
ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಣಿಯಾಗಿರುವ ಉದ್ದಿಮೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ಮಾಸಿಕ ಒಂದು ದಿನದ ವೇತನಸಹಿತ ರಜೆ ನೀಡುವ ಸಂಬಂಧ ರಾಜ್ಯ ಸರ್ಕಾರದ ಹೊರಡಿಸಿರುವ ಅಧಿಸೂಚನೆ ಪ್ರಶ್ನಿಸಿ 17 ಮಹಿಳೆಯರೇ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಈ ಅರ್ಜಿ ಗುರುವಾರ ನ್ಯಾಯಮೂರ್ತಿ ಅನಂತ ರಾಮನಾಥ್ ಹೆಗಡೆ ಅವರ ನ್ಯಾಯಪೀಠದ ಮುಂದೆ ಬಂದಿತ್ತು. ಕೆಲ ಕಾಲ ಅರ್ಜಿ ವಿಚಾರಣೆ ನಡೆಸಿದ ಪೀಠ ವಿಚಾರಣೆಯನ್ನು ಏ. 1ಕ್ಕೆ ಮುಂದೂಡಿದೆ.
ಆಕ್ಷೇಪವೇನು?: ರಾಜ್ಯ ಕಾರ್ಮಿಕ ಇಲಾಖೆಯ ಅಧಿಸೂಚನೆ ಪರೋಪಕಾರಿ ದೃಷ್ಟಿಯಿಂದ ಕೂಡಿದೆ. ಆದರೆ, ನೈಜವಾಗಿ ಹೇಳುವುದಾದರೆ, ಇದು ಸಮಾನತೆ ಹಕ್ಕಿಗೆ ವಿರುದ್ಧವಾಗಿದೆ. ಲಿಂಗ ತಾರತಮ್ಯಗೆ ಎಡೆ ಮಾಡಿಕೊಡುತ್ತದೆ. ಮಹಿಳೆಯರು ಪುರುಷರಿಗಿಂತ ದುರ್ಬಲರು ಎಂಬ ಭಾವನೆಯನ್ನು ಉದ್ಯೋಗದಾತರಲ್ಲಿ ಮೂಡಿಸುತ್ತದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.
ಇದರಿಂದ ಮಹಿಳಾ ಉದ್ಯೋಗಿಗಳ ನೇಮಕ ಮಾಡಲು ಹಾಗೂ ಬಡ್ತಿ ಕಂಪೆನಿಗಳು ಹಿಂದೇಟು ಹಾಕುತ್ತವೆ ಎಂದು ಅರ್ಜಿದಾರ ಮಹಿಳೆಯರು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.
ಅಲ್ಲದೆ ಋತುಚಕ್ರ ಸಮಯದಲ್ಲಿ ಮಾಸಿಕ ಒಂದು ದಿನ ಕಡ್ಡಾಯ ರಜೆ ನೀಡುವುದರಿಂದ ಸ್ಪರ್ಧಾತ್ಮಕ ವೃತ್ತಿಜೀವನದಲ್ಲಿ ಮಹಿಳೆಯರಿಗೆ ಹಿನ್ನಡೆಯಾಗುವ ಸಾಧ್ಯತೆಯಿದೆ. ಉದ್ಯೋಗದಾತರಿಗೆ ಹೊರೆ ಹೆಚ್ಚುತ್ತದೆ. ಮಹಿಳಾ ಉದ್ಯೋಗಿಗಳ ದಕ್ಷತೆ ಕಡಿಮೆ ಮಾಡುತ್ತದೆ. ಮಹಿಳಾ ನೌಕರರ ಬಲೀಕರಣಕ್ಕೂ ಅಡ್ಡಿಯಾಗುತ್ತದೆ ಎಂದು ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ನೀತಿ ಪ್ರತಿ ಮಹಿಳೆಗೂ ಋತುಚಕ್ರ ರಜೆ ಅಗತ್ಯ ಎಂಬ ಊಹೆ ಸೃಷ್ಟಿಸುತ್ತದೆ. ಆದರೆ, ಋತುಚಕ್ರದ ಕಾರಣಕ್ಕೆ ಕಡ್ಡಾಯ ರಜೆ ನೀಡುವ ಅಗತ್ಯವಿಲ್ಲ. ಮತ್ತೊಂದೆಡೆ ಈ ನೀತಿ ರೂಪಿಸುವಾಗ ಸರ್ಕಾರ ಮಹಿಳೆಯರ ಅಭಿಪ್ರಾಯ ಪಡೆದಿಲ್ಲ. ಇದು ಸಹಜ ನ್ಯಾಯದ ಉಲ್ಲಂಘನೆಯಾಗಿದ್ದು, ರಾಜ್ಯ ಸರ್ಕಾರದ ಅಧಿಸೂಚನೆ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ