ಮೆಟ್ರೋ ಸುರಂಗ ಕೆಲಸ ಶೀಘ್ರ ಶುರು!

By Kannadaprabha NewsFirst Published Jul 14, 2020, 8:40 AM IST
Highlights

ಕಾಮಗಾರಿ ಆರಂಭಕ್ಕೆ ಪೂರ್ವ ಸಿದ್ಧತೆ| ಶಿವಾಜಿನಗರದಿಂದ ಮಿಲಿಟರಿ ಸ್ಕೂಲ್‌ ಮಾರ್ಗದಲ್ಲಿ 2.14 ಕಿ.ಮೀ. ಉದ್ದದ ಅವಳಿ ಸುರಂಗ| ಕೋವಿಡ್‌-19 ಹಿನ್ನೆಲೆಯಲ್ಲಿ ಮೆಟ್ರೋ ಕಾಮಗಾರಿ ತೊಡಗಿದ್ದ ಸಾವಿರಾರು ಗುತ್ತಿಗೆ ಕಾರ್ಮಿಕರು ಕೆಲಸ ಬಿಟ್ಟು ತಮ್ಮ ತವರಿಗೆ ತೆರಳಿದ್ದಾರೆ| ಆದರೂ ಲಭ್ಯವಿರುವ ಕಾರ್ಮಿಕರ ನೆರವಿನಲ್ಲಿ ಸುರಂಗ ಮಾರ್ಗ ನಿರ್ಮಾಣದ ಕಾಮಗಾರಿ|

ಸಂಪತ್‌ ತರೀಕೆರೆ

ಬೆಂಗಳೂರು(ಜು.14): ಎರಡನೇ ಹಂತದ ನಮ್ಮ ಮೆಟ್ರೋ ಯೋಜನೆಯಡಿ ಸುರಂಗ ಕೊರೆಯುವ ಕಾಮಗಾರಿಗೆ ಪೂರ್ವ ಸಿದ್ಧತಾ ಕಾರ್ಯ ನಡೆಯುತ್ತಿದ್ದು, ಶೀಘ್ರದಲ್ಲಿ ಸುರಂಗ ಕೊರೆಯುವ ಕಾಮಗಾರಿ ಆರಂಭವಾಗಲಿದೆ.

ಶಿವಾಜಿನಗರದಿಂದ ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ ಸುರಂಗ ಮಾರ್ಗದ ಗುತ್ತಿಗೆಯನ್ನು ಮೆ. ಲಾರ್ಸನ್‌ ಮತ್ತು ಟ್ಯುಬ್ರೊ ಲಿ. ಅವರಿಗೆ ವಹಿಸಲಾಗಿದ್ದು, ಮೇ 28ರಿಂದಲೇ ಸುರಂಗ ಮಾರ್ಗದಲ್ಲಿ ಟನಲ್‌ ಬೋರಿಂಗ್‌ ಮಷಿನ್‌(ಟಿಬಿಎಂ)ಗಳು ಕಾಮಗಾರಿ ಆರಂಭಿಸಲು ಅಗತ್ಯವಾದ ಪೂರ್ವ ಸಿದ್ಧತಾ ಕಾರ್ಯಗಳು ನಡೆಯುತ್ತಿವೆ. ಸುಮಾರು 2.141 ಕಿ.ಮೀ ಉದ್ದದ ಅವಳಿ ಸುರಂಗ ಮಾರ್ಗ ಕೊರೆಯಲು ಚೈನಾ ರೈಲ್ವೆ ಕನ್ಸ್‌ಸ್ಟ್ರಕ್ಷನ್‌ ಹೆವಿ ಇಂಡಸ್ಟ್ರೀಯ ಅವನಿ ಮತ್ತು ಲವಿ ಹೆಸರಿನ ಎರಡು ಟಿಬಿಎಂಗಳನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದ್ದು, ಕಾಮಗಾರಿ ಪೂರ್ಣಗೊಂಡ ಸುರಂಗ ಮಾರ್ಗದ ಒಳ ಸುತ್ತಳತೆ 5.80 ಮೀಟರ್‌ ಇರಲಿದೆ.

ಕೊರೋನಾ ಎಫೆಕ್ಟ್: ಮೆಟ್ರೋ ನಿಗಮಕ್ಕೆ 110 ಕೋಟಿ ನಷ್ಟ..!

ಕಂಟೋನ್ಮೆಂಟ್‌- ಶಿವಾಜಿನಗರ ಸುರಂಗ ನಿಲ್ದಾಣದವರೆಗೆ ಸುರಂಗ ಮಾರ್ಗ ನಿರ್ಮಿಸುವ ಪೂರ್ವ ಸಿದ್ಧತಾ ಕಾಮಗಾರಿಯೂ ಆರಂಭಗೊಂಡಿದೆ. ಈ ಮಾರ್ಗವು 0.86 ಕಿ.ಮೀ ಉದ್ದ ಇರಲಿದ್ದು, ಈ ಮಾರ್ಗದಲ್ಲಿ ಉರ್ಜಾ ಮತ್ತು ವಿಂಧ್ಯ ಹೆಸರಿನ ಎರಡು ಟಿಬಿಎಂ ಯಂತ್ರಗಳು ಕಾಮಗಾರಿಯನ್ನು ಶೀಘ್ರವೇ ಆರಂಭಿಸಲಿವೆ ಎಂದು ನಮ್ಮ ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಾಲ್ಕು ಪ್ಯಾಕೇಜ್‌ನಲ್ಲಿ ಕಾಮಗಾರಿ

ನಾಲ್ಕು ಪ್ಯಾಕೇಜ್‌ನಲ್ಲಿ 13.79 ಕಿ.ಮೀ ಸುರಂಗ ಮಾರ್ಗ ನಿರ್ಮಾಣದ ಕಾಮಗಾರಿ ನಡೆಯಲಿದೆ. ಪ್ಯಾಕೇಜ್‌ 1ರಲ್ಲಿ ಡೇರಿ ವೃತ್ತದ ಸೌತ್‌ ರಾರ‍ಯಂಪ್‌ ನಂತರ ಬರುವ ಸ್ವಾಗತ್‌ ರಸ್ತೆಯ ಎಲಿವೇಟೆಡ್‌ ಮಾರ್ಗದಿಂದ ವೆಲ್ಲಾರ ಜಂಕ್ಷನ್‌ವರೆಗೆ 3.655 ಕಿ.ಮೀ ಉದ್ದದಲ್ಲಿ .1,526 ಕೋಟಿ ವೆಚ್ಚದಲ್ಲಿ ಸುರಂಗ ನಿರ್ಮಾಣಗೊಳ್ಳಲಿದೆ. ಉಳಿದ ಮೂರು ಪ್ಯಾಕೇಜ್‌ಗಳಲ್ಲಿ ಟ್ಯಾನರಿ ರಸ್ತೆಯಿಂದ ನಾಗವಾರದವರೆಗೆ 4.59 ಕಿ.ಮೀ ಉದ್ದದಲ್ಲಿ .1,771 ಕೋಟಿ ವೆಚ್ಚದಲ್ಲಿ ಸುರಂಗ ಮಾರ್ಗ ನಿರ್ಮಾಣಗೊಳ್ಳುತ್ತಿದೆ. ಹಾಗೆಯೇ ವೆಲ್ಲಾರ ಜಂಕ್ಷನ್‌ನಿಂದ ಶಿವಾಜಿನಗರ .1,329 ಕೋಟಿ, ಶಿವಾಜಿನಗರ-ಟ್ಯಾನರಿ ರಸ್ತೆ ಸುರಂಗ ಮಾರ್ಗ .1,299 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿದೆ. 2ನೇ ಹಂತದ ಸುರಂಗ ಮಾರ್ಗ ನಿರ್ಮಾಣಕ್ಕೆ 9 ಟಿಬಿಎಂ ಬಳಕೆ ಮಾಡಲಿದ್ದು, ಪ್ರತಿ ಪ್ಯಾಕೇಜ್‌ಗೆ ತಲಾ 2 ಟಿಬಿಎಂ ಯಂತ್ರಗಳು ಕಾರ್ಯ ನಿರ್ವಹಿಸಲಿವೆ. ಗೊಟ್ಟಿಗೆರೆ-ನಾಗವಾರ ಮಧ್ಯೆ 12 ಸುರಂಗ ಮಾರ್ಗದ ಮೆಟ್ರೋ ನಿಲ್ದಾಣಗಳು, ಎಲಿವೇಟೆಡ್‌ ಮಾರ್ಗದಲ್ಲಿ 6 ಮೆಟ್ರೋ ನಿಲ್ದಾಣಗಳು ನಿರ್ಮಾಣಗೊಳ್ಳಲಿವೆ.

ನಾಗವಾರದಿಂದ ಗೊಟ್ಟಿಗೆರೆವರೆಗೆ .11,500 ಕೋಟಿ ವೆಚ್ಚದಲ್ಲಿ 25 ಕಿ.ಮೀ. ಮೆಟ್ರೋ ಮಾರ್ಗ ನಿರ್ಮಾಣವಾಗಲಿದೆ. ಈ ಪೈಕಿ ಡೈರಿ ವೃತ್ತದಿಂದ ನಾಗವಾರದ ತನಕ 13.79 ಕಿ.ಮೀ ಸುರಂಗ ಮಾರ್ಗ ನಿರ್ಮಿಸಲಾಗುತ್ತಿದೆ. ಅಕ್ಟೋಬರ್‌ ಮೊದಲ ಅಥವಾ ಎರಡನೇ ವಾರದಲ್ಲಿ ಟಿಬಿಎಂ ಯಂತ್ರಗಳು ಕಾರ್ಯಾರಂಭ ಮಾಡಲಿವೆ. ಮೊದಲ ಹಂತದಲ್ಲಿ ಕಂಟೋನ್ಮೆಂಟ್‌- ಶಿವಾಜಿನಗರ- ರಾಷ್ಟ್ರೀಯ ಮಿಲಿಟರಿ ಸ್ಕೂಲ್‌ ಮಾರ್ಗದ ಸುರಂಗ ಮಾರ್ಗದಲ್ಲಿ ಟನಲ್‌ ಬೋರಿಂಗ್‌ ಮಷಿನ್‌ಗಳು ಕಾರ್ಯ ಆರಂಭಿಸಲಿವೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋವಿಡ್‌-19 ಹಿನ್ನೆಲೆಯಲ್ಲಿ ಮೆಟ್ರೋ ಕಾಮಗಾರಿ ತೊಡಗಿದ್ದ ಸಾವಿರಾರು ಗುತ್ತಿಗೆ ಕಾರ್ಮಿಕರು ಕೆಲಸ ಬಿಟ್ಟು ತಮ್ಮ ತವರಿಗೆ ತೆರಳಿದ್ದಾರೆ. ಆದರೂ ಲಭ್ಯವಿರುವ ಕಾರ್ಮಿಕರ ನೆರವಿನಲ್ಲಿ ಸುರಂಗ ಮಾರ್ಗ ನಿರ್ಮಾಣದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕೆಲವು ಕಡೆಗಳಲ್ಲಿ ಸ್ಥಳೀಯ ಕಾರ್ಮಿಕರನ್ನು ಬಳಸಿಕೊಂಡು ಕಾಮಗಾರಿಯ ವೇಗ ಹೆಚ್ಚಿಸಲಾಗಿದೆ.
 

click me!