ಕೋವಿಡ್ ಸೋಂಕು ಹತೋಟಿಗೆ ರಾಜಕೀಯ ಸಹಕಾರ ಅಗತ್ಯ: ಸಚಿವ ಸುಧಾಕರ್| ಜನರಿಗೆ ಕೊರೋನಾ ಕುರಿತು ತಿಳುವಳಿಕೆ ಹೇಳುವುದು ಮೊದಲ ಕರ್ತವ್ಯ| ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ಕೊರೋನಾ ಕುರಿತು ತಪ್ಪು ಮಾಹಿತಿ ಹರಡಲಾಗುತ್ತದೆ| ಕೆಲ ದೃಶ್ಯ ಮಾಧ್ಯಮಗಳ ಆತಂಕದ ಸುದ್ದಿಗಳು ನನಗೆ ಹೆದರಿಸಿವೆ| ವೈಜ್ಞಾನಿಕವಾಗಿ ರೋಗ ಅಷ್ಟು ಭಯಾನಕವಾಗಿಲ್ಲ|
ಬೆಂಗಳೂರು(ಜು.14): ರಾಜ್ಯದಲ್ಲಿ ಕೊರೋನಾ ನಿಯಂತ್ರಣ ಸಲುವಾಗಿ ಬೆಂಗಳೂರು ಮಾತ್ರವಲ್ಲದೆ ಜಿಲ್ಲಾ ಕೇಂದ್ರಗಳಲ್ಲಿ ಸಹ ಸಾವಿರಾರು ಬೆಡ್‌ಗಳ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ. ಕೊರೋನಾ ನಿಯಂತ್ರಣ ಜನ ಜಾಗೃತಿ ಸಂಬಂಧ ‘ಸಮರ್ಥ ಭಾರತ’ ಸಂಘಟನೆ ಸೋಮವಾರ ಆಯೋಜಿಸಿದ್ದ ಫೇಸ್‌ಬುಕ್ ಲೈವ್‌ನಲ್ಲಿ ಮಾತನಾಡಿದ ಸಚಿವರು, ಸೋಂಕು ಹರಡುವಿಕೆ ಸರ್ಕಾರ ಕ್ರಮ ತೆಗೆದುಕೊಂಡಿದೆ ಎಂದರು.
ಕೊರೋನಾ ನಿಯಂತ್ರಣದಲ್ಲಿ ಯಾರೂ ರಾಜಕೀಯ ಬೆರೆಸಬಾರದು. ಸೋಂಕನ್ನು ಹತೋಟಿಗೆ ತರಲು ರಾಜಕೀಯ ಪಕ್ಷಗಳ ಸಹಕಾರ ಅಗತ್ಯವಿದೆ. ಸುಖಾಸುಮ್ಮನೆ ರಾಜಕೀಯ ಕಾರಣಕ್ಕೆ ಸರ್ಕಾರದ ವಿರುದ್ಧ ದೋಷಾರೋಪ ಮಾಡಬಾರದು. ಕೊರೋನಾ ವಿರುದ್ಧ ಹೋರಾಟದಲ್ಲಿ ರಾಜಕೀಯೇತರ ಹಾಗೂ ಜಾತ್ಯತೀತರಾಗಿ ಕೆಲಸ ಮಾಡಬೇಕಿದೆ. ಈ ಹೋರಾಟದಲ್ಲಿ ಹಲವು ಸಂಘಟನೆಗಳು ಹಾಗೂ ಸಂಘ ಸಂಸ್ಥೆಗಳು ಕೈ ಜೋಡಿಸಿವೆ. ಆರ್‌ಎಸ್‌ಎಸ್ ಸಹ ಹಗಲಿರುಳು ದುಡಿದಿದೆ. ಸಮಾಜ ಮತ್ತು ಸರ್ಕಾರದ ಸಹಭಾಗಿತ್ವದಡಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.
ರೋಗಿ ದಾಖಲಿಸಿಕೊಳ್ಳದಿದ್ರೆ ಕ್ರಿಮಿನಲ್ ಕೇಸ್: ಸುಧಾಕರ್ ಎಚ್ಚರಿಕೆ!
ಸೋಂಕು ನಿಯಂತ್ರಣಕ್ಕೆ ಸರ್ಕಾರ ಏನು ಕೆಲಸ ಮಾಡಿಲ್ಲವೆಂದು ಸುಳ್ಳು ಆರೋಪ ಮಾಡಲಾಗುತ್ತದೆ. ಸೋಂಕು ಕಾಣಿಸಿಕೊಂಡ ಪ್ರಾರಂಭದಲ್ಲಿ ರಾಜ್ಯದಲ್ಲಿ ಕೇವಲ ಎರಡು ಲ್ಯಾಬ್‌ಗಳಿದ್ದವು. ಈ ವಾಸ್ತವ ಸಂಗತಿಯನ್ನು ಐವತ್ತು ವರ್ಷಗಳು ದೇಶ ಆಳಿದವರು ಅರಿತುಕೊಳ್ಳಬೇಕು ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದರು.
ರಾಜ್ಯದಲ್ಲಿ ಕೋವಿಡ್ ಪರೀಕ್ಷೆಗೆ 80 ಲ್ಯಾಬ್‌ಗಳು ತೆರೆಯಲಾಗಿದ್ದು, ಇನ್ನೈದು ದಿನಗಳಲ್ಲಿ ಮತ್ತೆ 20 ಲ್ಯಾಬ್‌ಗಳು ಪ್ರಾರಂಭವಾಗಲಿವೆ. ಬೆಂಗಳೂರು ಮಾತ್ರವಲ್ಲ ಜಿಲ್ಲಾ ಕೇಂದ್ರಗಳಲ್ಲಿ ಕೋವಿಡ್ ಆರೈಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಚಿಕ್ಕಬಳ್ಳಾಪುರದಲ್ಲಿ 10 ಸಾವಿರ ಬೆಡ್‌ಗಳ ಕೇಂದ್ರ ಸ್ಥಾಪನೆಯಾಗಿದೆ. ರಾಜ್ಯ ವ್ಯಾಪ್ತಿ ರಾರಯಪಿಡ್ ಆ್ಯಂಟಿಜನ್ ಪರೀಕ್ಷೆಗೆ ಚಾಲನೆ ನೀಡಲಾಗಿದ್ದು, ಪ್ರತಿ ದಿನ 20 ಸಾವಿರ ಪರೀಕ್ಷೆ ನಡೆಸಲಾಗುತ್ತಿದೆ. ಸೋಂಕು ನಿಯಂತ್ರಣದ ವೇಳೆ ಕೆಲವು ನ್ಯೂನ್ಯತೆಗಳು ಎದುರಾಗಿದ್ದವು. ಅವುಗಳನ್ನು ಸರಿಪಡಿಸಿಕೊಂಡು ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜನರಿಗೆ ಕೊರೋನಾ ಕುರಿತು ತಿಳುವಳಿಕೆ ಹೇಳುವುದು ಮೊದಲ ಕರ್ತವ್ಯವಾಗಿದೆ. ಸಾಮಾಜಿಕ ಜಾಲತಾಣ ಹಾಗೂ ಕೆಲವು ಮಾಧ್ಯಮಗಳಲ್ಲಿ ಕೊರೋನಾ ಕುರಿತು ತಪ್ಪು ಮಾಹಿತಿ ಹರಡಲಾಗುತ್ತದೆ. ಕೆಲ ದೃಶ್ಯ ಮಾಧ್ಯಮಗಳ ಆತಂಕದ ಸುದ್ದಿಗಳು ನನಗೆ ಹೆದರಿಸಿವೆ. ವೈಜ್ಞಾನಿಕವಾಗಿ ರೋಗ ಅಷ್ಟು ಭಯಾನಕವಾಗಿಲ್ಲ ಎಂದು ತಿಳಿಸಿದರು.