* ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಬಿ.ಸಿ. ಪಾಟೀಲ ತಿರುಗೇಟು
* ಹುಬ್ಬಳ್ಳಿ ಗಲಾಟೆ ಪೂರ್ವ ನಿಯೋಜಿತ ಘಟನೆ
* ಘಟನೆಗೆ ಸಂಬಂಧಪಟ್ಟಂತೆ ಸಾಕಷ್ಟು ಜನರನ್ನು ಇದೀಗ ಬಂಧಿಸಲಾಗಿದೆ
ಹುಬ್ಬಳ್ಳಿ(ಏ.27): ಗೃಹ ಸಚಿವರು ಅತ್ಯಂತ ಸಮರ್ಥವಾಗಿ ಅವರ ಖಾತೆಯನ್ನು ನಿಭಾಯಿಸುತ್ತಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ(BC Patil) ಹೇಳಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆಗೆ(Hubballi Riots) ಸಂಬಂಧಪಟ್ಟಂತೆ ಗೃಹ ಸಚಿವರು ಅವರ ಖಾತೆ ನಿಭಾಯಿಸಲು ಅಸಮರ್ಥರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು.
ಹುಬ್ಬಳ್ಳಿ ಗಲಾಟೆ ಪೂರ್ವ ನಿಯೋಜಿತ ಘಟನೆಯಾಗಿದೆ. ಪ್ರಚೋದನೆ ನೀಡಿ ಮಾಡಿರುವ ಘಟನೆ ಇದಾಗಿದೆ ಎಂದ ಅವರು, ಘಟನೆಗೆ ಸಂಬಂಧಪಟ್ಟಂತೆ ಸಾಕಷ್ಟು ಜನರನ್ನು ಇದೀಗ ಬಂಧಿಸಲಾಗಿದೆ. ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಸಿದ್ದರಾಮಯ್ಯ(Siddaramaiah) ತಾವೊಬ್ಬರೇ ಸಮರ್ಥರು, ಉಳಿದವರೆಲ್ಲರೂ ಅಸಮರ್ಥರು ಎಂದು ಭಾವಿಸಿಕೊಂಡಿದ್ದಾರೆ. ಆದರೆ ನಾವೆಲ್ಲರೂ ಸಮರ್ಥರೇ ಇದ್ದೇವೆ ಎಂದರು.
ಮೈಸೂರು ಜಿಲ್ಲೆಯಲ್ಲಿ ರಸಗೊಬ್ಬರ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್
ಪಿಎಸ್‌ಐ ಪರೀಕ್ಷೆಯಲ್ಲಿ ಅಕ್ರಮದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಇದೊಂದು ಅತಿ ದೊಡ್ಡ ದುರ್ದೈವ. ಅವರವರ ಸಾಮರ್ಥ್ಯದ ಮೇಲೆ ಅಭ್ಯರ್ಥಿಗಳ ಆಯ್ಕೆಯಾಗಬೇಕು. ಅದು ಬಿಟ್ಟು ಪಿಎಸ್‌ಐ ನೇಮಕದಲ್ಲಿ ಅಕ್ರಮ ನಡೆದಿರುವುದು ಸರಿಯಲ್ಲ. ಈಗಾಗಲೇ ಸಮಗ್ರವಾಗಿ ತನಿಖೆ ನಡೆಯುತ್ತಿದೆ. ತಪ್ಪಿತಸ್ಥರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಸರ್ಕಾರ ಮುಂದಾಗುತ್ತಿದೆ ಎಂದು ತಿಳಿಸಿದರು.
ಹುಬ್ಬಳ್ಳಿಯಲ್ಲಿ ಬಿಜೆಪಿ(BJP) ಜಿಲ್ಲಾ ಪ್ರಮುಖರ ಸಭೆ ನಡೆದಿದೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಹಲವಾರು ಚರ್ಚೆ ನಡೆದಿದೆ. ಪಕ್ಷ ಸಂಘಟನೆ ಮುಖ್ಯ ಉದ್ದೇಶ. 150 ಸ್ಥಾನಗಳನ್ನು ಗೆಲ್ಲಲು ಇದು ವೇದಿಕೆಯಾಗಲಿದೆ ಎಂದರು.
ಸರ್ಕಾರಕ್ಕೆ ವರದಿ ಸಲ್ಲಿಸಿ
ರಾಜ್ಯದಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಎಲ್ಲ ಕೃಷಿ ಅಧಿಕಾರಿಗಳು ತಮ್ಮ ಕಾರ್ಯಸ್ಥಾನದಲ್ಲಿರಬೇಕು. ಮಳೆಯಿಂದಾಗಿ ಹಾನಿಗೊಳಗಾದ ಬೆಳೆಯ ಬಗ್ಗೆ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಶೀಘ್ರವಾಗಿ ವರದಿ ಸಲ್ಲಿಸಬೇಕು. ಹಾನಿಗೊಳಗಾದ ರೈತರಿಗೆ ಪರಿಹಾರ ನೀಡುವ ಕುರಿತು ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟಿಲ ಹೇಳಿದರು.
ಚಿಕ್ಕಬಳ್ಳಾಪುರದಲ್ಲಿ ರೈತರೊಂದಿಗೊಂದು ದಿನ: ರೈತರ ಕೃಷಿ ಪದ್ಧತಿಗೆ ಬಿ.ಸಿ.ಪಾಟೀಲ್ ಮೆಚ್ಚುಗೆ
ಗೃಹ ಖಾತೆ ಮೇಲಿನ ಆಸೆ ವ್ಯಕ್ತಪಡಿಸಿದ ಸಚಿವ ಬಿಸಿ ಪಾಟೀಲ್
ಮೈಸೂರು: ಕರ್ನಾಟಕದಲ್ಲಿ ಪದೇ-ಪದೇ ಕಾನೂನು ಸುವ್ಯವಸ್ಥೆ ಹಾಲಾಗುವಂತೆ ಘಟನೆಗಳು ನಡೆಯುತ್ತಲೇ ಇವೆ. ಇದರ ಮಧ್ಯೆ ಗೃಹ ಸಚಿವ ಆರಗ ಜ್ಞಾನೇಂದ್ರ(Araga Jnanendra) ಅವರ ಕಾರ್ಯವೈಖರಿ ಬಗ್ಗೆ ಸ್ವಪಕ್ಷದ ನಾಯಕರುಗಳೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆ ಸಚಿವರೊಬ್ಬರು ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದಿದ್ದರು..
ಹೌದು...ಕೃಷಿ ಸಚಿವ ಬಿಸಿ ಪಾಟೀಲ್ ಅವರು ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿರ್ವಹಿಸುತ್ತೇನೆ ಎಂದು ಹೇಳಿದ್ದಾರೆ. ಈ ಮೂಲಕ ಬಿಸಿ ಪಾಟೀಲ್ ಅವರು ಗೃಹ ಖಾತೆಯ ಆಸೆ ಹೊರಹಾಕಿದ್ದರು.ಮೈಸೂರಿನಲ್ಲಿ ಏ.22 ರಂದು ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ಗೃಹ ಖಾತೆ ಕೊಟ್ಟರೆ ಸಮರ್ಥವಾಗಿ ನಿರ್ವಹಿಸುತ್ತೇನೆ. 25 ವರ್ಷ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿದ್ದೇನೆ. ಆದರೆ ಇದು ಸಿಎಂ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿದ್ದರು.