ಕೋವಿಡ್‌ ಸಲಕರಣೆ ಬಾಡಿಗೆ ಪಡೆದಿದ್ದಕ್ಕೆ ಸಿಎಂ ಗರಂ!

By Kannadaprabha NewsFirst Published Jul 14, 2020, 8:07 AM IST
Highlights

ಕೋವಿಡ್‌ ಸಲಕರಣೆ ಬಾಡಿಗೆ ಪಡೆದಿದ್ದಕ್ಕೆ ಸಿಎಂ ಗರಂ| ಹಾಸಿಗೆ, ಉಪಕರಣಗಳನ್ನು ಖರೀದಿಸದೆ ಬಾಡಿಗೆ ಪಡೆದಿದ್ದೇಕೆ?| ಈ ನಿರ್ಧಾರ ಕೈಗೊಂಡವರು ಯಾರು: ಬಿಎಸ್‌ವೈ ತರಾಟೆ

ಬೆಂಗಳೂರು(ಜು.14): ಮಹಾಮಾರಿ ಕೋವಿಡ್‌ ನಿಯಂತ್ರಣ ಸಂಬಂಧ ವ್ಯವಸ್ಥೆ ಮಾಡಲಾಗಿರುವ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ಹಾಸಿಗೆಗಳು, ಉಪಕರಣಗಳು ಸೇರಿದಂತೆ ಅಗತ್ಯ ಸೌಲಭ್ಯಗಳನ್ನು ಬಾಡಿಗೆ ಆಧಾರದ ಮೇಲೆ ಪಡೆದಿರುವುದಕ್ಕೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಯಲ್ಲಿ ಸೋಮವಾರ ಯಡಿಯೂರಪ್ಪ ಅಧ್ಯಕ್ಷತೆಯ ಟಾಸ್ಕ್‌ಪೋರ್ಸ್‌ ಸಭೆ ನಡೆಯಿತು. ಈ ವೇಳೆ ತಮ್ಮ ಗಮನಕ್ಕೆ ತಾರದೆ ಇಂತಹ ದೊಡ್ಡ ತೀರ್ಮಾನ ಕೈಗೊಂಡಿರುವುದಕ್ಕೆ ಸಚಿವರು ಮತ್ತು ಅಧಿಕಾರಿಗಳ ವಿರುದ್ಧ ಕೆಂಡಾಮಂಡಲರಾದರು. ಅಲ್ಲದೇ, ಈ ತೀರ್ಮಾನವನ್ನು ಕೈಗೊಂಡವರು ಯಾರು ಎಂದು ಖಾರವಾಗಿ ಪ್ರಶ್ನಿಸಿದರು ಎಂದು ಮೂಲಗಳು ಹೇಳಿವೆ.

ಬಿಬಿಎಂಪಿ ನಂಬಿಕೊಂಡರೆ ನಗರದಲ್ಲಿ ಭೀಕರ ಸ್ಥಿತಿ ಸೃಷ್ಟಿ: ಹೈಕೋರ್ಟ್‌ ಕಿಡಿ

ನಗರದ ತುಮಕೂರು ರಸ್ತೆಯ ಬಿಐಇಸಿಯಲ್ಲಿ (ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರ) ಅಳವಡಿಸಲಾಗಿರುವ ಸಾವಿರಾರು ಹಾಸಿಗೆಗಳನ್ನು ಖರೀದಿಸದೆ ಯಾಕೆ ಬಾಡಿಗೆ ಪಡೆದುಕೊಳ್ಳಲಾಗಿದೆ. ಎರಡು ತಿಂಗಳ ಕಾಲ ಹಾಸಿಗೆಗಳ ಬಾಡಿಗೆ ಮೊತ್ತ ಎಷ್ಟಾಗುತ್ತದೆ? ಪ್ರತಿಪಕ್ಷಗಳು ಈಗಾಗಲೇ ಆರೋಗ್ಯ ಇಲಾಖೆಯಲ್ಲಿ ಅಕ್ರಮ ನಡೆದಿದೆ. ಉಪಕರಣ, ಔಷಧಿ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂಬುದಾಗಿ ಆರೋಪಿಸಿ ಹೋರಾಟ ಪ್ರಾರಂಭಿಸಿವೆ. ಇಂತಹ ಸಮಯದಲ್ಲಿ ಇಂತಹ ತೀರ್ಮಾನ ಕೈಗೊಂಡಿರುವುದು ಪ್ರತಿಪಕ್ಷಗಳಿಗೆ ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಲು ಅಸ್ತ್ರ ಸಿಕ್ಕಂತಾಗುವುದಿಲ್ಲವೇ? ಯಾವ ಕಾರಣ ಇಂತಹ ನಿರ್ಧಾರ ಕೈಗೊಳ್ಳಲಾಗಿದೆ. ಹಾಸಿಗೆಗಳನ್ನು ಬಾಡಿಗೆಗೆ ತೆಗೆದುಕೊಳ್ಳುವ ತೀರ್ಮಾನದಿಂದ ಜನರಲ್ಲಿ ತಪ್ಪು ಭಾವನೆ ಮೂಡಿಸಲು ದಾರಿ ಮಾಡಿಕೊಡಲಿದೆ ಎಂದು ಯಡಿಯೂರಪ್ಪ ಅವರು ತರಾಟೆಗೆ ತೆಗೆದುಕೊಂಡರು.

ಕೊರೋನಾ ಸೋಂಕಿತರನ್ನು ಶೀಘ್ರವಾಗಿ ಆಸ್ಪತ್ರೆಗೆ ಕರೆದೊಯ್ಯುವುದಕ್ಕೆ ಸಹಕಾರಿಯಾಗಲು ಆ್ಯಂಬುಲೆನ್ಸ್‌ಗಳನ್ನು ಖರೀದಿಸುವಂತೆ ಸೂಚನೆ ನೀಡಿ 15 ದಿನಗಳು ಕಳೆದಿವೆ. ಆದರೆ, ಈವರೆವಿಗೂ ಆ್ಯಂಬುಲೆನ್ಸ್‌ ಖರೀದಿ ಮಾಡಿಲ್ಲ. ಯಾವ ಕಾರಣಕ್ಕಾಗಿ ಖರೀದಿಸಿಲ್ಲ. ಖಾಸಗಿ ಆಸ್ಪತ್ರೆಗಳು ಹಾಸಿಗೆಗಳನ್ನು ಸರ್ಕಾರಕ್ಕೆ ಯಾವ ಕಾರಣಕ್ಕಾಗಿ ನೀಡುತ್ತಿಲ್ಲ. ತಕ್ಷಣ ಇದೆಲ್ಲವನ್ನು ಒಂದೆರೆಡು ದಿನದಲ್ಲಿ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ನನ್ನ ಬಳಿ ಯಾರು ಬರಬೇಡಿ. ಮುಖ್ಯಮಂತ್ರಿಗಳ ಆದೇಶವನ್ನು ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂದರೆ ಹೇಗೆ ಎಂದು ಕಿಡಿಕಾರಿದರು ಎನ್ನಲಾಗಿದೆ.

ಬೆಂಗ್ಳೂರಿಂದ ಸೋಮವಾರ ಲಕ್ಷಾಂತರ ಜನ ಗುಳೆ!

ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಆರೋಗ್ಯ ಸಚಿವ ಬಿ.ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌, ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್‌ ಮತ್ತಿತರರು ಪಾಲ್ಗೊಂಡಿದ್ದರು.

ಆ್ಯಂಬುಲೆನ್ಸ್‌ಗಳನ್ನು ಖರೀದಿಸುವಂತೆ ಸೂಚನೆ ನೀಡಿ 15 ದಿನಗಳು ಕಳೆದರೂ ಖರೀದಿ ಮಾಡಿಲ್ಲ. ಖಾಸಗಿ ಆಸ್ಪತ್ರೆಗಳಿಂದ ಹಾಸಿಗೆ ಪಡೆಯುವಂತೆ ಸೂಚಿಸಿದರೂ ಇನ್ನೂ ಆಗಿಲ್ಲ. ಇದೆಲ್ಲವನ್ನೂ ಒಂದೆರಡು ದಿನದಲ್ಲಿ ಮಾಡಬೇಕು. ಇಲ್ಲದಿದ್ದರೆ ನನ್ನ ಬಳಿ ಯಾರೂ ಬರಬೇಡಿ. ಮುಖ್ಯಮಂತ್ರಿಗಳ ಆದೇಶವನ್ನೂ ಸರಿಯಾಗಿ ಪಾಲನೆ ಮಾಡುತ್ತಿಲ್ಲ ಎಂದರೆ ಹೇಗೆ?

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

click me!