
ಬೆಂಗಳೂರು (ಜೂ. 30): ನಮ್ಮ ರಾಜ್ಯದಲ್ಲಿ ಫೇಕ್ ನ್ಯೂಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಸರ್ಕಾರದಿಂದ ಹೊಸ ಕಾನೂನು ಜಾರಿಗೆ ತರಲು ತಯಾರಿಗಳು ನಡೆಯುತ್ತಿವೆ. ಆದರೆ, ಈ ಫೇಕ್ ನ್ಯೂಸ್ ತಡೆ ಕಾಯ್ದೆಯ ಬಗ್ಗೆಯೇ ಮಾಧ್ಯಮಗಳು ತಪ್ಪು ಸುದ್ದಿಗಳನ್ನು ಬಿತ್ತರ ಮಾಡುತ್ತಿವೆ ಎಂದು ತಂತ್ರಜ್ಞಾನ ಹಾಗೂ ಮಾಹಿತಿ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ವಿಧಾನಸೌಧದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಫೇಕ್ ನ್ಯೂಸ್ ಬಗ್ಗೆ ಚರ್ಚೆ ನಡೆಯುತ್ತಿದೆ. ನಮ್ಮ ಬಿಲ್ ಬಗ್ಗೆ ಕೆಲ ಮಾಧ್ಯಮಗಳಲ್ಲಿ ತಪ್ಪು ಸುದ್ದಿ ಹರಡುತ್ತಿದೆ. ಈ ಬಗ್ಗೆ ಗೃಹ ಇಲಾಖೆ, ಕಾನೂನು ಇಲಾಖೆ ಹಾಗೂ ತಂತ್ರಜ್ಞಾನ ಮತ್ತು ಮಾಹಿತಿ ಇಲಾಖೆಗಳ ನಡುವೆ ಚರ್ಚೆ ನಡೆದಿದೆ. ಈ ಬಗ್ಗೆ ಡ್ರಾಫ್ಟ್ ಇನ್ನೂ ಪೂರ್ಣಗೊಂಡಿಲ್ಲ. ಇದನ್ನು ಪೂರ್ಣಗೊಳಿಸಿದ ಬಳಿಕ ಮುಂದಿನ ಅಧಿವೇಶನದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಶಾಸಕರ ಅಸಮಾಧಾನವಿಲ್ಲ:
ರಾಜ್ಯಕ್ಕೆ ಕಾಂಗ್ರೆಸ್ ಉಸ್ತುವಾರಿಯಾಗಿ ರಣದೀಪ್ ಸುರ್ಜೇವಾಲ ಅವರ ಭೇಟಿ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, 'ಅವರು ನಮ್ಮ ಉಸ್ತುವಾರಿ. ಶಾಸಕರ ಸಮಸ್ಯೆ, ಅಭಿಪ್ರಾಯ ಕೇಳುವುದು ಸಹಜ. ಹಿಂದೆಯೂ ಇಂತಹ ಪ್ರಕ್ರಿಯೆಗಳು ನಡೆದಿವೆ. ಎಲ್ಲ ಶಾಸಕರೂ ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ತರಬೇಕು, ಅಭಿವೃದ್ಧಿಗೆ ಪೂರಕವಾಗಬೇಕು ಎಂಬ ಆಶಯದಿಂದ ಮಾತನಾಡುತ್ತಾರೆ. ಇದನ್ನು ಅಸಮಾಧಾನವೆಂದರೆ ತಪ್ಪು. ನಾವು ಪಕ್ಷದ ವೇದಿಕೆಯಲ್ಲಿ ಮಾತಾಡಬೇಕು. ಮಾಧ್ಯಮದಲ್ಲಿ ಹೇಳುವುದರಿಂದ ಪಕ್ಷಕ್ಕೆ ಹಾನಿಯಾಗಬಹುದು' ಎಂದು ಎಚ್ಚರಿಸಿದರು.
ನಾವು ಯಾವ ಹಂತದಲ್ಲಿಯೇ ಇರಲಿ, ನಿಯಂತ್ರಣದಲ್ಲಿ ಇರುವುದು ನಮ್ಮ ಹೊಣೆ. ಮಾತು ಮನೆ ಕೆಡಿಸುತ್ತೆ, ತೂತು ಒಲೆ ಕೆಡಿಸುತ್ತೆ ಅನ್ನೋ ಮಾತು ಮರೆತರೆ ಸಮಾಜದ ಮೇಲೆ ದುಷ್ಪರಿಣಾಮವಾಗಬಹುದು. ಶಾಸಕರು, ನಾಯಕರು ಎಲ್ಲರೂ ತಮ್ಮ ಮಾತಿಗೆ ಜವಾಬ್ದಾರರಾಗಿರಬೇಕು. ಇಲ್ಲಿರುವವರು ಯಾರೂ ಚಿಕ್ಕ ಮಕ್ಕಳು ಅಲ್ಲ. ನಾವು ಸಾರ್ವಜನಿಕರ ಪ್ರತಿನಿಧಿಗಳು. ಎಲ್ಲಿ ಏನೇನು ಹೇಳಬೇಕೋ, ಅಲ್ಲೇ ಹೇಳಬೇಕು. ಎಲ್ಲಿ ಬೇಕೆಂದರಲ್ಲಿ ಮಾತನಾಡುವುದಲ್ಲ. ಹೈಕಮಾಂಡ್ ಮುಂದೆ ಎಲ್ಲವೂ ಹೇಳಲಿ ಎಂದು ಸಚಿವ ಪ್ರಿಯಾಂಕ ಖರ್ಗೆ ಸ್ವಪಕ್ಷೀಯ ಶಾಸಕರಿಗೆ ಎಚ್ಚರಿಕೆ ರವಾನಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ