ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ರೈಲು ಐದು ತಿಂಗಳ ಬಳಿಕ ಸಂಚಾರ ಆರಂಭ| ಮೊದಲ ದಿನ ಪ್ರಯಾಣಿಕರಿಂದ ನಿರಸ ಪ್ರತಿಕ್ರಿಯೆ| ಎರಡನೇ ದಿನವಾದ ಮಂಗಳವಾರ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ| ಬಿಎಂಆರ್‌ಸಿಎಲ್‌ಗೆ ಒಟ್ಟು 1.85 ಲಕ್ಷ ರು. ಆದಾಯ|
ಬೆಂಗಳೂರು(ಸೆ.09): ಕೋವಿಡ್ ಸೋಂಕು ಹರಡುವುದನ್ನು ತಡೆಯಲು ಕೆಲವು ನಿರ್ಬಂಧಗಳೊಂದಿಗೆ ನೇರಳೆ ಮಾರ್ಗದಲ್ಲಿ ಮಾತ್ರ ರೈಲು ಸಂಚಾರ ಆರಂಭಿಸಿದ್ದ ನಮ್ಮ ಮೆಟ್ರೋ ಇಂದಿನಿಂದ(ಬುಧವಾರ) ಹಸಿರು ಮಾರ್ಗದಲ್ಲೂ ಸಂಚಾರ ಆರಂಭಿಸಲಿದೆ.
ಬೈಯಪ್ಪನಹಳ್ಳಿ- ಮೈಸೂರು ರಸ್ತೆ ಮೆಟ್ರೋ ಮಾರ್ಗದ ನಡುವೆ ಹಿಂದಿನಂತೆ ಬೆಳಗ್ಗೆ 8 ರಿಂದ 11 ಮತ್ತು ಸಂಜೆ 4.30ರಿಂದ 7.30ರವರೆಗೆ ಮೆಟ್ರೋ ರೈಲು ಸಂಚರಿಸಲಿದೆ. ಹಸಿರು ಮಾರ್ಗದಲ್ಲಿ ಸೆ.10ರವರೆಗೆ ನಾಗಸಂದ್ರ- ಯಲಚೇನಹಳ್ಳಿ ನಿಲ್ದಾಣಗಳ ನಡುವೆ ಬೆಳಗ್ಗೆ 8 ರಿಂದ 11 ಮತ್ತು ಸಂಜೆ 4.30ರಿಂದ 7.30ರವರೆಗೆ ರೈಲು ಸಂಚರಿಸಲಿದೆ. ಸೆ.11 ರಿಂದ ಎರಡು ಮಾರ್ಗದಲ್ಲಿಯೂ ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ರೈಲುಗಳು ಕಾರ್ಯಾಚರಣೆ ನಡೆಸಲಿವೆ.
ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಮಾತ್ರ ಪ್ರವೇಶ; ರೀಚಾರ್ಜ್ ಮಾಡಲು ಪರದಾಟ!
ಪ್ರಯಾಣಿಕರ ಸಂಖ್ಯೆ ಹೆಚ್ಚಳ:
ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ನಮ್ಮ ಮೆಟ್ರೋ ರೈಲು ಐದು ತಿಂಗಳ ಬಳಿಕ ಸೋಮವಾರ ಸಂಚಾರ ಆರಂಭಿಸಿದ್ದು, ಮೊದಲ ದಿನ ಪ್ರಯಾಣಿಕರಿಂದ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಎರಡನೇ ದಿನವಾದ ಮಂಗಳವಾರ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳವಾಗಿದ್ದು ಬೆಳಗ್ಗೆ 8ರಿಂದ 11ರವರೆಗೆ 2303 ಮತ್ತು ಸಂಜೆ 4.30ರಿಂದ 7.30ರವರೆಗೆ 2728 ಸೇರಿ ಒಟ್ಟು 5031 ಪ್ರಯಾಣಿಸಿದ್ದಾರೆ. ಹೀಗಾಗಿ ಬಿಎಂಆರ್‌ಸಿಎಲ್‌ಗೆ ಒಟ್ಟು 1.85 ಲಕ್ಷ ರು. ಆದಾಯ ಬಂದಿದೆ.
ಬುಧವಾರದಿಂದ ನೇರಳೆ ಮತ್ತು ಹಸಿರು ಮಾರ್ಗದಲ್ಲಿ ಮೆಟ್ರೋ ರೈಲುಗಳು ಸಂಚಾರ ನಡೆಸಲಿದ್ದು ಪ್ರಯಾಣಿಕರ ಸಂಖ್ಯೆಯಲ್ಲಿ ಇನ್ನೂ ಹೆಚ್ಚಳವಾಗುವ ನಿರೀಕ್ಷೆ ಇದೆ ಎಂದು ಬಿಎಂಆರ್‌ಸಿಎಲ್ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.