Karnataka Udyogini scheme failure: ಉದ್ಯೋಗಿನಿ ಯೋಜನೆಗೆ 42,041 ಅರ್ಜಿ ಬಂದರೂ ಯಾರಿಗೂ ಸಿಕ್ಕಿಲ್ಲ ಸಹಾಯಧನ!

Kannadaprabha News   | Kannada Prabha
Published : Mar 12, 2026, 12:37 PM IST
Lakshmi hhebalkar

ಸಾರಾಂಶ

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ 'ಉದ್ಯೋಗಿನಿ' ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 42,041 ಅರ್ಜಿಗಳು ಬಂದರೂ ಓರ್ವ ಮಹಿಳೆಗೂ ಸಹಾಯಧನ ಬಿಡುಗಡೆಯಾಗಿಲ್ಲ. ಬ್ಯಾಂಕ್‌ಗಳ ಅಸಹಕಾರ ಮತ್ತು ಫಲಾನುಭವಿಗಳ ಆಯ್ಕೆಯಲ್ಲಿನ ವಿಳಂಬವೇ ಇದಕ್ಕೆ ಕಾರಣವೆಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌ ತಿಳಿಸಿದ್ದು, ನಿಯಮ ಸರಳೀಕರಣಕ್ಕೆ ಚಿಂತನೆ ನಡೆಸಲಾಗಿದೆ.

ವಿಧಾನಸಭೆ (ಮಾ.12) ರಾಜ್ಯದ ಮಹಿಳೆಯರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಜಾರಿಗೆ ತಂದಿರುವ ರಾಜ್ಯ ಸರ್ಕಾರದ ‘ಉದ್ಯೋಗಿನಿ’ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಸ್ವೀಕಾರವಾಗಿರುವ 42,041 ಅರ್ಜಿಗಳ ಪೈಕಿ ಓರ್ವ ಮಹಿಳೆಗೂ ಸಹಾಯಧನ ಬಿಡುಗಡೆಯಾಗಿಲ್ಲ!

ಬುಧವಾರ ಪ್ರಶ್ನೋತ್ತರದಲ್ಲಿ ಬಿಜೆಪಿ ಸದಸ್ಯ ಸಿದ್ದು ಸವದಿ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್‌, ಕಳೆದ ಮೂರು ವರ್ಷಗಳ ಫಲಾನುಭವಿಗಳ ವಿವರಗಳ ಪೈಕಿ 2025-26ನೇ ಸಾಲಿನಲ್ಲಿ ಓರ್ವ ಮಹಿಳೆಗೂ ಸಹಾಯಧನ ಬಿಡುಗಡೆ ಮಾಡಿಲ್ಲ ಎಂದು ತಿಳಿಸಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಶೂನ್ಯ ಸಾಧನೆ:

ಯೋಜನೆಯಡಿ 2023-24ನೇ ಸಾಲಿನಲ್ಲಿ 83,813 ಅರ್ಜಿ ಸ್ವೀಕರಿಸಲಾಗಿದೆ. 1,480 ಭೌತಿಕ ಗುರಿ ಪೈಕಿ 87 ಫಲಾನುಭವಿಗಳಿಗೆ ಮಾತ್ರ ಸಹಾಯಧನ ಬಿಡುಗಡೆಯಾಗಿದೆ. 2024-25ನೇ ಸಾಲಿನಲ್ಲಿ 16,917 ಅರ್ಜಿ ಸ್ವೀಕರಿಸಲಾಗಿದೆ. 1,540 ಭೌತಿಕ ಗುರಿ ಪೈಕಿ 73 ಫಲಾನುಭವಿಗಳಿಗೆ ಮಾತ್ರ ಸಹಾಯಧನ ನೀಡಲಾಗಿದೆ. 2025-26ನೇ ಸಾಲಿನಲ್ಲಿ 42,041 ಅರ್ಜಿ ಸ್ವೀಕರಿಸಲಾಗಿದೆ. 1,482 ಭೌತಿಕ ಗುರಿ ನೀಡಲಾಗಿತ್ತು. ಸಹಾಯಧನ ಬಿಡುಗಡೆಯಾದ ಫಲಾನುಭವಿಗಳ ಸಂಖ್ಯೆ ಶೂನ್ಯ ಎಂದು ಸಚಿವರು ನೀಡಿರುವ ಲಿಖಿತ ಉತ್ತರದಲ್ಲಿ ತಿಳಿಸಲಾಗಿದೆ.

ಬ್ಯಾಂಕ್‌ಗಳು ಸಹಕರಿಸುತ್ತಿಲ್ಲ:

ಸಿದ್ದು ಸವದಿ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಯೋಜನೆ ಅಡಿ ಸಹಾಯಧನ ಬಿಡುಗಡೆಗೆ ಬ್ಯಾಂಕ್‌ಗಳೇ ಅಡ್ಡಿಯಾಗಿವೆ. ಮುಖ್ಯವಾಗಿ ಶಾಸಕರು ಫಲಾನುಭವಿಗಳ ಆಯ್ಕೆ ಮಾಡುವುದು ವಿಳಂಬವಾಗುತ್ತಿದೆ. ಈ ಆಯ್ಕೆ ಪಟ್ಟಿಯನ್ನು ಬ್ಯಾಂಕ್‌ಗಳಿಗೆ ಕಳುಹಿಸಿದಾಗ, ಸಿಬಿಲ್‌ ಸ್ಕೋರ್‌ ಸೇರಿ ನಾನಾ ಕಾರಣಗಳಿಂದ ಶೇ.60ಕ್ಕೂ ಹೆಚ್ಚು ಅರ್ಜಿಗಳು ವಾಪಸ್‌ ಬರುತ್ತಿವೆ. ಇಲಾಖೆ ಅಧಿಕಾರಿಗಳು ಬ್ಯಾಂಕ್‌ ಮತ್ತು ಶಾಸಕರ ಮನೆ ಅಥವಾ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಹೀಗಾಗಿ ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ನಿಯಮ ಸರಳ ಗೊಳಿಸಲು ಚಿಂತಿಸಲಾಗಿದೆ. ಈ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ChatGPT ಹೇಳಿದ ಅಸ್ಸಾಂ ಗೆಲುವಿನ ರಹಸ್ಯವನ್ನು ಹಂಚಿಕೊಂಡ್ರು DCM ಡಿಕೆ ಶಿವಕುಮಾರ್‌
ರಾಮನಗರ: ಅತ್ತೆ ಸೊಸೆ ಜಗಳ: 19 ವರ್ಷದ ಗರ್ಭಿಣಿ ಸೊಸೆ ನಯನಾ ಸಾವಿಗೆ ಶರಣು