ರೋಗಿ ದಾಖಲಿಸಿಕೊಳ್ಳದಿದ್ರೆ ಕ್ರಿಮಿನಲ್‌ ಕೇಸ್‌: ಸುಧಾ​ಕ​ರ್‌ ಎಚ್ಚರಿಕೆ!

By Kannadaprabha NewsFirst Published Jul 14, 2020, 8:14 AM IST
Highlights

ರೋಗಿ ದಾಖಲಿಸಿಕೊಳ್ಳದಿದ್ರೆ ಕ್ರಿಮಿನಲ್‌ ಕೇಸ್‌: ಸುಧಾ​ಕ​ರ್‌| ಇನ್ನು ಎಚ್ಚರಿಕೆ ನೀಡೋದಿಲ್ಲ: ಖಾಸಗಿ ಆಸ್ಪತ್ರೆ ಮಾಲಿಕರಿಗೆ ಡಾ| ಸುಧಾಕರ್‌ ಎಚ್ಚರಿಕೆ| ಕೋವಿಡ್‌, ಕೋವಿಡೇತರ ರೋಗಿಗಳ ಅಡ್ಮಿಟ್‌ ಮಾಡಿಕೊಳ್ಳೋದು ಕಡ್ಡಾಯ| ಬೆಂಗಳೂರಿನ 2-3 ಆಸ್ಪತ್ರೆ ವಿರುದ್ಧ ಒಂದೆರಡು ದಿನದಲ್ಲಿ ಕೇಸ್‌ ದಾಖಲು

ಬೆಂಗಳೂರು(ju.14): ಖಾಸಗಿ ಆಸ್ಪತ್ರೆ ಹಾಗೂ ವೈದ್ಯಕೀಯ ಕಾಲೇಜುಗಳು ತಮ್ಮ ಬಾಗಿಲಿಗೆ ಬರುವ ಕೋವಿಡ್‌ ಹಾಗೂ ಕೋವಿಡೇತರ ಸೇರಿದಂತೆ ಯಾವುದೇ ರೋಗಿಯನ್ನು ಚಿಕಿತ್ಸೆಗೆ ದಾಖಲಿಸಿಕೊಳ್ಳಬೇಕು. ಈ ಆದೇಶ ಉಲ್ಲಂಘಿಸುವವರಿಗೆ ಇನ್ನು ಎಚ್ಚರಿಕೆ ನೀಡುವುದಿಲ್ಲ, ನೇರವಾಗಿ ಆಸ್ಪತ್ರೆಯ ಮಾಲಿಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಖಡಕ್‌ ಆಗಿ ಹೇಳಿದ್ದಾರೆ. ಅಷ್ಟೇ ಅಲ್ಲ, ಸರ್ಕಾರದ ಆದೇಶವನ್ನು ಉಲ್ಲಂಘಿಸಿರುವ ನಗರದ ಇಂತಹ ಎರಡು-ಮೂರು ಆಸ್ಪತ್ರೆಗಳ ವಿರುದ್ಧ ಒಂದೆರಡು ದಿನಗಳಲ್ಲೇ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗುತ್ತಿದೆ ಎಂದೂ ತಿಳಿಸಿದ್ದಾರೆ.

ಕೋವಿಡ್‌ ಸಲಕರಣೆ ಬಾಡಿಗೆ ಪಡೆದಿದ್ದಕ್ಕೆ ಸಿಎಂ ಗರಂ!

ಸೋಮವಾರ ಸುದ್ದಿಗೋಷ್ಠಿ ನಡೆಸಿದ ಅವರು, ಸರ್ಕಾರ ಸತತವಾಗಿ ಹೇಳುತ್ತಿದ್ದರೂ ಖಾಸಗಿ ಆಸ್ಪತ್ರೆಗಳು, ವೈದ್ಯಕೀಯ ಕಾಲೇಜುಗಳ ಆಸ್ಪತ್ರೆಗಳು ಚಿಕಿತ್ಸೆಗಾಗಿ ಬರುವ ಕೋವಿಡ್‌ ಹಾಗೂ ಕೋವಿಡೇತರ ರೋಗಿಗಳನ್ನು ತಕ್ಷಣ ದಾಖಲಿಸಿಕೊಳ್ಳದೆ ಸತಾಯಿಸುತ್ತಿವೆ. ರೋಗಿಗಳಿಗೆ ಕೊರೋನಾ ಪರೀಕ್ಷಾ ವರದಿ ಕೇಳುವುದು, ವರದಿ ಇಲ್ಲದಿದ್ದರೆ ಪರೀಕ್ಷೆ ಮಾಡಿಸಿಕೊಂಡು ಬರುವಂತೆ ಸೂಚಿಸುತ್ತಿರುವ ಬಗ್ಗೆ ದೂರುಗಳು ಹೆಚ್ಚಾಗುತ್ತಿವೆ. ಇದನ್ನು ಸರ್ಕಾರ ಸಹಿಸುವುದಿಲ್ಲ.

ಈ ರೀತಿಯ ಧೋರಣೆ ಮುಂದುವರೆದರೆ ಮುಲಾಜಿಲ್ಲದೆ ಕ್ರಿಮಿನಲ್‌ ಕೇಸು ದಾಖಲಿಸುವಂತೆ ಮುಖ್ಯಮಂತ್ರಿ ಅವರು ಸೋಮವಾರದ ಸಭೆಯಲ್ಲಿ ಸ್ಪಷ್ಟಸೂಚನೆ ನೀಡಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡುವಂತೆ ಸರ್ಕಾರ ಅಸಹಾಯಕತೆಯಿಂದ ಖಾಸಗಿ ಆಸ್ಪತ್ರೆ ಮಾಲಿಕರನ್ನು ಬೇಡುತ್ತಿಲ್ಲ. ಸಂಕಷ್ಟದ ಕಾಲದಲ್ಲಿ ಸರ್ಕಾರದ ಜೊತೆ ಕೈಜೋಡಿಸಿ ಎಂದು ಹೇಳುತ್ತಿದೆ.

ಇದಕ್ಕೆ ಸ್ಪಂದಿಸದೆ ಹಣ ಗಳಿಕೆಗೆ ಆದ್ಯತೆ ನೀಡುವ ಧೋರಣೆಯನ್ನು ಇನ್ನು ಸಹಿಸುವುದಿಲ್ಲ. ಇಂತಹವರಿಗೆ ಇನ್ಮುಂದೆ ಯಾವ ಸೂಚನೆ, ಎಚ್ಚರಿಕೆ ನೀಡುವ ಪ್ರಶ್ನೆ ಇಲ್ಲ. ಸರ್ಕಾರ ಕಳುಹಿಸುವ ಕೋವಿಡ್‌ ರೋಗಿಗಳೂ ಸೇರಿದಂತೆ ಯಾವುದೇ ರೋಗಿಗಳನ್ನು ದಾಖಲಿಸಿಕೊಳ್ಳಲು ನಿರಾಕರಿಸುವವರ ವಿರುದ್ಧ ನೇರವಾಗಿ ಕೇಸು ದಾಖಲಿಸಲಾಗುವುದು ಎಂದರು.

ಬಿಬಿಎಂಪಿ ನಂಬಿಕೊಂಡರೆ ನಗರದಲ್ಲಿ ಭೀಕರ ಸ್ಥಿತಿ ಸೃಷ್ಟಿ: ಹೈಕೋರ್ಟ್‌ ಕಿಡಿ

ಖಾಸಗಿ ಲ್ಯಾಬ್‌ಗಳ ವಿರುದ್ಧವೂ ಕ್ರಮ:

ಸರ್ಕಾರ ಕಳುಹಿಸುವ ಕೋವಿಡ್‌ ಸ್ಯಾಂಪಲ್‌ ಪರೀಕ್ಷಿಸದ ಹಾಗೂ ತಡ ಮಾಡುವ ಖಾಸಗಿ ಪ್ರಯೋಗಾಲಯಗಳ ಪರವಾನಗಿ ರದ್ದುಗೊಳಿಸುವಂತೆ ಭಾರತೀಯ ವೈದ್ಯಕೀಯ ಮಂಡಳಿಗೆ(ಎಂಸಿಐ) ಪತ್ರ ಬರೆಯುವುದಾಗಿಯೂ ಇದೇ ವೇಳೆ ಸಚಿವರು ಎಚ್ಚರಿಸಿದರು.

ಈ ಸಂಬಂಧ ಮುಖ್ಯಮಂತ್ರಿಗಳು ಸ್ಪಷ್ಟಸೂಚನೆ ನೀಡಿದ್ದಾರೆ. ಸರ್ಕಾರದ ಆದೇಶ ಪಾಲಿಸದ ಲ್ಯಾಬ್‌ಗಳ ಲೈಸನ್ಸ್‌ ವಾಪಸ್‌ ಪಡೆಯುವಂತೆ ಎಂಸಿಐಗೆ ಪತ್ರ ಬರೆಯಲು ನಿರ್ದೇಶನ ನೀಡಿದ್ದಾರೆ. ಅದರಂತೆ ಇನ್ಮುಂದೆ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

.75 ಸೋಂಕಿತರ ಸಾವಿಗೆ ಕೋವಿಡ್‌ ಒಂದೇ ಕಾರಣವಲ್ಲ!

ರಾಜ್ಯದಲ್ಲಿ ಇದುವರೆಗೂ ಮೃತಪಟ್ಟಿರುವ ಒಟ್ಟು ಕೊರೋನಾ ಸೋಂಕಿತರ ಪೈಕಿ ಸುಮಾರು ಶೇ.75ರಷ್ಟುಜನರ ಸಾವಿಗೆ ಕೋವಿಡ್‌ ಸೋಂಕು ಒಂದೇ ಕಾರಣವಲ್ಲ, ಅವರಿಗೆ ಮೊದಲೇ ಇದ್ದ ಬೇರೆ ಕಾಯಿಲೆಗಳೂ ಕಾರಣವಾಗಿವೆ. ಈ ಬಗ್ಗೆ ತಜ್ಞರು ವರದಿ ಸಿದ್ಧಪಡಿಸಿದ್ದು, ಎರಡು ದಿನಗಳಲ್ಲಿ ಪೂರ್ಣ ಮಾಹಿತಿ ನೀಡುವುದಾಗಿ ಇದೇ ವೇಳೆ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

ಬೆಂಗ್ಳೂರಿಂದ ಸೋಮವಾರ ಲಕ್ಷಾಂತರ ಜನ ಗುಳೆ!

ಸೋಮವಾರದವರೆಗೆ ರಾಜ್ಯದಲ್ಲಿ 757 ಮಂದಿ ಕೊರೋನಾ ಸೋಂಕಿತರು ಮೃತಪಟ್ಟಿದ್ದು, ಈ ಪೈಕಿ ಶೇ.60ರಿಂದ 75ರಷ್ಟುಜನರ ಸಾವಿಗೆ ಸೋಂಕಿನ ಜತೆಗೆ ಅನ್ಯ ರೋಗಗಳೂ ಕಾರಣವಾಗಿವೆ. ಶೇ.25ರಷ್ಟುಜನ ಮಾತ್ರ ಕೋವಿಡ್‌ನಿಂದ ಮೃತಪಟ್ಟಿದ್ದಾರೆ ಎಂದರು.

ಬೆಂಗಳೂರಿಗೆ 200 ಹೆಚ್ಚುವರಿ ಆಂ್ಯಬುಲೆನ್ಸ್‌:

ಕೋವಿಡ್‌ ಸೋಂಕಿತರ ಸೇವೆಗೆ ಬೆಂಗಳೂರಿಗೆ ಈಗಿರುವ 400ಕ್ಕೂ ಹೆಚ್ಚು ಆಂ್ಯಬುಲೆನ್ಸ್‌ ಜೊತೆಗೆ ಇನ್ನೂ 200 ಹೆಚ್ಚುವರಿ ಆಂ್ಯಬುಲೆನ್ಸ್‌ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಅವರು ಬಿಬಿಎಂಪಿ ಆಯುಕ್ತರಿಗೆ ಸೂಚಿಸಿದ್ದಾರೆ. ಜೊತೆಗೆ ಮೆಡಿಕಲ್‌ ಕಾಲೇಜುಗಳಲ್ಲಿ ಡಿಜಿಟಲ್‌ ಎಕ್ಸರೇ ಯಂತ್ರಗಳ ಖರೀದಿಗೂ ಆದೇಶ ಮಾಡಿದ್ದಾರೆ.

ಕೋವಿಡ್‌ ಆಸ್ಪತ್ರೆಯ ಡಿ ಗ್ರೂಪ್‌ ನೌಕರರಿಗೆ ಈಗಿರುವುದಕ್ಕೆ ಎರಡು ಪಟ್ಟು ಹೆಚ್ಚು ರಿಸ್ಕ್‌ ಭತ್ಯೆ ನೀಡಲು ಹಾಗೂ ಅಗತ್ಯವಿರುವೆಡೆ ಕನಿಷ್ಠ ಆರು ತಿಂಗಳ ಅವಧಿಗೆ ತಾತ್ಕಾಲಿಕ ವೈದ್ಯರು ಮತ್ತು ನರ್ಸ್‌ಗಳ ನೇಮಕಕ್ಕೆ ಅನುಮತಿ ನೀಡಿದ್ದಾರೆ ಎಂದು ಹೇಳಿದರು.

click me!