
ಸಿದ್ದು ಚಿಕ್ಕಬಳ್ಳೇಕೆರೆ
ಬೆಂಗಳೂರು (ಜೂ.29) : ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಕೆಲ ಬೆಳೆಗಳಿಗೆ ವಿಮೆ ಪಾವತಿ ಮಾಡಲು ತೋಟಗಾರಿಕಾ ಇಲಾಖೆ ಸಾಕಷ್ಟು ಕಾಲಾವಕಾಶ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿರುವ ಬೆಳೆಗಾರರು, ಅವಧಿ ವಿಸ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.
2025-26 ನೇ ಸಾಲಿನ ಮುಂಗಾರು ಹಂಗಾಮಿನ ಮರು ವಿನ್ಯಾಸಗೊಳಿಸಿದ ಹವಾಮಾನ ಆಧಾರಿತ ಬೆಳೆ ವಿಮೆ ಪಾವತಿಗೆ ಸಂಬಂಧಿಸಿ ತೋಟಗಾರಿಕಾ ಇಲಾಖೆ ಜೂ.23 ರಂದು ಆದೇಶ ಹೊರಡಿಸಿದೆ. ಕೆಲ ಜಿಲ್ಲೆಗಳ ಹಲವು ಬೆಳೆಗಳಿಗೆ ವಿಮೆ ಪಾವತಿಸಲು ಜೂ.30 ಕೊನೆಯ ದಿನವಾಗಿರುವುದು ಅನ್ನದಾತರಿಗೆ ಸಂಕಷ್ಟ ಉಂಟು ಮಾಡಿದೆ. ಆದ್ದರಿಂದ ಕಾಲಾವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ದಾವಣಗೆರೆ ಜಿಲ್ಲೆಯಲ್ಲಿ ಅಡಕೆ, ವೀಳ್ಯದೆಲೆ, ಕರಿ ಮೆಣಸು, ದಾಳಿಂಬೆ ಬೆಳೆಗಳಿಗೆ ವಿಮೆ ಮಾಡಿಸಲು ಜೂ.30 ಕೊನೆಯ ದಿನವಾಗಿದೆ. ಹಾಗೆಯೇ, ಉಡುಪಿ ಜಿಲ್ಲೆಯ ಅಡಕೆ, ಕರಿಮೆಣಸು, ಹಾಸನ ಜಿಲ್ಲೆಯ ಅಡಕೆ, ಕರಿಮೆಣಸು, ದಾಳಿಂಬೆ, ತುಮಕೂರು ಜಿಲ್ಲೆಯ ಅಡಕೆ, ಪರಂಗಿ, ದಾಳಿಂಬೆ ಹಾಗೂ ವಿಜಯಪುರ ಜಿಲ್ಲೆಯ ನಿಂಬೆ, ದಾಳಿಂಬೆ ಬೆಳೆಗಳಿಗೆ ರೈತರು ಬೆಳೆ ವಿಮೆ ಮಾಡಿಸಲು ಜೂ.30 ಕೊನೆಯ ದಿನ.
ಅಕ್ಕಪಕ್ಕದ ಜಿಲ್ಲೆಗೆ ತಾರತಮ್ಯ:
ಮತ್ತೊಂದೆಡೆ, ಅಡಕೆ, ಕರಿಮೆಣಸಿಗೆ ವಿಮೆ ಮಾಡಿಸಲು ಉಡುಪಿ ಜಿಲ್ಲೆಗೆ ಜೂ.30 ಕೊನೆಯ ದಿನ. ಆದರೆ ಪಕ್ಕದ ದಕ್ಷಿಣ ಕನ್ನಡ ಜಿಲ್ಲೆಗೆ ಜು.30 ರವರೆಗೂ ಕಾಲಾವಕಾಶ ನೀಡಲಾಗಿದೆ. ಈ ಎರಡೂ ಜಿಲ್ಲೆಗಳ ಗಡಿಗಳು ಹೊಂದಿಕೊಂಡಿದ್ದರೂ ಉಡುಪಿ ಜಿಲ್ಲೆಗೆ ಮಾತ್ರ ವಾರ ಅವಕಾಶ ನೀಡಿ ದಕ್ಷಿಣ ಕನ್ನಡಕ್ಕೆ ಬರೋಬ್ಬರಿ 37 ದಿನ ನೀಡಿರುವ ಕಾರಣವಾದರೂ ಏನು ಎಂದು ಬೆಳೆಗಾರರು ಪ್ರಶ್ನಿಸಿದ್ದಾರೆ.
ಬೆಳೆ ವಿಮೆ ಮಾಡಿಸುವ ಸಂಬಂಧ ತೋಟಗಾರಿಕಾ ಇಲಾಖೆ ಜೂ.23 ರಂದು ಆದೇಶ ಹೊರಡಿಸಿದೆ. ಇದು ಗ್ರಾಪಂನಂತಹ ತಳಮಟ್ಟಕ್ಕೆ ತಲುಪಲು ಎರಡ್ಮೂರು ದಿನಗಳಾದರೂ ಬೇಕು. ರೈತರು ವಿಮೆ ಹಣ ಪಾವತಿಸಲು ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ ಅಥವಾ ಕರ್ನಾಟಕ ಒನ್‌ಗಳಿಗೆ ತೆರಳಬೇಕು. ಪರಿಸ್ಥಿತಿ ಹೀಗಿರುವುದರಿಂದ ಸಮಯಾವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬೆಳೆ ವಿಮೆ ಮಾಡಿಸಲು ಜೂ.30 ಕೊನೆಯ ದಿನ ನಿಗದಿಯಾಗಿರುವ ಬೆಳೆಗಳಿಗೆ ಸಂಬಂಧಿಸಿ ಅವಧಿ ವಿಸ್ತರಿಸುವಂತೆ ವಿಮಾ ಕಂಪೆನಿಗಳಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗುವುದು.
-ಡಿ.ಎಸ್.ರಮೇಶ್, ತೋಟಗಾರಿಕೆ ಇಲಾಖೆ ನಿರ್ದೇಶಕ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ