ಹಂಪಿ ಸ್ಮಾರಕ ಕೆಡವಿದ ಬೆಂಗಳೂರಿನ ಉದ್ಯೋಗಿಗಳು ಅರೆಸ್ಟ್

By Web DeskFirst Published Feb 8, 2019, 11:03 AM IST
Highlights

ಹಂಪಿಯ ವಿಷ್ಣು ದೇವಾಲಯದ ಬಳಿಯ ಕಂಬವೊಂದರ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಯುವಕರನ್ನು ಬಂಧಿಸಲಾಗಿದೆ. 

ಬಳ್ಳಾರಿ :  ವಿಶ್ವವಿಖ್ಯಾತ ಹಂಪಿಯ ವಿಷ್ಣು ದೇವಾಲಯದ ಬಳಿಯ ಕಂಬವೊಂದರ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಯುವಕರನ್ನು ಗುರುವಾರ ಬೆಳಗ್ಗೆ ವಶಕ್ಕೆ ಪಡೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲ್ಕನೇ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.

ಬಿಹಾರ ಮೂಲದ ಆಯುಷ್‌ ಸಾಹು (24), ರಾಜಬಾಬು (21), ರಾಜೇಶ್‌ ಚೌಧರಿ ಹಾಗೂ ಮಧ್ಯಪ್ರದೇಶ ಮೂಲದ ರಾಜ್‌ ಆರ್ಯನ್‌ (22) ಪೊಲೀಸರ ವಶದಲ್ಲಿರುವ ಆರೋಪಿಗಳು. ಇವರಲ್ಲಿ ಮೂವರನ್ನು ಬೆಳಗ್ಗೆಯೇ ವಶಕ್ಕೆ ಪಡೆದಿದ್ದರೆ, ತಲೆಮರೆಸಿಕೊಂಡಿದ್ದ ರಾಜೇಶ್‌ ಚೌಧರಿಯನ್ನು ಸಂಜೆ ವಶಕ್ಕೆ ತೆಗೆದುಕೊಳ್ಳಲಾಗಿದೆ.

ಇವರೆಲ್ಲ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ ಒಬ್ಬ ಬಿಇ ಮುಗಿಸಿದ್ದು, ಪ್ರತಿಷ್ಠಿತ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾನೆ. ಘಟನೆ ವೇಳೆ ಒಟ್ಟು ಐದು ಮಂದಿ ಇದ್ದು, ಕಂಬ ನೆಲಕ್ಕುರುಳಿಸಿದ ಪ್ರಕರಣದಲ್ಲಿ ಭಾಗಿಯಾದವರು ನಾಲ್ವರು ಮಾತ್ರ. ಮೂವರು ಕಂಬ ಉರುಳಿಸುತ್ತಿದ್ದರೆ, ಮತ್ತೊಬ್ಬ ಇದನ್ನು ವಿಡಿಯೋ ಮಾಡಿದ್ದಾನೆ. ಜತೆಗಿದ್ದ ಮತ್ತೊಬ್ಬ ಬೇರೆಡೆ ಇದ್ದ ಕಾರಣ ಆತನನ್ನು ಪ್ರಕರಣದಿಂದ ಹೊರಗಿಡಲಾಗಿದೆ ಎಂದು ಎಸ್ಪಿ ಅರುಣ್‌ ರಂಗರಾಜನ್‌ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಬಂಧನ ಪ್ರಕ್ರಿಯೆ ಪೂರ್ಣವಾಗಿಲ್ಲ: ವಶಕ್ಕೆ ಪಡೆದವರ ಪೈಕಿ ಇಬ್ಬರನ್ನು ಬೆಂಗಳೂರಿನಿಂದ ಹಾಗೂ ಮತ್ತೊಬ್ಬನನ್ನು ಹೈದ್ರಾಬಾದ್‌ನಿಂದ ಕರೆತರಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿದ್ದೇವಷ್ಟೆ. ಇನ್ನೂ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಎಂದು ಎಸ್ಪಿ ಸ್ಪಷ್ಟನೆ ನೀಡಿದರು.

click me!