
ಧಾರವಾಡ (ಜೂ.13): ಒಂಬತ್ತು ವರ್ಷಗಳ ಹಿಂದೆ ನಡೆದ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರಿಗೆ ಜಾಮೀನು ರದ್ದಾಗಿದ್ದು, ಶುಕ್ರವಾರ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಅವರು ಶರಣಾಗಲಿದ್ದಾರೆ.
ಕೊಲೆ ಪ್ರಕರಣ ಸಂಬಂಧ ಸಾಕ್ಷಿಗಳ ವಿಚಾರಣೆ ಕೈಗೆತ್ತಿಕೊಂಡಿರುವ ನ್ಯಾಯಾಲಯ ಮಂಗಳವಾರ ವಿನಯ್ ಕುಲಕರ್ಣಿಗೂ ವಿಚಾರಣೆಗೆ ಹಾಜರಾಗಲು ಸೂಚಿಸಿತ್ತು. ಆದರೆ, ಅವರು ವಿಚಾರಣೆಗೆ ಗೈರು ಹಾಜರಾಗಿದ್ದರು. ವಿಚಾರಣೆ ವೇಳೆ, ವಿನಯ್ ಪರ ವಕೀಲರು ಗೈರು ಹಾಜರಿಗೆ ಕೆಲ ಕಾರಣ ನೀಡಿ, ಹಾಜರಾತಿಗೆ ವಿನಾಯಿತಿ ಕೋರಿದ್ದರು. ಇದಕ್ಕೆ ಸಮ್ಮತಿ ಸೂಚಿಸಿದ್ದ ನ್ಯಾಯಾಲಯ, ವಿಚಾರಣೆಯನ್ನು ಶುಕ್ರವಾರಕ್ಕೆ ಮುಂದೂಡಿತ್ತು.
ಇದೇ ಪ್ರಕರಣದಲ್ಲಿ ಜೂ.6ರಂದು ಸುಪ್ರೀಂಕೋರ್ಟ್ ವಿನಯ್ ಕುಲಕರ್ಣಿಗೆ ಜಾಮೀನು ರದ್ದುಗೊಳಿಸಿದ್ದು, ಒಂದು ವಾರದೊಳಗೆ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದ ಅವರು, ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಶುಕ್ರವಾರ ಶರಣಾಗುವುದಾಗಿ ತಿಳಿಸಿದ್ದರು. ತಮ್ಮ ಅನುಪಸ್ಥಿತಿಯಲ್ಲಿ ಕ್ಷೇತ್ರವನ್ನು ತಮ್ಮ ಪತ್ನಿ ಮತ್ತು ಮಗಳು ನೋಡಿಕೊಳ್ಳುತ್ತಾರೆ. ಅವರಿಗೆ ಸಹಕಾರ ನೀಡಬೇಕು ಎಂದು ತಮ್ಮ ಕ್ಷೇತ್ರದ ಜನರಿಗೆ ಮನವಿ ಮಾಡಿದ್ದರು. ಈ ಮಧ್ಯೆ, ಶುಕ್ರವಾರ ಸಿಬಿಐ ಅಧಿಕಾರಿಗಳು ಅವರನ್ನು ಬಂಧಿಸುವ ಸಾಧ್ಯತೆಯೂ ಇದೆ.
ಬಂಧನ ಭೀತಿ: 2016ರಲ್ಲಿ ಧಾರವಾಡದಲ್ಲಿ ನಡೆದ ಬಿಜೆಪಿ ನಾಯಕ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಕಾಂಗ್ರೆಸ್‌ನ ಧಾರವಾಡ ಗ್ರಾಮಾಂತರ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರ ಜಾಮೀನನ್ನು ಸುಪ್ರೀಂ ಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ. ಇದರಿಂದ ಅವರಿಗೆ ಮತ್ತೆ ಬಂಧನ ಭೀತಿ ಶುರುವಾಗಿದೆ. 2020ರಲ್ಲಿ ಬಂಧಿಸಲ್ಪಟ್ಟು 2021ರಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ಕುಲಕರ್ಣಿ ಅವರ ಮೇಲೆ ಸಾಕ್ಷಿಗಳ ಮೇಲೆ ಪ್ರಭಾವ ಬೀರಿದ ಆರೋಪ ಹೊರಿಸಲಾಗಿತ್ತು. ಜಾಮೀನು ಷರತ್ತುಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕರ್ನಾಟಕ ಸರ್ಕಾರ ಜಾಮೀನು ರದ್ದುಗೊಳಿಸುವಂತೆ ಕೋರಿತ್ತು.
ನ್ಯಾಯಾಲಯವು ಮನವಿಯನ್ನು ಸ್ವೀಕರಿಸಿ ಅವರ ಜಾಮೀನನ್ನು ರದ್ದುಗೊಳಿಸಿದೆ. 2023ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಪಡೆದು ಕ್ಷೇತ್ರದ ಹೊರಗಿದ್ದರೂ ಗೆಲುವು ಸಾಧಿಸುವ ಮೂಲಕ ವಿನಯ ಕುಲಕರ್ಣಿ ಇತಿಹಾಸ ನಿರ್ಮಿಸಿದ್ದರು. ಎರಡು ವರ್ಷಗಳ ಕಾಲ ಕ್ಷೇತ್ರದ ಹೊರಗಿದ್ದುಕೊಂಡೇ ಆಡಳಿತ ಮಾಡಿದ್ದ ಅವರು, ಇದೀಗ ಜಾಮೀನು ರದ್ದಾಗಿರುವ ಹಿನ್ನೆಲೆಯಲ್ಲಿ ಮತ್ತೆ ಜೈಲು ಪಾಲಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ಹಾಗೂ ಕಾರ್ಯಕರ್ತರು ಚಿಂತೆಗೀಡು ಆಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ