'ಹಸಿರು ಪಟಾಕಿಯಿಂದಲೂ ಕಣ್ಣಿಗೆ ಹಾನಿ'

By Kannadaprabha NewsFirst Published Nov 14, 2020, 8:01 AM IST
Highlights

5 ವರ್ಷಕ್ಕಿಂತ ಕೆಳಗಿನವರಿಗೆ ಸಿಡಿಸಲು ಬಿಡಬೇಡಿ| ಸಾಕಷ್ಟು ಮುಂಜಾಗ್ರತೆ ಅಗತ್ಯ| ಬೆಂಗಳೂರಿನ ಮಿಂಟೋ ಆಸ್ಪತ್ರೆಯಲ್ಲಿ 24 ಗಂಟೆಯೂ ಚಿಕಿತ್ಸಾ ಸೌಲಭ್ಯ| ವೈದ್ಯರ ಸೂಚನೆಯಿಲ್ಲದೇ ಯಾವುದೇ ಔಷಧ ಬಳಸಬೇಡಿ|

ಬೆಂಗಳೂರು(ನ.14): ಹಸಿರು ಪಟಾಕಿಯಲ್ಲಿಯೂ ರಾಸಾಯನಿಕಗಳಿರುವುದರಿಂದ ಕಣ್ಣಿಗೆ ಹಾನಿಯಾಗುವ ಸಂಭವ ಇರುತ್ತದೆ. ಆದ್ದರಿಂದ ಪಟಾಕಿ ಸಿಡಿಸುವ ಸಂದರ್ಭದಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮಿಂಟೋ ಕಣ್ಣಿನ ಅಸ್ಪತ್ರೆಯ ನಿರ್ದೇಶಕಿ ಡಾ. ಸುಜಾತ ರಾಥೋಡ್‌ ಹೇಳಿದ್ದಾರೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐದು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಪಟಾಕಿ ಸಿಡಿಸಲು ಅವಕಾಶ ನೀಡಬಾರದು. ಮಕ್ಕಳು ಮೇಲೆ ಹೆತ್ತವರು ನಿಗಾ ಇಟ್ಟಿರಬೇಕು. ಮುಖದಿಂದ ದೂರದಲ್ಲಿಟ್ಟು ಪಟಾಕಿ ಸುಡಬೇಕು. ಪಟಾಕಿ ಸುಟ್ಟಬಳಿಕ ಅದನ್ನು ನೀರಿರುವ ಬಕೆಟ್‌ ನಲ್ಲಿ ಹಾಕಬೇಕು. ಪಟಾಕಿಯನ್ನು ಮೈದಾನದಲ್ಲಿ ಸುಡಬೇಕು ಎಂದು ಅವರು ಸಲಹೆ ನೀಡಿದರು.

ಪಟಾಕಿ ಸಿಡಿದು ಕಣ್ಣಿಗೆ ಹಾನಿಯಾದರೆ ಕಣ್ಣನ್ನು ಕೈಯಲ್ಲಿ ಉಜ್ಜಬಾರದು. ಶುದ್ಧ ಕರವಸ್ತ್ರದಿಂದ ಕಣ್ಣನ್ನು ಮುಚ್ಚಿ ತಕ್ಷಣವೇ ಪಕ್ಕದ ಕಣ್ಣಿನ ಅಸ್ಪತ್ರೆಗೆ ತೆರಳಬೇಕು. ವೈದ್ಯರ ಸೂಚನೆಯಿಲ್ಲದೇ ಯಾವುದೇ ಔಷಧವನ್ನು ಬಳಸಬೇಡಿ ಎಂದು ಡಾ. ಸುಜಾತ ತಿಳಿಸಿದರು.

ಈ ಪಟಾಕಿಗಳನ್ನು ಹೊಡೆಯೋಕಿದೆ ಅನುಮತಿ; ಆದ್ರೆ ಷರತ್ತುಗಳು ಅನ್ವಯ!

ದೀಪಾವಳಿಯ ಸಂದರ್ಭದಲ್ಲಿ ದಿನದ 24 ಗಂಟೆಯೂ ಚಿಕಿತ್ಸೆ ನೀಡಲು ಸಿದ್ಧತೆ ಮಾಡಿಕೊಂಡಿದ್ದೇವೆ. ಅಸ್ಪತ್ರೆಯಲ್ಲಿ ಹಾಸಿಗೆಗಳ ನಡುವೆ ಸಾಮಾಜಿಕ ಅಂತರ ಕಾಪಾಡಿಕೊಂಡು ಕಣ್ಣಿನ ಸಮಸ್ಯೆ ಆದವರಿಗೆ ಚಿಕಿತ್ಸೆ ನೀಡಲಾಗುವುದು ಎಂದು ಅವರು ಹೇಳಿದರು.

ಪ್ರತಿ ವರ್ಷ ದೀಪಾವಳಿಯ ಸಂದರ್ಭದಲ್ಲಿ ಪಟಾಕಿ ಸಿಡಿತದಿಂದ ಕಣ್ಣಿಗೆ ಗಾಯಗೊಂಡು ಸುಮಾರು 50 ರಿಂದ 60 ಮಂದಿ ಅಸ್ಪತ್ರೆಗೆ ಚಿಕಿತ್ಸೆಗೆ ಬರುತ್ತಾರೆ. ಕಳೆದ ವರ್ಷ ಬಂದವರಲ್ಲಿ ಶೇ. 40 ಮಂದಿಯ ಕಣ್ಣಿಗೆ ಹೂಕುಂಡ ಸಿಡಿತದಿಂದ ಹಾನಿಯಾಗಿತ್ತು ಎಂದು ಅವರು ಮಾಹಿತಿ ನೀಡಿದರು.
 

click me!