
ಬೆಂಗಳೂರು(ಜ.25): ಬೆಂಗಳೂರು ಅರಮನೆ ಮೈದಾನದ 15.39 ಎಕರೆ ಜಾಗ ಸ್ವಾಧೀನಕ್ಕೆ ಪಡೆದು ರಸ್ತೆ ಅಗಲೀಕರಣ ಮಾಡುವುದಕ್ಕೆ ಪ್ರತಿಯಾಗಿ ರಾಜಮನೆತನದ ವಾರಸುದಾರರಿಗೆ 3014 ಕೋಟಿ ರು. ಟಿಡಿಆರ್ ಪರಿಹಾರ ನೀಡಬೇಕೆಂಬ ಸುಪ್ರೀಂಕೋರ್ಟ್ ಆದೇಶದಿಂದ ಪಾರಾಗಲು ಅರಮನೆ ಜಾಗ ತೆಗೆದುಕೊಳ್ಳುವುದು, ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳುವುದು ಅಥವಾ ಬಿಡುವುದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಸೇರಿದ್ದೆಂದು ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ತೀರ್ಮಾನಿಸಿದೆ.
ಜಯಮಹಲ್ ರಸ್ತೆ ಹಾಗೂ ಬಳ್ಳಾರಿ ರಸ್ತೆ ಆಗಲೀಕರಣಕ್ಕಾಗಿ 15.39 ಎಕರೆ ಜಾಗ ಸ್ವಾಧೀನಪಡಿಸಿಕೊಂಡಿರುವ ರಾಜ್ಯ ಸರ್ಕಾರವು ಆರು ವಾರದೊಳಗೆ 3,014 ಕೋಟಿ ರು. ಟಿಡಿಆರ್ ಪರಿಹಾರವನ್ನು ನೀಡಬೇಕೆಂದು 2024ರ ಡಿ.10ಕ್ಕೆ ಸುಪ್ರೀಂ ಆದೇಶ ಹೊರಡಿಸಿದೆ. ಆದರೆ ರಾಜ್ಯ ಸರ್ಕಾರ ಟಿಡಿಆರ್ ಪರಿಹಾರ ಪಾವತಿಸದ ಹಿನ್ನೆಲೆಯಲ್ಲಿ ರಾಜಮನೆತ ನದ ವಾರಸುದಾರರು ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ ಅರಮನೆ ಜಾಗವನ್ನು ತೆಗೆದುಕೊಳ್ಳುವುದು, ನಿರ್ದಿಷ್ಟ ಉದ್ದೇಶಕ್ಕೆ ಬಳಸಿಕೊಳ್ಳುವುದು ಅಥವಾ ಬಿಡುವುದು ರಾಜ್ಯ ಸರ್ಕಾರದ ಅಧಿಕಾರ ವ್ಯಾಪ್ತಿಗೆ ಸಂಬಂಧಿಸಿದ್ದು ಎಂದು ಸುಗ್ರೀವಾಜ್ಞೆ ಹೊರಡಿಸಲು ತೀರ್ಮಾನಿಸಲಾಗಿದೆ.
ಮೈಸೂರು ರಾಜಮನೆತನದ ವಿರುದ್ಧ ರಾಜ್ಯ ಸರ್ಕಾರ ಸಮರ!
ಈ ನಿರ್ಣಯವನ್ನು ರಾಜ್ಯ ನ್ಯಪಾಲರಿಗೆ ಸಲ್ಲಿಸಲು ನಿರ್ಧರಿಸಲಾಗಿದೆ. ತನ್ಮೂಲಕ ತೀರಾ ಅಗತ್ಯವಾದರೆ ರಸ್ತೆ ಅಗಲೀಕರಣ ಯೋಜನೆ ಯನ್ನೇ ಕೈಬಿಡಬೇಕು. ಯಾವುದೇ ಕಾರಣಕ್ಕೂ ಟಿಡಿಆರ್ ಪರಿಹಾರ ನೀಡದಿರಲು ನಿರ್ಧಾರ ಮಾಡಲಾಗಿದೆ.
ಬೆಂಗಳೂರು ಅರಮನೆಯನ್ನು ರಾಜ್ಯ ಸರ್ಕಾರ ವಶಪಡಿಸಿಕೊಂಡಿರುವ 1996ರ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆಗೆ ಪೂರಕವಾಗಿ ಸುಗ್ರೀವಾಜ್ಞೆ ತರಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಸಚಿವ ಎಚ್.ಕೆ. ಪಾಟೀಲ್, ಸುಗ್ರಿವಾಜ್ಞೆ ಜಾರಿಯಿಂದ ಅಗತ್ಯವಿರುವಷ್ಟು ಜಾಗ ಬಳಸಿಕೊಳ್ಳಲು ಅಥವಾ ಉದ್ದೇಶಿತ ಪ್ರಸ್ತಾವನೆಯನ್ನು ಕೈಬಿಡಲು ರಾಜ್ಯ ಸರ್ಕಾರಕ್ಕೆ ಅಧಿಕಾರ ದೊರೆಯುತ್ತದೆ. ಯಾವುದೇ ನ್ಯಾಯಾಲಯದ ತೀರ್ಪು ಅಥವಾ ಸರ್ಕಾರ ಈ ಮೊದಲು ಕೈಗೊಂಡ ಯಾವುದೇ ತೀರ್ಮಾನದ ಹೊರತಾಗಿಯೂ ಯೋಜನೆ ಭಾಗಶಃ ಅಥವಾ ಸಂಪೂರ್ಣವಾಗಿ ಕೈಬಿಡಲು ಈ ಸುಗ್ರಿವಾಜ್ಞೆ ಅವಕಾಶ ಕಲಿಸುತ್ತದೆ.
ಮೂಲಗಳ ಪ್ರಕಾರ, ರಾಜ್ಯ ಸರ್ಕಾರ 1996ರಲ್ಲಿ ಬೆಂಗಳೂರು ಅರಮನೆ ಹಾಗೂ ಆಸ್ತಿ ವಶಪಡಿಸಿಕೊಂಡಾಗ 1996ರ ಬೆಂಗ ಳೂರು ಅರಮನೆ ಸ್ವಾಧೀನ ಮತ್ತು ವರ್ಗಾವಣೆ ಕಾಯಿದೆಯಡಿ ಪ್ರತಿ ಎಕರೆ ಜಮೀನಿಗೆ ತಲಾ 2 ಲಕ್ಷ ರು.ಗಳಂತೆ 472 ಎಕರೆಗೆ 11 ಕೋಟಿ ರು. ಪರಿಹಾರ ನಿಗದಿ ಮಾಡಿತ್ತು. ಈ ಕಾಯಿದೆಯ ಸಿಂಧುತ್ವದ ಕುರಿತ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬಾಕಿಯಿದೆ.
ಹೀಗಾಗಿ ಕಾಯಿದೆಯಡಿ ನಿಗದಿ ಮಾಡಿರುವ ಪರಿಹಾರ ಮೊತ್ತ (ಎಕರೆಗೆ 2 ಲಕ್ಷ ರು.) ಹಾಗೂ ಪ್ರತಿ ವರ್ಷ ಶೇ.18 ರಷ್ಟು ಬಡ್ಡಿ ಸೇರಿಸಿ 15.39 ಎಕರೆಗೆ ಪರಿಹಾರ ಮೊತ್ತ ಪಾವತಿಸಿ ಖರೀದಿಸುವ ಕುರಿತು ಮುಂದಿನ ವಿಚಾರಣೆಯಲ್ಲಿ ನ್ಯಾಯಾಲಯಕ್ಕೆ ತಿಳಿಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿ ಸಲಾಗಿದೆ. ಒಂದೊಮ್ಮೆ ಅರಮನೆ ವಾರಸು ದಾರರು, ಸುಪ್ರೀಂ ಕೋರ್ಟ್ ಇದಕ್ಕೆ ಸಮ್ಮತಿಸದೆ 3,014 ಕೋಟಿ ರು. ಪಾವತಿಸಬೇಕಾದ ಅನಿವಾರ್ಯತೆ ಎಂದಾದರೆ ರಸ್ತೆ ಅಗಲೀಕರಣವನ್ನೇ ಕೈಬಿಡಲು ಸಹ ಸುಗ್ರೀವಾಜ್ಞೆಯಲ್ಲಿ ಅವಕಾಶ ಕಲಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಅಭಿವೃದ್ಧಿಗೆ ಗಂಡಾಂತರ:
15.37 ಎಕರೆ ಜಾಗಕ್ಕೆ 3,014 ಕೋಟಿ ರು. ಟಿಡಿಆರ್ ಪರಿಹಾರ ನೀಡುವುದು ಅವ್ಯವಹಾರಿಕ. 2 ಎಕರೆ ರಸ್ತೆ ನಿರ್ಮಾಣಕ್ಕೆ ಮೂರು ಸಾವಿರಕ್ಕೂ ಹೆಚ್ಚು ಕೋಟಿ ಪರಿಹಾರ ನೀಡಿದರೆ ರಾಜ್ಯಕ್ಕೆ ಗಂಡಾಂತರ ಉಂಟಾಗಲಿದೆ. ರಾಜ್ಯದ ಪ್ರಗತಿಗೆ ವಿರುದ್ಧದ ಕ್ರಮವಾಗಲಿದ್ದು, ಎಲ್ಲ ವರ್ಗದ ಜನರ ಹಣ ದುರುಪಯೋಗ ಆಗಲಿದೆ. ಈ ಹಿನ್ನೆಲೆಯಲ್ಲಿ ಇಷ್ಟು ಮೊತ್ತದ ಟಿಡಿಆರ್ ನೀಡದಿರಲು ನಿರ್ಧಾರ ಮಾಡಲಾಗಿದೆ. ಈ ಸಂಬಂಧ ಸುಗ್ರೀವಾಜ್ಞೆ ಹೊರಡಿಸ ಲಾಗುವುದು ಎಂದು ಎಚ್.ಕೆ. ಪಾಟೀಲ್ ಸ್ಪಷ್ಟಪಡಿಸಿದರು.
ಟಿಡಿಆರ್ ನೀಡದೆ ಹೇಗೆ ಪರಿಹಾರ ನೀಡು ತೀರಿ ಎಂಬ ಪ್ರಶ್ನೆಗೆ, ಎಲ್ಲವನ್ನೂ ಸುಗ್ರೀವಾಜ್ಞೆ ಆದೇಶದಲ್ಲಿ ಸಷ್ಟವಾಗಿ ತಿಳಿಸಲಾಗುವುದು. ಆದೇಶದೊಂದಿಗೆ ಪ್ರಮಾಣಪತ್ರವನ್ನು ಸೋಮವಾರ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿ ಬೇಕಾಗಿದೆ. ಹೀಗಾಗಿ ತುರ್ತಾಗಿ ನಿರ್ಧಾರ ಮಾಡಿದ್ದೇವೆ. ರಸ್ತೆ ಅಗಲೀಕರಣ ಆಗಲಿ ದೆಯೋ ಅಥವಾ ಕೈ ಬಿಡುತ್ತೇವೆಯೋ ಎಲ್ಲ ವನ್ನೂ ಸುಗ್ರೀವಾಜ್ಞೆಯಲ್ಲೇ ತಿಳಿಸಲಾಗುವುದು. ಟಿಡಿಆರ್ ನೀಡದಿರುವುದು ನಮ್ಮ ಮುಖ್ಯ ಉದ್ದೇಶ ಎಂದಷ್ಟೇ ಹೇಳಿದರು.
ಬೆಂಗಳೂರು ಅರಮನೆ ಜಾಗಕ್ಕೆ ಸುಪ್ರೀಂ ಆದೇಶದಂತೆ ಮೈಸೂರು ರಾಜರಿಗೆ ₹3011 ಕೋಟಿ ಕೊಡಲು ಸರ್ಕಾರದಿಂದ ತಗಾದೆ!
ಏನಿದು ವಿವಾದ?:
ವಿವಾದದ ಬಗ್ಗೆ ವಿವರಿಸಿದ ಅವರು, ಬೆಂಗಳೂರು ಅರಮನೆ ಮೈದಾನದ ಒಟ್ಟು 472 ಎಕರೆ 16 ಗುಂಟೆ ಜಾಗಕ್ಕೆ ಬೆಂಗಳೂರು ಅರಮನೆ (ಸ್ವಾಧೀನ ಮತ್ತು ವರ್ಗಾವಣೆ) ಅಧಿನಿಯಮ 1996ರ ಕಂಡಿಕೆ 8 ಮತ್ತು 9ರಲ್ಲಿ 11 ಕೋಟಿ ರು. ನಿಗದಿ ಮಾಡಿ ರಾಜ್ಯ ಸರ್ಕಾರದ ಸ್ವಾಧೀನಕ್ಕೆ ಪಡೆಯಲು 1996ರಲ್ಲಿ ಕಾಯಿದೆ ಮಾಡಲಾಗಿದೆ. ಇದನ್ನು ಪ್ರಶ್ನಿಸಿ ಅರಮನೆ ವಾರಸುದಾರರು ಹೈಕೋರ್ಟ್‌ಗೆ ಹೋದರೂ ಸದರಿ ಕಾನೂನಿನ ಸಾಂವಿಧಾನಿಕ ಸಿಂಧುತ್ವವನ್ನು ಹೈಕೋರ್ಟ್ ಎತ್ತಿ ಹಿಡಿದಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ವಾರಸುದಾರರು ಸುಪ್ರೀಂ ಕೋರ್ಟ್ ಮೊರೆ ಹೋದರು. ಈ ವೇಳೆ ಹೈಕೋರ್ಟ್‌ನ ಆದೇಶಕ್ಕೆ ಸುಪ್ರೀಂ ಕೋರ್ಟ್ ಯಾವುದೇ ತಡೆಯಾಜ್ಞೆ ನೀಡಿಲ್ಲ. ಹೀಗಾಗಿ ಮಾಲೀಕತ್ವ ರಾಜ್ಯ ಸರ್ಕಾರಕ್ಕೆ ಸೇರಿದ್ದೇ ಅಥವಾ ಅರಮನೆಗೆ ಸೇರಿದ್ದೇ ಎಂಬುದು ತೀರ್ಮಾನವಾಗಿಲ್ಲ.
ನಮ್ಮನ್ನು ಟಾರ್ಗೆಟ್ ಮಾಡ್ತಾ ಇದ್ದಾರೆ, ಹೋರಾಡುತ್ತೇನೆ ಬೆಂಗಳೂರು ಅರಮನೆ ಮೈದಾನಕ್ಕೆ ಸಂಬಂಧಿಸಿದ ದಾಖಲೆಗಳು ನನ್ನ ಬಳಿ ಇವೆ. ಆ ಜಾಗ ಶ್ರೀಕಂಠದತ್ತ ಒಡೆಯರ್, ಐವರು ಸೋದರಿಯರಿಗೆ ಸೇರಿದ್ದೆಂದು ತೀರ್ಪು ಬಂದಿದೆ. ಬಿಬಿಎಂಪಿ ಆಯುಕ್ತರೇ ರಸ್ತೆ ವಿಸ್ತರಣೆಗೆ ಜಾಗ ಬಳಸಿಕೊಳ್ಳುವ ಆಫರ್ ಕೊಟ್ಟು, ಟಿಡಿಆರ್ ನೀಡಿದ್ದರು. ನಾವು ಯಾರಿಗೂ ತೊಂದರೆ ಕೊಟ್ಟಿಲ್ಲ. ನಮ್ಮನ್ನು ಯಾರು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ನಾನು ಕಾನೂನು ಹೋರಾಟ ಮಾಡುತ್ತೇನೆ ಎಂದು ರಾಜವಂಶಸ್ಥೆ ಪ್ರಮೋದಾದೇವಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ