ಸಚಿವ ಡಿ.ಕೆ.ಶಿವಕುಮಾರ್ ಗೆ ಈಗ ರಿಲೀಫ್

By Web DeskFirst Published Feb 8, 2019, 11:11 AM IST
Highlights

ರಾಜ್ಯ ರಾಜಕಾರಣದಲ್ಲಿ ವಿವಿಧ ರೀತಿಯ ಅಲ್ಲೋಲ ಕಲ್ಲೋಲಗಳು ಆಗುತ್ತಿರುವ ಬೆನ್ನಲ್ಲೇ ಸಚಿವ ಡಿಕೆ ಶಿವಕುಮಾರ್ ಗೆ ಕೊಂಚ ರಿಲೀಫ್ ದೊರಕಿದೆ. 

ಬೆಂಗಳೂರು :  ದೆಹಲಿಯಲ್ಲಿ ತಮಗೆ ಸೇರಿದ ಫ್ಲ್ಯಾಟ್‌, ಮನೆ ಹಾಗೂ ಬೆಂಗಳೂರಿನ ಹಲವೆಡೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದ್ದ ಪ್ರಕರಣದ ಕುರಿತು ವಿವರಣೆ ನೀಡಲು ಜಾರಿ ನಿರ್ದೇಶನಾಲಯದ ಮುಂದೆ ಶುಕ್ರವಾರ ವಿಚಾರಣೆ ಹಾಜರಾಗುವುದರಿಂದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ವಿನಾಯ್ತಿ ಪಡೆದಿದ್ದಾರೆ.

ಆದಾಯ ತೆರಿಗೆ ಇಲಾಖೆ ನಡೆಸಿರುವ ದಾಳಿಯ ಕುರಿತು ವಿವರಣೆ ನೀಡಲು ಫೆ.8ರಂದು ವಿಚಾರಣೆಗೆ ಬರುವಂತೆ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಅವರಿಗೆ ಸೂಚಿಸಿ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿತ್ತು ಈ ಸಮನ್ಸ್‌ ರದ್ದುಪಡಿಸುವಂತೆ ಕೋರಿ ಸಚಿವ ಡಿ.ಕೆ.ಶಿವಕುಮಾರ್‌ ಸಲ್ಲಿಸಿದ್ದ ಅರ್ಜಿ ಗುರುವಾರ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿತ್ತು.

ವಿಚಾರಣೆ ವೇಳೆ ಜಾರಿ ನಿರ್ದೇಶನಾಲಯದ ಪರ ವಕೀಲರು, ಸಚಿವ ಡಿ.ಕೆ.ಶಿವಕುಮಾರ್‌ ಅವರು ವಿಚಾರಣೆಗೆ ಹಾಜರಾಗುವ ದಿನಾಂಕವನ್ನು ವಿಸ್ತರಿಸುವಂತೆ ಕೋರಿ ಅರ್ಜಿ ಸಲ್ಲಿಸಿದರೆ, ಅದನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು. ಈ ಹೇಳಿಕೆಗೆ ಡಿ.ಕೆ.ಶಿವಕುಮಾರ್‌ ಪರ ಹಾಜರಾಗಿದ್ದ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಕಪಿಲ್‌ ಸಿಬಲ್‌ ಒಪ್ಪಿಗೆ ಸೂಚಿಸಿದರು.

ಅದನ್ನು ಪರಿಗಣಿಸಿದ ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರಿದ್ದ ಏಕದಸ್ಯ ನ್ಯಾಯಪೀಠ, ವಿಚಾರಣೆಗೆ ಹಾಜರಾಗುವ ದಿನಾಂಕ ಮುಂದೂಡುವಂತೆ ಕೋರಿ ಅರ್ಜಿದಾರ ಡಿ.ಕೆ. ಶಿವಕುಮಾರ್‌ ಮನವಿ ಸಲ್ಲಿಸಿದರೆ, ಅದನ್ನು ಜಾರಿ ನಿರ್ದೇಶನಾಲಯ ಪರಿಗಣಿಸಬೇಕು ಎಂದು ಸೂಚಿಸಿ, ಅರ್ಜಿಯ ವಿಚಾರಣೆಯನ್ನು ಫೆ.22ಕ್ಕೆ ಮುಂದೂಡಿತು. ಇದರಿಂದ ಶುಕ್ರವಾರ ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗುವುದರಿಂದ ಸಚಿವರಿಗೆ ವಿನಾಯ್ತಿ ಸಿಕ್ಕಿದಂತಾಗಿದೆ.

ಡಿಕೆಶಿ ಪರ ಕಪಿಲ್‌ ಸಿಬಲ್‌ ವಾದ:

ಇದಕ್ಕೂ ಮುನ್ನ ಡಿ.ಕೆ.ಶಿವಕುಮಾರ್‌ ಪರ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಕಪಿಲ್‌ ಸಿಬಲ್‌ ವಾದ ಮಂಡಿಸಿ, ಅರ್ಜಿದಾರರು ಕಾಲಕಾಲಕ್ಕೆ ತೆರಿಗೆ ಪಾವತಿಸಿದ್ದಾರೆ. 2017ರಲ್ಲಿ ಅವರ ವಿರುದ್ಧ ಐ.ಟಿ.ದಾಳಿ ನಡೆದ ಸಂದರ್ಭದಲ್ಲಿ ಆದಾಯ, ವೆಚ್ಚದ ಲೆಕ್ಕಪತ್ರ ನೀಡಲು ಕಾಲಾವಕಾಶವಿತ್ತು. ಅರ್ಜಿದಾರರು ಘೋಷಿಸದ ಆದಾಯ ಎಷ್ಟುಎಂಬುದೇ ಇನ್ನೂ ನಿರ್ಧಾರವಾಗಿಲ್ಲ. ತೆರಿಗೆ ಅಸೆಸ್ಮೆಂಟ್‌ ಅಧಿಕಾರಿಯು ತೆರಿಗೆ ವಂಚನೆ ಕುರಿತು ಲೆಕ್ಕಚಾರ ಮಾಡುವ ಮುನ್ನವೇ ಪ್ರಕರಣ ದಾಖಲಿಸಲಾಗಿದೆ ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ಅಲ್ಲದೆ, ಅರ್ಜಿದಾರರಿಗೆ ಸೇರಿದ ಮನೆ ಹಾಗೂ ಇತರೆ ಪ್ರದೇಶದಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಕ್ರಮವೇ ಕಾನೂನು ಬಾಹಿರವಾಗಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಫೆ.8 ವಿಚಾರಣೆಗೆ ಹಾಜರಾಗಲು ಜಾರಿ ನಿರ್ದೇಶನಾಲಯವು ಸಮನ್ಸ್‌ ಜಾರಿಗೊಳಿಸಿದೆ. ಸದ್ಯ ರಾಜ್ಯ ವಿಧಾನ ಮಂಡಲ ಅಧಿವೇಶನ ನಡೆಯುತ್ತಿದೆ. ಅರ್ಜಿದಾರರು ರಾಜ್ಯ ಸರ್ಕಾರದಲ್ಲಿ ಸಚಿವರಾಗಿದ್ದು, ಸದನದಲ್ಲಿ ಭಾಗವಹಿಸಬೇಕಿದೆ. ಒಂದು ವೇಳೆ ವಿಚಾರಣೆಗೆ ಹಾಜರಾದರೆ, ಅರ್ಜಿದಾರರನ್ನು ಜಾರಿ ನಿರ್ದೇಶನಾಲಯ ಬಂಧಿಸುವ ಸಾಧ್ಯತೆಯಿರುವ ಹಿನ್ನೆಲೆಯಲ್ಲಿ ಸಮನ್ಸ್‌ಗೆ ತಡೆ ನೀಡಬೇಕು ಎಂದು ಕೋರಿದರು.

ಈ ಮನವಿ ಪರಿಗಣಿಸಿದ ನ್ಯಾಯಮೂರ್ತಿಗಳು, ವಿಚಾರಣೆಯ ದಿನಾಂಕವನ್ನು ವಿಸ್ತರಿಸಲು ಅರ್ಜಿದಾರರು ಮನವಿ ಮಾಡಿದರೆ ಅದನ್ನು ಪರಿಗಣಿಸಲು ಸಾಧ್ಯವಿದೆಯೇ? ಎಂಬುದನ್ನು ಸ್ಪಷ್ಟಪಡಿಸುವಂತೆ ಜಾರಿ ನಿರ್ದೇಶನಾಲಯಕ್ಕೆ ಸೂಚಿಸಿ ವಿಚಾರಣೆಯನ್ನು ಮಧ್ಯಾಹ್ನಕ್ಕೆ ಮುಂದೂಡಿತು.

ಮಧ್ಯಾಹ್ನ 1.30ಕ್ಕೆ ನ್ಯಾಯಪೀಠದ ಮುಂದೆ ಜಾರಿ ನಿರ್ದೇಶನಾಲಯದ ಪರ ಹೆಚ್ಚುವರಿ ಸಾಲಿಸಿಟರ್‌ ಪ್ರಭುಲಿಂಗ ಕೆ. ನಾವದಡಿ ಹಾಜರಾಗಿ, ದಿನಾಂಕ ವಿಸ್ತರಿಸುವಂತೆ ಕೋರಿ ಡಿ.ಕೆ. ಶಿವಕುಮಾರ್‌ ಮನವಿ ಸಲ್ಲಿಸಿದರೆ, ಅದನ್ನು ಪರಿಗಣಿಸಲಾಗುವುದು ಎಂದು ತಿಳಿಸಿದರು.

ಇದೇ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಸೂಚಿಸಿ ಜಾರಿ ನಿರ್ದೇಶನಾಲಯದ ಜಾರಿ ಮಾಡಿರುವ ಸಮನ್ಸ್‌ ರದ್ದು ಕೋರಿ ಇತರೆ ಆರೋಪಿಗಳಾಗಿರುವ ಸಚಿನ್‌ ನಾರಾಯಣ್‌, ಸುನೀಲ್‌ ಕುಮಾರ್‌ ಶರ್ಮಾ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಫೆ.14ಕ್ಕೆ ನ್ಯಾಯಪೀಠ ಮುಂದೂಡಿತು. ಇದೇ ವೇಳೆ ಆರೋಪಿಗಳ ವಿರುದ್ಧದ ಜಾರಿ ನಿರ್ದೇಶನಾಲಯದ ಸಮನ್ಸ್‌ಗೆ ತಡೆ ನೀಡುವ ಕುರಿತು ವಾದ ಪ್ರತಿವಾದ ಆಲಿಸಿ ಆದೇಶ ಹೊರಡಿಸಲಾಗುವುದು ಎಂದು ನ್ಯಾಯಪೀಠ ತಿಳಿಸಿದೆ.

click me!