
ಬೆಂಗಳೂರು(ನ.14): ಹಿಂಗಾರು ದುರ್ಬಲ ಇರುವ ಉತ್ತರ ಒಳನಾಡು ಭಾಗದ ಜಿಲ್ಲೆಗಳಲ್ಲಿ 2021ರ ಮುಂಗಾರು ಆರಂಭದವರೆಗೂ ಹೆಚ್ಚು ಒಣ ಹವೆ ಹಾಗೂ ಅತಿ ಚಳಿಯ ವಾತಾವರಣ ಕಂಡು ಬರಲಿದೆ ಎಂದು ಹವಾಮಾನ ಇಲಾಖೆಯ ಮೂಲಗಳು ತಿಳಿಸಿವೆ.
ಅರಬ್ಬಿ ಸಮುದ್ರ ಹಾಗೂ ಬಂಗಾಳಕೊಲ್ಲಿಯಿಂದ ಹೆಚ್ಚು ದೂರವಿರುವ ಉತ್ತರ ಒಳನಾಡಿನಲ್ಲಿ ನವೆಂಬರ್ ಆರಂಭದ ದಿನದಿಂದ ಬೆಳಗ್ಗೆ ಮಂಜು ಕವಿದು ಅತೀ ಚಳಿ, ಮಧ್ಯಾಹ್ನದ ಹೊತ್ತಿಗೆ ಹೆಚ್ಚು ಒಣ ಹವೆ ವಾತಾವರಣ ಇರಲಿದೆ. ಉತ್ತರ ಒಳನಾಡಿನಲ್ಲಿ ತಡರಾತ್ರಿಯಿಂದ ಬೆಳಗ್ಗೆವರೆಗೂ ತಂಪಿನ ಪ್ರಮಾಣ ವೇಗವಾಗಿ ಹೆಚ್ಚಾಗುತ್ತದೆ. ನಂತರ ಮಧ್ಯಾಹ್ನದ ಹೊತ್ತಿಗೆ ತಂಪಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿ ತಾಪಮಾನವು ಕೂಡ ಅಷ್ಟೇ ವೇಗವಾಗಿ ಹೆಚ್ಚಾಗುತ್ತಿದೆ.
ಇದಕ್ಕೆ ಈ ಪ್ರದೇಶಗಳು ಸಮುದ್ರಮಟ್ಟದಿಂದ ದೂರುವಿರುವುದೇ ಕಾರಣ. ಇದರಿಂದ ಗಾಳಿಯಲ್ಲಿ ತೇವಾಂಶ ಕಡಿಮೆ ಇರುತ್ತದೆ. ಈ ಕಾರಣಗಳಿಂದ ಉತ್ತರ ಒಳನಾಡಿನಲ್ಲಿ ಚಳಿ, ಉಷ್ಣಾಂಶ ಹೆಚ್ಚು ಕಂಡು ಬಂದಿದೆ. ಆದರೆ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡು ಸಮುದ್ರಕ್ಕೆ ಹತ್ತಿರ ಇರುವುದರಿಂದ ಗಾಳಿಯಲ್ಲಿ ತೇವಾಂಶ ಹೆಚ್ಚಿರುತ್ತದೆ. ಹೀಗಾಗಿ ಇಲ್ಲಿ ವಾತಾವರಣ ಸಾಮಾನ್ಯದಂತೆ ಇರಲಿದೆ.
ರಾಜ್ಯದಲ್ಲಿ ಚಳಿ ಹೆಚ್ಚಳ: ಬೀದರ್‌ನಲ್ಲಿ ಕನಿಷ್ಠ ತಾಪಮಾನ ದಾಖಲು
ಬೀದರ್, ಕಲಬುರಗಿ, ರಾಯಚೂರು, ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿ 11 ಜಿಲ್ಲೆ ಒಳಗೊಂಡ ಉತ್ತರ ಒಳನಾಡಿನ ಭಾಗಕ್ಕೆ ಹಿಂಗಾರು ವೇಳೆ ಭಾರತದ ಮಾರ್ಗವಾಗಿ ಶೀತದ ಗಾಳಿ ಬೀಸುತ್ತದೆ. ಈ ಶೀತಗಾಳಿ ಮಧ್ಯಪ್ರದೇಶ ಮಾರ್ಗವಾಗಿ ಕರ್ನಾಟಕ ಪ್ರವೇಶ ಮಾಡುತ್ತದೆ. ಇದರಿಂದ ಉತ್ತರ ಒಳನಾಡಿನ ಭಾಗದಲ್ಲಿ ಬೆಳಗ್ಗೆ ಅತೀ ಚಳಿ, ಮಧ್ಯಾಹ್ನ ಹೆಚ್ಚು ಒಣ ಹವೆ (ಉಷ್ಣಾಂಶ) ವಾತಾವರಣ ಸೃಷ್ಟಿಯಾಗುತ್ತಿದೆ. ಇಲ್ಲಿನ ಈ ವಾತಾವರಣ ಮುಂದಿನ ಮುಂಗಾರುವರೆಗೆ (2021 ಮಾರ್ಚ್) ಮುಂದುವರಿಯಲಿದೆ. ವಾಯುಭಾರ ಕುಸಿತ, ತೀವ್ರ ಮೇಲ್ಮೈ ಸುಳಿಗಾಳಿ ಯಂತಹ (ಸ್ಟ್ರಫ್) ಹವಾಮಾನದಲ್ಲಿ ಬದಲಾವಣೆ ಉಂಟಾದರೆ ಉತ್ತರ ಒಳನಾಡಿನಲ್ಲಿ ಉಷ್ಣಾಂಶದ ಸಮತೋಲನ ಸಾಧ್ಯವಾಗಬಹುದು. ಆದರೆ ಈ ಬದಲಾವಣೆಯನ್ನು ಮುಂದಿನ ಮುಂಗಾರು ಹೊತ್ತಿಗೆ ನಿರೀಕ್ಷಿಸಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ