ನೋಂದಣಿ ರಹಿತ ಪೆಟ್‌ಶಾಪ್‌ಗಳಿಗೆ ಸಚಿವ ಚವ್ಹಾಣ್‌ ಬಿಸಿ..!

By Kannadaprabha NewsFirst Published Jan 14, 2023, 12:19 PM IST
Highlights

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳ ಮಾರಾಟ ಅಂಗಡಿಗಳು ಮತ್ತು ಪೆಟ್‌ಶಾಪ್‌ಗಳನ್ನು ತಪಾಸಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಪಾಸಣೆ ವೇಳೆ ಅನಧಿಕೃತವಾಗಿ ದೇಶೀಯ ಮತ್ತು ವಿದೇಶಿ ಪಕ್ಷಿ, ಪ್ರಾಣಿಗಳನ್ನು ಮಾರಾಟ ಮಾಡುವುದು ಕಂಡು ಬಂದರೆ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು: ಸಚಿವ ಪ್ರಭು ಚವ್ಹಾಣ್‌ 

ಬೆಂಗಳೂರು(ಜ.14): ಸಾಕು ಪ್ರಾಣಿ ಮಾರಾಟಗಾರರು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳದೆ ಪೆಟ್‌ಶಾಪ್‌ ತೆರೆದಿದ್ದರೆ ಯಾವುದೇ ಮುನ್ಸೂಚನೆ ನೀಡದೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್‌ ಎಚ್ಚರಿಕೆ ನೀಡಿದ್ದಾರೆ.

ಬಹುತೇಕ ಅಂಗಡಿಗಳಲ್ಲಿ ಅನೇಕ ಪಕ್ಷಿಗಳನ್ನು ಒಂದೇ ಪಂಜರದಲ್ಲಿ ಇರಿಸಿರುವುದು, ಪಕ್ಷಿಗಳು ಮತ್ತು ಪ್ರಾಣಿಗಳು ಸ್ಥಳ ಹಾಗೂ ತಾಜಾ ಗಾಳಿಗಾಗಿ ಹೆಣಗಾಡುತ್ತಿರುವುದು, ನೀರು ಅಥವಾ ಆಹಾರ ಪೂರೈಕೆ ಇಲ್ಲದಿರುವುದು ಶುಚಿತ್ವ ಇಲ್ಲದಿರುವುದು, ಸಣ್ಣ ಮರಿಗಳನ್ನೇ ಮಾರಾಟ ಮಾಡುವುದು, ಆಹಾರ, ನೀರು ಇಲ್ಲದೆ ಪಕ್ಷಿಗಳು ಮತ್ತು ನಾಯಿಗಳು ಸತ್ತಿರುವುದು, ಕೊಳೆಯುತ್ತಿರುವ ಬಗ್ಗೆ ಸಾಕಷ್ಟುದೂರುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಬೆಂಗಳೂರು ನಗರದಲ್ಲಿ ಏಕ ಕಾಲದಲ್ಲಿ ದಾಳಿ ನಡೆಸಿ, ರಕ್ಷಿಸಿದ ಎಲ್ಲಾ ಪ್ರಾಣಿಗಳನ್ನು ಕಾನೂನಿನ ಪ್ರಕಾರ ಮಾನ್ಯತೆ ಪಡೆದ ಸೌಲಭ್ಯಗಳಿರುವ ಪ್ರಾಣಿ ರಕ್ಷಣಾ ಗೃಹದಲ್ಲಿ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.

ಚರ್ಮಗಂಟು ರೋಗ: ಬೆಳಗಾವಿ ಜಿಲ್ಲೆಗೆ 10 ಕೋಟಿ ಪರಿಹಾರ, ಸಚಿವ ಚವ್ಹಾಣ್‌

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿರುವ ಪ್ರಾಣಿ ಮತ್ತು ಪಕ್ಷಿಗಳ ಮಾರಾಟ ಅಂಗಡಿಗಳು ಮತ್ತು ಪೆಟ್‌ಶಾಪ್‌ಗಳನ್ನು ತಪಾಸಣೆ ಮಾಡಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ತಪಾಸಣೆ ವೇಳೆ ಅನಧಿಕೃತವಾಗಿ ದೇಶೀಯ ಮತ್ತು ವಿದೇಶಿ ಪಕ್ಷಿ, ಪ್ರಾಣಿಗಳನ್ನು ಮಾರಾಟ ಮಾಡುವುದು ಕಂಡು ಬಂದರೆ ಸಂಬಂಧಿಸಿದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಪಾರಿವಾಳಗಳು, ಮೊಲಗಳು, ಬಾತುಕೋಳಿಗಳು, ನಾಯಿಗಳು, ಬೆಕ್ಕುಗಳು ಸೇರಿದಂತೆ ವಿವಿಧ ಜಾತಿಯ ಪ್ರಾಣಿ ಮತ್ತು ಪಕ್ಷಿಗಳನ್ನು ಮಾರಾಟ ಮಾಡುವ ಪೆಟ್‌ಶಾಪ್‌ ಮಾಲೀಕರು ಕರ್ನಾಟಕ ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಿಕೊಳ್ಳಬೇಕು ಎಂದಿದ್ದಾರೆ.

ದೂರುಗಳು ಇದ್ದರೆ 8277100200 ಕರೆ ಮಾಡಿ: ಸಚಿವ

ಪ್ರಾಣಿಗಳು ಮತ್ತು ಪಕ್ಷಿಗಳನ್ನು ಮಾರಾಟ ಮಾಡುವ ಅಂಗಡಿ ಮಾಲೀಕರು, ಅವುಗಳ ಪಾಲನೆ, ಪೋಷಣೆ ಮಾಡದೆ, ರಕ್ಷಣೆ ಮತ್ತು ಸೂಕ್ತ ಚಿಕಿತ್ಸೆ ನೀಡದೆ ಶುಚಿತ್ವ ಕಾಪಾಡದಿರುವುದು ಕಂಡು ಬಂದರೆ ಕೂಡಲೇ ಸಾರ್ವಜನಿಕರು ಸಹಾಯವಾಣಿ ಸಂಖ್ಯೆ 8277100200ಗೆ ಕರೆ ಮಾಡಿ ದೂರುಗಳಿದ್ದಲ್ಲಿ ನೀಡಬಹುದು ಎಂದು ಸಚಿವರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ.

click me!