
ಬೆಂಗಳೂರು(ಜೂ.25): ಅಕ್ಕಿ ಪೂರೈಸಲು ಟೆಂಡರ್ ಮಾಡಿ ಕ್ರಮ ಕೈಗೊಳ್ಳುವಂತೆ ಎನ್‌ಸಿಸಿಎಫ್ ಸೇರಿದಂತೆ ಮೂರು ಸಂಸ್ಥೆಗಳಿಗೆ ಮನವಿ ಮಾಡಿದ್ದೇವೆ. ಒಂದು ವಾರದೊಳಗೆ ಗಿರಣಿಗಳ ಮಾಲೀಕರು ಮತ್ತು ವ್ಯಾಪಾರಿಗಳೊಂದಿಗೆ ಚರ್ಚಿಸಿ ಅವು ಅಂತಿಮ ತೀರ್ಮಾನವನ್ನು ತಿಳಿಸಲಿವೆ. ಇದಾದ ನಂತರ ಅಕ್ಕಿ ಪೂರೈಕೆ ಆರಂಭವಾಗಲಿದೆ. ಎಷ್ಟೇ ಕಷ್ಟ ಬಂದರೂ ರಾಜ್ಯದ ಜನರಿಗೆ ಭರವಸೆ ನೀಡಿದಂತೆ ಅಕ್ಕಿ ವಿತರಿಸುತ್ತೇವೆ ಎಂದು ಆಹಾರ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.
ಶನಿವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಅಕ್ಕಿ ಪೂರೈಕೆ ಕುರಿತು ಎನ್‌ಸಿಸಿಎಫ್, ನಾಫೆಡ್ ಮತ್ತು ಕೇಂದ್ರೀಯ ಭಂಡಾರ ಕೊಟ್ಟಿರುವ ದರ ಪಟ್ಟಿಕುರಿತು ಸಭೆ ನಡೆಯಿತು. ಆಹಾರ ಸಚಿವ ಕೆ.ಎಚ್.ಮುನಿಯಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಸರ್ಕಾರ ಮುಖ್ಯಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಸಾಕಷ್ಟು ಅಕ್ಕಿ ದಾಸ್ತಾನಿದ್ದರೂ ಕೇಂದ್ರ ಸರ್ಕಾರ ಕೊಡುತ್ತಿಲ್ಲ: ಸಚಿವ ಮುನಿಯಪ್ಪ
ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಚ್.ಮುನಿಯಪ್ಪ ಅವರು, ರಾಜ್ಯ ಸರ್ಕಾರದ ಬೇಡಿಕೆಗೆ ತಕ್ಕ ದರ, ಅಕ್ಕಿ ಪ್ರಮಾಣ, ಪೂರೈಕೆಯ ಅವಧಿ ಇತ್ಯಾದಿ ವಿಚಾರಗಳ ಕುರಿತು ಚರ್ಚಿಸಲಾಯಿತು. ಸರ್ಕಾರಿ ಸ್ವಾಮ್ಯದ ಮೂರು ಏಜೆನ್ಸಿಗಳು ಮುಕ್ತ ಮಾರುಕಟ್ಟೆಯಲ್ಲಿ ಟೆಂಡರ್ ಮಾಡಿ ಅಕ್ಕಿ ಸರಬರಾಜು ಮಾಡಲು ಆದಷ್ಟುಬೇಗ ಒಂದು ತೀರ್ಮಾನ ಕೊಡಬೇಕೆಂದು ಮನವಿ ಮಾಡಿದ್ದೇವೆ. ಅಕ್ಕಿ ದರ, ಯಾವ ರೀತಿಯಲ್ಲಿ ಪೂರೈಕೆ ಮಾಡುತ್ತಾರೆ ಎಂಬಿತ್ಯಾದಿ ವಿಚಾರಗಳ ಕುರಿತು ಏಜೆನ್ಸಿಯವರೇ ತೀರ್ಮಾನ ಕೈಗೊಳ್ಳುತ್ತಾರೆ. ಅದಕ್ಕೂ ನಮಗೂ ಸಂಬಂಧವಿಲ್ಲ. ಈ ಹಿಂದೆಯೂ ಸರ್ಕಾರ ಈ ಸಂಸ್ಥೆಗಳಿಂದ ಅಕ್ಕಿ ಪಡೆದು ಸಾರ್ವಜನಿಕರಿಗೆ ವಿತರಣೆ ಮಾಡಿತ್ತು ಎಂದರು.
ಈ ಸಂಸ್ಥೆಗಳು ಅಕ್ಕಿ ಸರಬರಾಜು ಮಾಡಿದ ನಂತರ, ರಾಜ್ಯದ ಜನರಿಗೆ 10 ಕೆ.ಜಿ. ಅಕ್ಕಿಯನ್ನು ವಿತರಣೆ ಮಾಡುತ್ತೇವೆ. ಮೂರು ಸಂಸ್ಥೆಗಳು ಅಕ್ಕಿ ಕೊಡಲು ಒಪ್ಪಿಗೆ ನೀಡಿದ್ದು ಒಂದು ವಾರಗಳ ಕಾಲಾವಕಾಶ ಕೇಳಿವೆ. ಅಕ್ಕಿ ಪೂರೈಸುವಂತ ವ್ಯಾಪಾರಸ್ಥರು, ಗಿರಣಿಗಳ ಮಾಲೀಕರೊಂದಿಗೆ ಚರ್ಚಿಸಿ ವಾರದೊಳಗೆ ವರದಿ ನೀಡಲಿವೆ. ಆ ನಂತರ ಅಕ್ಕಿ ಪೂರೈಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಎಷ್ಟೇ ಕಷ್ಟವಾದರೂ ಈಗಾಗಲೇ ನೀಡಿರುವ ಭರವಸೆಯಂತೆ ರಾಜ್ಯದ ಜನರಿಗೆ 10 ಕೆಜಿ ಅಕ್ಕಿಯನ್ನು ವಿತರಿಸುತ್ತೇವೆ. ಇದರಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ