
ಬೆಂಗಳೂರು (ಜೂ.13): ಕೇರಳದ ತ್ರಿಶೂರ್ ಜಿಲ್ಲೆಯ ಪುಥೂರ್‌ನಲ್ಲಿ ಅಲ್ಲಿನ ಸರ್ಕಾರ ನೂತನವಾಗಿ ಆರಂಭಿಸುತ್ತಿರುವ ಜೈವಿಕ ಉದ್ಯಾನದಲ್ಲಿ ವನ್ಯಜೀವಿ ಮತ್ತು ಪಕ್ಷಿಗಳ ನಿರ್ವಹಣೆಗೆ ಅಗತ್ಯ ನೈಪುಣ್ಯತೆ ಮತ್ತು ಜ್ಞಾನ ವಿನಿಮಯಕ್ಕೆ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಸಮ್ಮತಿಸಿದ್ದಾರೆ. ಗುರುವಾರ ವಿಕಾಸಸೌಧದಲ್ಲಿ ತಮ್ಮನ್ನು ಭೇಟಿಯಾದ ಕೇರಳದ ಅರಣ್ಯ ಸಚಿವ ಎ.ಕೆ. ಸಶೀಂದ್ರನ್ ಅವರು ತಮ್ಮ ಇಲಾಖೆಯಿಂದ ಕೇರಳದಲ್ಲಿ ಆರಂಭಿಸಲಾಗುತ್ತಿರುವ ಪ್ರಥಮ ಜೈವಿಕ ಉದ್ಯಾನದಲ್ಲಿ ವನ್ಯಜೀವಿಗಳ ನಿರ್ವಹಣೆ ಕುರಿತಂತೆ ತಾಂತ್ರಿಕ ನೈಪುಣ್ಯತೆ ಹಂಚಿಕೊಳ್ಳುವಂತೆ ಮನವಿ ಮಾಡಿದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಖಂಡ್ರೆ, ಅಗತ್ಯ ನೈಪುಣ್ಯತೆ ಮತ್ತು ಜ್ಞಾನ ವಿನಿಮಯಕ್ಕೆ ಒಪ್ಪಿಗೆ ಸೂಚಿಸಿದರು. ಕೇರಳ ಅರಣ್ಯ ಇಲಾಖೆಯ ಮುಖ್ಯ ವನ್ಯಜೀವಿ ಪರಿಪಾಲಕ ಪ್ರಮೋದ್ ಜಿ. ಕೃಷ್ಣನ್ ಮತ್ತು ಕರ್ನಾಟಕದ ಅರಣ್ಯ ಇಲಾಖೆಯ ಉನ್ನತಾಧಿಕಾರಿಗಳಾದ ಮೀನಾಕ್ಷಿ ನೇಗಿ, ಸುಭಾಷ್ ಮಲ್ಕಡೆ, ಸುನೀಲ್ ಪನ್ವಾರ್, ಸೂರ್ಯ ಸೇನ್ ಮತ್ತಿತರರು ಸಭೆಯಲ್ಲಿ ಭಾಗಿಯಾಗಿದ್ದರು.
ಅರಣ್ಯ ಭೂಮಿ ಉಳುಮೆಗೆ ವಿಶೇಷ ಪ್ರಸ್ತಾವನೆ: ಅರಣ್ಯ ಕಾಯಿದೆ 1963ರ ಸೆಕ್ಷನ್ 4ರ ಅಡಿ ಅಧಿಸೂಚನೆ ಹೊರಡಿಸಿದ ಬಳಿಕ ಮಂಜೂರಾಗಿ 30-40 ವರ್ಷಗಳಿಂದ ಮನೆ ಕಟ್ಟಿ, ಉಳುಮೆ ಮಾಡುತ್ತಿರುವ ರೈತರಿಗೆ ನ್ಯಾಯ ಒದಗಿಸಲು ಕೇಂದ್ರ ಹಾಗೂ ಸುಪ್ರೀಂ ಕೋರ್ಟ್‌ಗೆ ವಿಶೇಷ ಪ್ರಸ್ತಾವನೆ ಸಲ್ಲಿಸುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಭರವಸೆ ನೀಡಿದ್ದಾರೆ. ವಿಕಾಸಸೌಧದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ಹಾಗೂ ಅರಣ್ಯ, ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ರೈತರಿಗೆ ಶಾಶ್ವತ ಪರಿಹಾರ ಒದಗಿಸಲು ಸಂಬಂಧಪಟ್ಟ ಜಮೀನನ್ನು ಡೀಮ್ಡ್ ಅರಣ್ಯ ವ್ಯಾಪ್ತಿಯಿಂದ ಕೈಬಿಡಬೇಕು.
ಅದಕ್ಕೆ ಪರಿಹಾರವಾಗಿ ಅರಣ್ಯೇತರ ಕಂದಾಯ ಭೂಮಿಯನ್ನು ನೀಡಿ ಅಲ್ಲಿ ಅರಣ್ಯೀಕರಣ ಮಾಡುತ್ತೇವೆ ಎಂದು ಸುಪ್ರೀಂ ಕೋರ್ಟ್ ಹಾಗೂ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವುದಾಗಿ ಎಂದು ಭರವಸೆ ನೀಡಿದರು. ಅರಣ್ಯ ಕಾಯಿದೆ 1963ರ ಸೆಕ್ಷನ್ 4ರಡಿ ಅಧಿಸೂಚನೆ ಆಗುವ ಮುನ್ನ ಮಂಜೂರಾಗಿರುವ ಭೂಮಿಯನ್ನು ಅರಣ್ಯದಿಂದ ಕೈಬಿಡಲು ಸರ್ಕಾರಕ್ಕೆ ಅವಕಾಶವಿದೆ. ಆದರೆ ಅಧಿಸೂಚನೆ ಹೊರಡಿಸಿದ ಬಳಿಕ ಮಂಜೂರಾಗಿರುವ ಜಮೀನು, ವಸತಿ ಪ್ರದೇಶ, ಪಟ್ಟಾಭೂಮಿ ಇತ್ಯಾದಿ ಇರುವ ಜಾಗವನ್ನು ಡೀಮ್ಡ್ ಅರಣ್ಯದಿಂದ ಕೈಬಿಡಬೇಕು.
ಈ ಜಮೀನಿಗೆ ಪರ್ಯಾಯವಾಗಿ ಬೇರೆಡೆ ಲಭ್ಯವಿರುವ ಅರಣ್ಯೇತರ ಭೂಮಿ ನೀಡುತ್ತೇವೆ ಎಂದು ಮನವಿ ಸಲ್ಲಿಸಲಾಗುವುದು ಎಂದು ಖಂಡ್ರೆ ತಿಳಿಸಿದರು. ಹಾಸನ ಜಿಲ್ಲೆಯ ಅರಸೀಕೆರೆ ವ್ಯಾಪ್ತಿಯಲ್ಲಿನ ಕರಡಿ ಧಾಮದ ಸುತ್ತ ಪ್ರಸ್ತುತ 10 ಕಿ.ಮೀ. ಬಫರ್ ವಲಯ ಎಂದು ಘೋಷಿಸಲಾಗಿರುವ ಕಾರಣ ಗಡಿ ಭಾಗದ ಚಿಕ್ಕಮಗಳೂರು ರೈತರೂ ಸಂಕಷ್ಟ ಎದುರಿಸುವಂತಾಗಿದೆ ಎಂಬ ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು, ಈ ಮಿತಿಯನ್ನು 1 ಕಿ.ಮೀ.ಗೆ ಇಳಿಕೆ ಮಾಡಲು ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. ಶೀಘ್ರವೇ ಈ ಸಮಸ್ಯೆ ಬಗೆಹರಿಯುತ್ತದೆ ಎಂದು ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ