
ವಿಧಾನಸಭೆ(ಜು.15): ಪುರಸಭೆ, ನಗರಸಭೆ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಅಕ್ರಮ ಬಡಾವಣೆಗಳ ಆಸ್ತಿಗಳಿಗೆ ಬಿ ಖಾತಾ ನೀಡುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗಿದ್ದು, ಶೀಘ್ರದಲ್ಲಿ ಖಾತಾ ನೀಡುವ ಕುರಿತು ನಿರ್ಧರಿಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ತಿಳಿಸಿದರು.
ಪ್ರಶ್ನೋತ್ತರ ಕಲಾಪದ ವೇಳೆ ಜೆಡಿಎಸ್‌ನ ಜಿ.ಡಿ. ಹರೀಶ್ ಗೌಡ ಅವರು ಹುಣಸೂರಿನಲ್ಲಿನ ಅಕ್ರಮ ಬಡಾವಣೆಗಳಿಗೆ ಸೂಕ್ತ ಮೂಲಸೌಕರ್ಯ ಒದಗಿಸಿಲ್ಲ ಹಾಗೂ ಖಾತೆ ನೀಡಿಲ್ಲ ಎಂಬ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ನೂರಾರು ಅಕ್ರಮ ಬಡಾವಣೆಗಳಿವೆ. ಅಲ್ಲಿ ಆಸ್ತಿ ಖರೀದಿಸಿದವರಿಗೆ ಇನ್ನೂ ಖಾತೆ ಸಿಕ್ಕಿಲ್ಲ. ಅಂತಹವರಿಗೆ ಬ್ಯಾಂಕ್‌ನಿಂದ ಸಾಲ ಸೇರಿದಂತೆ ಇನ್ನಿತರ ಸೌಲಭ್ಯ ಸಿಗದಂತಾಗಿದೆ. ಹೀಗಾಗಿ ಪುರಸಭೆ, ನಗರಸಭೆ, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಅಕ್ರಮ ಬಡಾವಣೆಗಳಲ್ಲಿನ ಆಸ್ತಿಗಳಿಗೆ ಬಿ ಖಾತಾ ನೀಡುವ ಕುರಿತಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ, ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಶೀಘ್ರದಲ್ಲಿ ಅದಕ್ಕೆ ಅನುಮತಿ ಪಡೆದು ಖಾತೆ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದರು.
ಹಂಪಿ ಫಾರ್ಮ್ ಸ್ಟೇಗಳ ಸಕ್ರಮ ಇಲ್ಲ: ಸಚಿವ ಬೈರತಿ ಸುರೇಶ್
ಅಕ್ರಮ ಬಡಾವಣೆಗಳಾಗಿರುವ ಕಾರಣ ಅಲ್ಲಿನ ಆಸ್ತಿಗಳಿಂದ ಸಮರ್ಪಕವಾಗಿ ತೆರಿಗೆಯೂ ಪಾವತಿಯಾಗುತ್ತಿಲ್ಲ. ಹೀಗಾಗಿ ಒಂದು ಅವಧಿಯನ್ನು ನಿಗದಿ ಮಾಡಿ ಅಷ್ಟರೊಳಗೆ ರಚನೆಯಾಗಿರುವ ಅಕ್ರಮ ಬಡಾವಣೆಗಳಲ್ಲಿನ ಆಸ್ತಿಗಳಿಗೆ ಖಾತೆ ನೀಡುವುದಕ್ಕೆ ಕ್ರಮ ಕೈಗೊಳ್ಳಲಾಗುವುದು. ಹೀಗೆ ಖಾತೆ ಪಡೆಯಲು ಒಮ್ಮೆ ಮಾತ್ರ ಅವಕಾಶ ನೀಡಲಾಗುವುದು. ಈ ಕ್ರಮದಿಂದ ಸರ್ಕಾರಕ್ಕೆ 2 ಸಾವಿರ ಕೋಟಿ ರು.ಗೂ ಹೆಚ್ಚಿನ ತೆರಿಗೆ ಮತ್ತು ಖಾತಾ ಶುಲ್ಕ ಸಂಗ್ರಹವಾಗಲಿದೆ ಎಂದು ವಿವರಿಸಿದರು.
ಅದಕ್ಕೂ ಮುನ್ನ ಮಾತನಾಡಿದ ಪೌರಾಡಳಿತ ಸಚಿವ ರಹೀಂ ಖಾನ್, ಅಕ್ರಮ ಬಡಾವಣೆಗಳಲ್ಲಿ ಮೂಲಸೌಕರ್ಯಗಳ ಕೊರತೆಯಿದೆ ಎಂಬ ಬಗ್ಗೆ ಸಾಕಷ್ಟುದೂರುಗಳಿವೆ. ಅವುಗಳಲ್ಲಿನ ಸಮಸ್ಯೆ ನಿವಾರಣೆಗೆ ಯಾವೆಲ್ಲ ಕ್ರಮ ಕೈಗೊಳ್ಳಬೇಕು ಎಂಬುದರ ಚರ್ಚಿಸಿ ನಿರ್ಧರಿಸಲಾಗುವುದು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ