ಗುತ್ತಿಗೆದಾರರ ಕಟ್ಟಡ ನಿರ್ಮಾಣ ವೇಳೆ ಕೆಂಪಣ್ಣ ಅಕ್ರಮ, ಸಮಯ ಬಂದಾಗ ಬಣ್ಣ ಬಯಲು: ಸಿ.ಸಿ.ಪಾಟೀಲ್‌

By Kannadaprabha NewsFirst Published Aug 27, 2022, 1:00 AM IST
Highlights

ಮಾಂಸಾಹಾರ ಸೇವಿಸಿ ಚಾಮುಂಡೇಶ್ವರಿಗೆ ಪೂಜೆ, ಮೊಟ್ಟೆ ಎಸೆತ ಸೇರಿದಂತೆ ಕಾಂಗ್ರೆಸ್‌ ವಿರುದ್ಧದ ಹಿಂದುತ್ವ ವಿರೋಧಿ ಆರೋಪವನ್ನು ಮರೆಮಾಚಲು ಕೆಂಪಣ್ಣನವರ ಹೇಳಿಕೆ ಬಳಸಿಕೊಳ್ಳಲಾಗುತ್ತಿದೆ: ಪಾಟೀಲ್‌

ಬೆಂಗಳೂರು(ಆ.27):  ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರ ಮನೆಯಲ್ಲಿ ಸಭೆ ನಡೆಸಿ ಆಧಾರರಹಿತ ಆರೋಪ ಮಾಡಿದ್ದಾರೆ. ಗುತ್ತಿಗೆದಾರ ಸಂಘದ ಕಟ್ಟಡ ಕಟ್ಟುವಾಗ ಅಕ್ರಮ ನಡೆಸಿರುವ ಆರೋಪ ಕೆಂಪಣ್ಣ ಅವರ ಮೇಲೂ ಇದೆ. ಸಮಯ ಬಂದಾಗ ಎಲ್ಲವನ್ನೂ ಬಿಚ್ಚಿಡುತ್ತೇವೆ. ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ. ಪಾಟಿಲ್‌ ಎಚ್ಚರಿಕೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಶುಕ್ರವಾರ ಮಾತನಾಡಿದ ಅವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಂಘದವರೊಂದಿಗೆ ಸಭೆ ನಡೆಸಿದಾಗ ಪ್ಯಾಕೇಜ್‌ ಪದ್ಧತಿ ಕೈಬಿಡುವುದು ಸೇರಿದಂತೆ ಕೆಲವು ಸಲಹೆಗಳನ್ನು ಕೆಂಪಣ್ಣ ನೀಡಿದ್ದರು. ಟೆಂಡರ್‌ ಪರಿಶೀಲನೆಗೆ ನಿವೃತ್ತ ನ್ಯಾಯಾಧೀಶರ ನೇತೃತ್ವದ ಸಮಿತಿ ರಚನೆ ಸೇರಿದಂತೆ ಬಹುತೇಕ ಬೇಡಿಕೆಯನ್ನು ಮುಖ್ಯಮಂತ್ರಿಗಳು ಒಪ್ಪಿದ್ದರು. ಆದರೂ ಕಾಂಗ್ರೆಸ್‌ ನಿರ್ದೇಶನದಂತೆ ಕೆಂಪಣ್ಣ ಆಧಾರರಹಿತ ಆರೋಪಗಳನ್ನು ಕಳೆದ 14 ತಿಂಗಳಿಂದ ನಡೆಸುತ್ತಿದ್ದಾರೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕೈ ಮುಗೀತೇನೆ, ನನ್ನ ವಿರುದ್ಧ ಕೇಸ್‌ ಹಾಕಿ: ಕೆಂಪಣ್ಣ

‘ಗುತ್ತಿಗೆದಾರರ ಸಂಘ ಒಡೆಯುವ ಪ್ರಯತ್ನ ನಡೆಸಿದ್ದಾಗಿ ನನ್ನ ವಿರುದ್ಧ ಆರೋಪಿಸಿದ್ದಾರೆ. 2013ರಲ್ಲಿ ಉತ್ತರ ಕರ್ನಾಟಕದ ಗುತ್ತಿಗೆದಾರ ಸಂಘ ಆರಂಭವಾಗಿದ್ದು, ನಾನು ಸಚಿವನಾಗಿದ್ದು 3 ವರ್ಷದ ಹಿಂದೆ. ಮತ್ತೊಂದು ಸಂಘವಿರಬಾರದು ಎಂದು ಮನಸ್ಥಿತಿ ಏಕೆ ಎಂಬುದಕ್ಕೆ ಕೆಂಪಣ್ಣ ಉತ್ತರ ಕೊಡಬೇಕು’ ಎಂದು ಆಗ್ರಹಿಸಿದರು.

‘ಗುತ್ತಿಗೆದಾರರ ಸಂಘಕ್ಕೆ ಕೆಂಪಣ್ಣ ಚುನಾಯಿತ ಅಧ್ಯಕ್ಷರೇ? ಎಷ್ಟುವರ್ಷದಿಂದ ಅವರು ಅಧ್ಯಕ್ಷರಾಗಿದ್ದಾರೆ? ಲೋಕೋಪಯೋಗಿ ಇಲಾಖೆಯಿಂದ ಗುತ್ತಿಗೆದಾರರಿಗೆ ಅನ್ಯಾಯವಾಗಿರುವುದಾಗಿ ಅವರು ದೂರು ನೀಡಿದ್ದಾರೆಯೇ? ಎಷ್ಟುವರ್ಷದಿಂದ ಅವರು ಗುತ್ತಿಗೆದಾರರಾಗಿದ್ದಾರೆ ಎಂಬುದನ್ನು ತಿಳಿಸಲಿ. ಇನ್ನು ಗುತ್ತಿಗೆದಾರರ ಸಂಘದ ಕಟ್ಟಡ ನಿರ್ಮಾಣದಲ್ಲಿ ಏನಾನಾಗಿದೆ’ ಎಂಬುದನ್ನೂ ಬಿಚ್ಚಿಡುತ್ತೇವೆ ಎಂದರು.

ಕಾಂಗ್ರೆಸ್‌ನ ತಂತ್ರ:

ಮಾಂಸಾಹಾರ ಸೇವಿಸಿ ಚಾಮುಂಡೇಶ್ವರಿಗೆ ಪೂಜೆ, ಮೊಟ್ಟೆ ಎಸೆತ ಸೇರಿದಂತೆ ಕಾಂಗ್ರೆಸ್‌ ವಿರುದ್ಧದ ಹಿಂದುತ್ವ ವಿರೋಧಿ ಆರೋಪವನ್ನು ಮರೆಮಾಚಲು ಕೆಂಪಣ್ಣನವರ ಹೇಳಿಕೆ ಬಳಸಿಕೊಳ್ಳಲಾಗುತ್ತಿದೆ ಎಂದು ಸಚಿವರು ಆರೋಪಿಸಿದರು.
ಈ ಹಿಂದೆ ಒಮ್ಮೆ ಭೇಟಿಯಾದಾಗ ಅಸಂವಿಧಾನಿಕ ಪದ ಬಳಸಿದ್ದೀರಲ್ಲ ಎಂಬ ಪ್ರಶ್ನೆಗೆ ‘ಯಾರೋ ಬರೆದುಕೊಡುತ್ತಾರೆ..ನಾನು ದೂರು ನೀಡಿದ್ದೇನೆ ಎಂದು ಕೆಂಪಣ್ಣ ಹೇಳಿದ್ದರು. ಹಾಗಾಗಿ ಯಾರದ್ದೋ ನಿರ್ದೇಶನದಂತೆ ಕೆಂಪಣ್ಣ ಕೆಲಸ ಮಾಡುತ್ತಿರುವುದು ಸ್ಪಷ್ಟ’ ಎಂದು ಹೇಳಿದರು.
 

click me!