
ವಿಜಯಪುರ (ಜ.29): ರಾಜ್ಯ ಕಾಂಗ್ರೆಸ್ ಪಕ್ಷದಲ್ಲಿ 136 ಸೀಟ್ ಇದ್ದರೂ ಸಿಎಂ ಕುರ್ಚಿಯ ಅಭದ್ರತೆ ಅವರಲ್ಲೇ ಕಾಡುತ್ತಿದೆ. ಹೇಗಾದರೂ ಮಾಡಿ ಅದನ್ನು ಮರೆಮಾಚಲು ವಿಬಿ ಜಿ ರಾಮ್ ಜಿ ಮಸೂದೆಗೆ ಕಾಂಗ್ರೆಸ್‌ನವರು ವಿರೋಧ ಮಾಡುತ್ತಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಆರೋಪಿಸಿದರು.
ನಗರದಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ತಮ್ಮ ಆಡಳಿತದಲ್ಲಿರುವ ವೈಫಲ್ಯ ಹಾಗೂ ಹುಳುಕುಗಳನ್ನು ಮುಚ್ಚಿಕೊಳ್ಳಲು ವಿಬಿ ಜಿ ರಾಮ್ ಜಿ ಕುರಿತು ವಿನಾಕಾರಣ ಆರೋಪಿಸುತ್ತಿದೆ. ಉದ್ಯೋಗ ಖಾತ್ರಿ ಯೋಜನೆ ಎಂಬುದು ಕಾಂಗ್ರೆಸ್‌ನವರಿಗೆ ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿತ್ತು. ಆದರೆ ಆ ಯೋಜನೆಗೆ ಹಲವಾರು ಕಟ್ಟುನಿಟ್ಟಿನ ಕ್ರಮಗಳನ್ನು ತಂದಿದ್ದರಿಂದ ಅವರಿಗೆ ಸಮಸ್ಯೆಯಾಗಿದೆ. ಬಡವರ ಅನುಕೂಲಕ್ಕಾಗಿ ತಂದ ಯೋಜನೆಯ ಬಗ್ಗೆ ಅವರು ವಿರೋಧ ವ್ಯಕ್ತಪಡಿಸಿದಂತೆ ನಾವೂ ಸಹ ಜನರ ಬಳಿಗೆ ಹೋಗಿ ಈ ಯೋಜನೆಯ ಒಳ್ಳೆಯ ಅಂಶಗಳನ್ನು ತಿಳಿಸಲಿದ್ದೇವೆ ಎಂದು ಹೇಳಿದರು.
ಮಹಾತ್ಮ ಗಾಂಧೀಜಿಯವರ ಕನಸನ್ನು ನಿಜವಾಗಿಯೂ ನನಸು ಮಾಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿ ಅವರು. ಗಾಂಧೀಜಿಯನ್ನು ನಾವು ಪ್ರೀತಿ ಮಾಡಿದಷ್ಟು ಕಾಂಗ್ರೆಸ್‌ನವರು ಮಾಡಲು ಸಾಧ್ಯವೇ ಇಲ್ಲ. ಕಾಂಗ್ರೆಸ್‌ನವರು ಗಾಂಧೀಜಿ ಹೆಸರನ್ನು ಕೇವಲ ಓಟ್ ಬ್ಯಾಂಕ್‌ಗಾಗಿ ಬಳಸಿಕೊಂಡು ಈಗ ಮಹಾತ್ಮಾಗಾಂಧಿ ಹೆಸರಿನಲ್ಲಿ ಮೊಸಳೆ ಕಣ್ಣೀರು ಸುರಿಸುತ್ತಿದೆ. ಯೋಜನೆಯ ಬಗ್ಗೆ ಈಗ ಅಪಪ್ರಚಾರ ಮಾಡುತ್ತಿರುವ ಕಾಂಗ್ರೆಸ್ಸಿಗರು ಚಳಲಿಗಾಲದ ಅಧಿವೇಶನದಲ್ಲಿ ಕಾಯ್ದೆ ಮಂಡನೆಯಾದಾಗ ಅದರ ಬಗ್ಗೆ ಯಾಕೆ ಚರ್ಚೆ ಮಾಡಲಿಲ್ಲ?. ಸಿದ್ದರಾಮಯ್ಯನವರೇ ನಿಮ್ಮದೆ ಸರ್ಕಾರ ಇದ್ದಾಗ ಇಂದಿರಾ ಕ್ಯಾಂಟಿನ್ ಎಂದು ಹೆಸರು ಇಟ್ಟಾಗ ಯಾಕೆ ಗಾಂಧೀಜಿ ನೆನಪು ಆಗಲಿಲ್ಲ. ವೃತ್ತಗಳು, ಭವನಗಳು, ಅನೇಕ ಯೋಜನೆಗಳು ಸೇರಿದಂತೆ ದೇಶದಲ್ಲಿ 365ಕ್ಕೂ ಅಧಿಕ ಯೋಜನೆಗಳಿಗೆ ಮಹಾತ್ಮಾಗಾಂಧಿ ಕುಟುಂಬಕ್ಕೆ ಸಂಬಂಧವೇ ಇಲ್ಲದ ಇಂದಿರಾಗಾಂಧಿ, ರಾಜೀವ ಗಾಂಧಿ ಹೆಸರಿಡುವಾಗ ಯಾಕೆ ಮಹಾತ್ಮಾ ಗಾಂಧೀಜಿ ನೆನಪಾಗಲಿಲ್ಲ?. ಗಾಂಧೀಜಿಯವರು ಈಗ ಇದ್ದಿದ್ದರೆ ನಾವು ರಾಮನ ಹೆಸರು ಇಟ್ಟಿದ್ದನ್ನು ಅವರೇ ಸ್ವಾಗತ ಮಾಡುತ್ತಿದ್ದರು ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ ಮಾತನಾಡಿ, ಅಬಕಾರಿ ಇಲಾಖೆಯಲ್ಲಿ ಡಿಸಿ ಲೆವೆಲ್ ಅಧಿಕಾರಿ ಲೋಕಾಯುಕ್ತರ ಕೈಗೆ ಸಿಲುಕಿದ್ದಾರೆ. ಅವರ ಆಡಿಯೋ ರೆಕಾರ್ಡ್‌ನಲ್ಲಿ ಅಬಕಾರಿ ಸಚಿವರಿಗೆ ಅವರ ಪುತ್ರರಿಗೆ ಹೇಗೆ ಹಣ ಹಂಚಿಕೆ ಆಗುತ್ತದೆ ಎಂಬುದು ಇದೆ. ಸರ್ಕಾರಕ್ಕೆ ಹಾಗೂ ಅವರ ಬೊಕ್ಕಸಕ್ಕೆ ಹಣಕಾಸಿನ ಮೂಲ ಅಬಕಾರಿ ಇಲಾಖೆಯೇ ಆಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಮಾಜಿ ಶಾಸಕ ರಮೇಶ ಭೂಸನೂರ, ಮುಖಂಡರಾದ ವಿಜುಗೌಡ ಪಾಟೀಲ, ಉಮೇಶ ಕಾರಜೋಳ, ಕಾಸೂಗೌಡ ಬಿರಾದಾರ, ಚಂದ್ರಶೇಖರ ಕವಟಗಿ, ಸಂಜಯ ಐಹೊಳ್ಳಿ, ಮಲ್ಲಮ್ಮ ಜೋಗೂರ, ವಿಜಯ ಜೋಶಿ ಇದ್ದರು.
ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಡಿಸಿಎಂ ಅಜಿತ ಪವಾರ ದುರಂತ ಸಾವನಪ್ಪಿದ್ದು, ಎಲ್ಲರನ್ನೂ ಅಗಲಿದ್ದಾರೆ. ಇಂತಹ ಅವಘಡ ಆಗಬಾರದಿತ್ತು, ಇದು ದುರ್ದೈವದ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಅಜಿತ ಪವಾರರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ. ಅಜೀತ ಪವಾರ ನಮ್ಮ ಎನ್‌ಡಿಎ ಸದಸ್ಯರಾಗಿದ್ದರು, ಮಹಾರಾಷ್ಟ್ರದ ಜನಪ್ರಿಯ ನಾಯಕರಾಗಿದ್ದರು. ಬೆಳಗಾವಿ ವಿಚಾರದಲ್ಲಿ ಮಾರಾಠಿಗರಿಗೆ ಸಹಬಾಳ್ವೆಯಿಂದ ಇರುವಂತೆ ಸೂಚಿಸುತ್ತಿದ್ದರು. ಬೆಳಗಾವಿಗೆ ಬಂದರೂ ಸಹ ಎಂದೂ ಮರಾಠಿ ಕನ್ನಡ ಎಂದು ಭೇದ ಮಾಡಲಿಲ್ಲ. ಕನ್ನಡಿಗರ ಜೊತೆಗೆ ಉತ್ತಮ ಬಾಂಧವ್ಯ, ಸಹಬಾಳ್ವೆಯಿಂದ ಸಾಗುವಂತೆ ಮರಾಠಿಗರಿಗೆ ಸಲಹೆ ನೀಡಿದ್ದರು.
ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ