ರಮವನ್ನು ಸರ್ಕಾರ ಜಾರಿ ತಂದಿದೆ. ಯಾವುದೇ ಅನಗತ್ಯ ತಂಟೆ, ತಕರಾರುಗಳಿಗೆ ಅವಕಾಶವಾಗದಂತೆ ನ್ಯಾಯಯುತ ಮಾರ್ಗದಲ್ಲಿ ಆಸ್ತಿ ವಿಭಜನೆ ಮಾಡಿಕೊಂಡು ಪ್ರತಿಯೊಬ್ಬರೂ ತಮ್ಮ ಪಾಲಿನ ಖಾತೆಗಳನ್ನು ಹೊಂದಿದ್ದರೆ, ಸರ್ಕಾರದ ವಿವಿಧ ಯೋಜನೆಗಳು ಮತ್ತು ಸಾಲ ಸೌಲಭ್ಯಗಳನ್ನು ಪಡೆಯಲು ಸುಲಭವಾಗುತ್ತದೆ ಎಂದರು.

ಆರೋಗ್ಯಕರ ಜೀವನಕ್ಕೆ ಯೋಗ ಮಾಡಿ: ರಕ್ತ ದೊತ್ತಡ, ಸಕ್ಕರೆ ಕಾಯಿಲೆ ನಿಯಂತ್ರಣ ಸೇರಿದಂತೆ ಆರೋಗ್ಯಯುತ ಜೀವನ ನಡೆಸಲು ಯೋಗಾಭ್ಯಾಸ ರಹದಾರಿಯಾಗಿದೆ. ಸದೃಢ ಮನಸ್ಸು ಮತ್ತು ಆರೋಗ್ಯಕ್ಕೆ ಯೋಗಾಸನಗಳು ಪೂರಕ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದರು. ತಾಲೂಕಿನ ಜಿಲ್ಲಾ​ಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದ ಅಂಗವಾಗಿ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ರಾತ್ರಿ ವಾಸ್ತವ್ಯ ಹೂಡಿದ್ದ ಸಚಿವ ಅಶೋಕ್‌ ಅವರು, ಭಾನುವಾರ ಬೆಳಿಗ್ಗೆ ವಿದ್ಯಾರ್ಥಿಗಳ ಯೋಗ ಶಿಬಿರದಲ್ಲಿ ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

52000 ಮಂದಿಗೆ ಹಕ್ಕುಪತ್ರ ಗಿನ್ನೆಸ್‌ ದಾಖಲೆಗೆ ಸೇರ್ಪಡೆ: ಸಚಿವ ಅಶೋಕ್‌ಗೆ ಪ್ರಮಾಣಪತ್ರ

ಸತತ ಯೋಗಾಭ್ಯಾಸದಿಂದ ಒತ್ತಡ ರಹಿತ ಆರೋಗ್ಯಯುತ ಜೀವನ ನಿರ್ವಹಿಸಬಹುದು. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೂ ಯೋಗಾಸನಗಳಿಂದ ಏಕಾಗ್ರತೆ ಸಾಧ್ಯವಾಗುತ್ತದೆ. ತಾವು ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಕಬಡ್ಡಿ ಆಟಗಾರನಾಗಿದ್ದೆ. ಈವರೆಗೂ ತಮ್ಮ ಬಳಿ ರಕ್ತದೊತ್ತಡ, ಮಧುಮೇಹ ಸುಳಿದಿಲ್ಲ. ಪ್ರಧಾನಿ ನರೇಂದ್ರ ಮೋದಿಯವರೂ ಪ್ರತಿನಿತ್ಯ ಯೋಗಾಭ್ಯಾಸ ಮಾಡಿ ದೇಶಕ್ಕೆ ಮಾದರಿಯಾಗಿದ್ದಾರೆ ಎಂದರು. ಇದೇ ವೇಳೆ ಮೊರಾರ್ಜಿ ದೇಸಾಯಿ ವಸತಿ ಪ.ಪೂ. ಕಾಲೇಜು ಪ್ರಾಚಾರ್ಯ ಕಿರಣಕುಮಾರ್‌, ವಿದ್ಯಾರ್ಥಿಗಳಿಗೆ ಉಚಿತ ಯೋಗಾಭ್ಯಾಸ ತರಬೇತಿ ನೀಡುವ ಆನಂದ್‌ ಅವರನ್ನು ಸಚಿವರಾದ ಅಶೋಕ್‌, ಎಂಟಿಬಿ ನಾಗರಾಜು, ಜಿಲ್ಲಾಧಿಕಾರಿ ಲತಾ ಸನ್ಮಾನಿಸಿದರು.

click me!