
ಗಿರೀಶ್ ಮಾದೇನಹಳ್ಳಿ
ಬೆಂಗಳೂರು (ಜೂ.10): ಕಳೆದ ಆರು ವರ್ಷಗಳಲ್ಲಿ ಕರುನಾಡಿನ ‘ಸರ್ಕಾರಿ ಬಾಬು’ಗಳ ಭ್ರಷ್ಟಾಚಾರದ ಗಣಿ ಶೋಧಿಸಿ 2,357.92 ಕೋಟಿ ರುಪಾಯಿ ಮೊತ್ತದ ಹಗರಣವನ್ನು ಲೋಕಾಯುಕ್ತ ಪೊಲೀಸರು ಪತ್ತೆ ಹಚ್ಚಿದ್ದು, ಕಂದಾಯ ಇಲಾಖೆಯೊಂದರಲ್ಲೇ ಪ್ರತ್ಯೇಕವಾಗಿ ಸುಮಾರು 1,500 ಕೋಟಿ ಮೊತ್ತದ ಅಕ್ರಮಗಳು ನಡೆದಿರುವ ಮಹತ್ವದ ಸಂಗತಿ ಬೆಳಕಿಗೆ ಬಂದಿದೆ.
ಅಕ್ರಮದಲ್ಲಿ ಪಾತ್ರ ವಹಿಸಿರುವ ಭ್ರಷ್ಟ ಅಧಿಕಾರಿಗಳ ಬೇಟೆಗೆ ಸಿದ್ಧವಾಗಿರುವ ಪೊಲೀಸರು, ಕಳಂಕ ಹೊತ್ತಿರುವ ನಾಲ್ವರು ಐಎಎಸ್ ಅಧಿಕಾರಿಗಳು ಸೇರಿ ಇತರ ಅಧಿಕಾರಿಗಳ ವಿರುದ್ಧ ತನಿಖೆಗೆ ಸರ್ಕಾರದ ಪೂರ್ವಾನುಮತಿ ಕೋರಿದ್ದಾರೆ. ಆದರೆ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ಪದೇ ಪದೆ ‘ನೆನಪಿನೋಲೆ’ ಕಳುಹಿಸಿದರೂ ತನಿಖೆಗೆ ಹಸಿರು ನಿಶಾನೆ ತೋರಿಸದೆ ಸಕ್ಷಮ ಪ್ರಾಧಿಕಾರದ ಕಡತಗಳಲ್ಲೇ ಪ್ರಾಸಿಕ್ಯೂಷನ್ ಕೋರಿಕೆಯ ವರದಿ ಧೂಳು ಹಿಡಿಯುತ್ತಿದೆ ಎನ್ನಲಾಗಿದೆ.
2020-2026 ವರೆಗೆ ಕಂದಾಯ, ನಗರಾಭಿವೃದ್ಧಿ, ಮುದ್ರಾಂಕ ಮತ್ತು ನೋಂದಣಿ, ಲೋಕೋಪಯೋಗಿ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸೇರಿ 5 ಇಲಾಖೆಗಳಲ್ಲಿ ಲೋಕಾಯುಕ್ತ ಪೊಲೀಸರು ಅಕ್ರಮ ಪತ್ತೆ ಹಚ್ಚಿದ್ದಾರೆ. ರಹಸ್ಯವಾಗಿ ಕಾರ್ಯಾಚರಣೆ ನಡೆಸಿ ಪುರಾವೆ ಸಂಗ್ರಹಿಸಿರುವ ಪೊಲೀಸರು, ಭ್ರಷ್ಟಾಚಾರದ ಕುರಿತು ಅಧಿಕೃತವಾಗಿ ಆರೋಪಿತ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆಗೆ ಆಯಾ ಇಲಾಖೆಗಳಿಗೆ ಅನುಮತಿ ಕೋರಿದ್ದಾರೆ.
ಸಾರ್ವಜನಿಕ ಸೇವೆಯಲ್ಲಿರುವ ಅಧಿಕಾರಿ-ಸಿಬ್ಬಂದಿ ಅಥವಾ ಚುನಾಯಿತ ಪ್ರತಿನಿಧಿಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಸೆಕ್ಷನ್ 17 (ಎ) ಅಡಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಪೊಲೀಸರಿಗೆ ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಕಡ್ಡಾಯ. ಅಧಿಕಾರ ದುರ್ಬಳಕೆ ಮಾಡಿ ಸರ್ಕಾರಕ್ಕೆ ಆರ್ಥಿಕನಷ್ಟ ಉಂಟು ಮಾಡಿದ್ದಲ್ಲದೆ, ಆರೋಪಿ ಸ್ವಂತ ಲಾಭ ಮಾಡಿಕೊಂಡಿರುವುದಕ್ಕೆ ಸೂಕ್ತ ಪುರಾವೆ ಒದಗಿಸಬೇಕಾಗುತ್ತದೆ. ಈ ವರದಿ ಆಧರಿಸಿ ಆರೋಪಿತರ ವಿರುದ್ಧ ಸಕ್ಷಮ ಪ್ರಾಧಿಕಾರವು ಪ್ರಾಸಿಕ್ಯೂಷನ್ ಅನುಮತಿ ನೀಡಲಿದೆ. ಅಂತೆಯೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿ ಸಂಬಂಧಪಟ್ಟವರ ಮುಂದೆ ಲೋಕಾಯುಕ್ತ ಪೊಲೀಸರು ತನಿಖೆಗೆ ಅನುಮತಿ ಕೋರಿದ್ದಾರೆ.
ಇಲಾಖೆ ಅಕ್ರಮ ಮೊತ್ತ
ಬೆಂಗಳೂರು ನಗರ ಜಿಲ್ಲೆಯಲ್ಲಿ 20 ಎಕರೆ ಸರ್ಕಾರಿ ಗೋಮಾಳವನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಕಂದಾಯ ಇಲಾಖೆ ಅಧಿಕಾರಿಗಳು ಪರಭಾರೆ ಮಾಡಿದ್ದಾರೆ. ಈ ಜಮೀನು ಸುಮಾರು ಕೋಟ್ಯಂತರ ಬೆಲೆ ಬಾಳುತ್ತದೆ. ಅದೇ ರೀತಿ ರಾಷ್ಟ್ರೀಯ ಹೆದ್ದಾರಿಗೆ ಸ್ವಾಧೀನಪಡಿಸಿಕೊಂಡ ಜಮೀನು ಸಂಬಂಧ ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ಅಧಿಕಾರಿಗಳು ಕೋಟಿ ಕೋಟಿ ಹಣ ಜೇಬಿಗಿಳಿಸಿಕೊಂಡಿದ್ದಾರೆ ಎಂಬುದನ್ನು ಪೊಲೀಸರು ಶೋಧಿಸಿದ್ದಾರೆ ಎನ್ನಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ