
ಬೆಂಗಳೂರು (ಜು.12): ಬಿಎಂಟಿಸಿ(BMTC) ವ್ಯವಸ್ಥೆ ಕುರಿತಂತೆ ಸ್ವಂತ ಅನುಭವದೊಂದಿಗೆ ತಿಳಿಯುವ ಸಲುವಾಗಿ ಸಾರಿಗೆ ಸಚಿವ ಬೈರತಿ ಸುರೇಶ್ ಶನಿವಾರ ಮಾಸ್ಕ್ ಧರಿಸಿ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸುವ ಮೂಲಕ ರಿಯಾಲಿಟಿ ಚೆಕ್ ನಡೆಸಿದರು. ಈ ವೇಳೆ ಚಾಲಕ-ನಿರ್ವಾಹಕರ ನಿರ್ಲಕ್ಷ್ಯ ಪತ್ತೆ ಮಾಡಿ ಅವರ ವಿರುದ್ಧ ಕ್ರಮಕ್ಕೆ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.
ಅಧಿಕಾರಿಗಳಿಗೂ ಮಾಹಿತಿ ನೀಡದೆ ಬೈರತಿ ಸುರೇಶ್ ಅವರು ಶನಿವಾರ ಮಾಸ್ಕ್ ಧರಿಸಿ ಗುರುತು ಸಿಗದಂತೆ ಬಿಎಂಟಿಸಿ ಬಸ್‌ಗಳಲ್ಲಿ ಪ್ರಯಾಣಿಸಿದ್ದಾರೆ. ಜಯಮಹಲ್, ಹೆಣ್ಣೂರು ಡಿಪೋ ವ್ಯಾಪ್ತಿಯ ಬಸ್‌ಗಳಲ್ಲಿ ಪ್ರಯಾಣಿಸಿದ ಬೈರತಿ ಸುರೇಶ್ ಸಾಮಾನ್ಯ ಪ್ರಯಾಣಿಕರಂತೆ ರಶ್‌ನಲ್ಲಿಯೇ ನಿಂತುಕೊಂಡು ಪ್ರಯಾಣಿಸಿದರು. ಈ ವೇಳೆ ಚಾಲಕ ಮತ್ತು ನಿರ್ವಾಹಕರು ಪ್ರಯಾಣಿಕರೊಂದಿಗೆ ನಿರ್ಲಕ್ಷ್ಯದಿಂದ ವರ್ತಿಸುತ್ತಿರುವುದು ಬೈರತಿ ಸುರೇಶ್ ಗಮನಕ್ಕೆ ಬಂದಿದೆ. ನಂತರ ಪ್ರಯಾಣಿಕರೊಂದಿಗೂ ಮಾತುಕತೆ ನಡೆಸಿ ಅವರ ಸಮಸ್ಯೆಯನ್ನು ಆಲಿಸಿದರು.
ರಿಯಾಲಿಟಿ ಚೆಕ್ ವೇಳೆ ಭೂಪಸಂದ್ರದಿಂದ ಹೆಬ್ಬಾಳಕ್ಕೆ ಬಸ್‌ವೊಂದರಲ್ಲಿ ಸಂಚರಿಸುತ್ತಿದ್ದಾಗ 2 ಟಿಕೆಟ್ ನೀಡುವಂತೆ ನಿರ್ವಾಹಕರಿಗೆ 100 ರು. ನೀಡಿದ್ದಾರೆ. ಆದರೆ, ನಿರ್ವಾಹಕ 12 ರು. ಚಿಲ್ಲರೆ ನೀಡುವಂತೆ ಸೂಚಿಸಿದ್ದಾರೆ. ಸಚಿವರು ಮಾಸ್ಕ್ ಧರಿಸಿದ್ದರಿಂದ ನಿರ್ವಾಹಕರಿಗೆ ಅವರ ಗುರುತು ಸಿಗಲಿಲ್ಲ. ನಿರ್ವಾಹಕರಿಗೆ ತಮ್ಮ ಬಳಿ ಚಿಲ್ಲರೆಯಿಲ್ಲ ಎಂದು ತಿಳಿಸುತ್ತಿದ್ದಂತೆ, ಹಾಗಾದರೆ ಬಸ್‌ನಿಂದ ಕೆಳಗಿಳಿಯುವಂತೆ ನಿರ್ವಾಹಕರು ತಾಕೀತು ಮಾಡಿದ್ದಾರೆ.
ಕೊನೆಗೆ ಸಚಿವರು ಎಂದು ತಿಳಿದ ನಿರ್ವಾಹಕ ಕ್ಷಮೆ ಕೇಳಿದ್ದಾರೆ. ತಮಗಾದ ರೀತಿಯಲ್ಲಿಯೇ ಚಿಲ್ಲರೆಗಾಗಿ ಪ್ರಯಾಣಿಕರನ್ನು ಬಸ್‌ನಿಂದ ಕೆಳಗಿಳಿಸಲಾಗುತ್ತಿದೆ ಎಂಬುದು ಅರಿತ ಬೈರತಿ ಸುರೇಶ್, ನಿರ್ವಾಹಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಉಳಿದಂತೆ ಬಸ್‌ಗಳನ್ನು ವೇಗವಾಗಿ ಚಾಲನೆ ಮಾಡುವುದು, ನಿಲುಗಡೆ ಸ್ಥಳಕ್ಕಿಂತ ಬೇರೆಡೆ ಬಸ್‌ಗಳನ್ನು ನಿಲ್ಲಿಸುತ್ತಿದ್ದದ್ದು, ಪ್ರಯಾಣಿಕರೊಂದಿಗೆ ನಿರ್ವಾಹಕರು ನಿರ್ಲಕ್ಷ್ಯದಿಂದ ನಡೆದುಕೊಳ್ಳುತ್ತಿದ್ದ ರೀತಿ, ಪ್ರಯಾಣಿಕರಿಗೆ ಟಿಕೆಟ್ ನೀಡುವಾಗಲೇ ಚಿಲ್ಲರೆ ನೀಡದೆ ಇದ್ದದ್ದು ಹೀಗೆ ಹಲವು ಸಮಸ್ಯೆಗಳು ಸಚಿವರ ಗಮನಕ್ಕೆ ಬಂದಿದೆ. ಪ್ರಯಾಣಿಕರೊಂದಿಗೆ ನಿರ್ಲಕ್ಷ್ಯದಿಂದ ವರ್ತಿಸುತ್ತಿದ್ದ ಚಾಲಕರು ಮತ್ತು ನಿರ್ವಾಹಕರ ಅಮಾನತಿಗೆ ಸ್ಥಳದಲ್ಲೇ ನಿರ್ದೇಶಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ