
ಮಂಗಳೂರು : ನಿಷೇಧಿತ ಪಿಎಫ್‌ಐ ಉಗ್ರ ಸಂಘಟನೆಯ ಪ್ರಚಾರಕ್ಕಾಗಿ ವಾಟ್ಸಾಪ್ ಗ್ರೂಪ್ ರಚಿಸಿ, ಅದರ ಮೂಲಕ ಸಂಘಟನೆಯ ಸದಸ್ಯರಿಗೆ ಮತ್ತೆ ಚಟುವಟಿಕೆ ಆರಂಭಿಸಲು ಪ್ರಚೋದನೆ ನೀಡುವ ಮೂಲಕ ರಾಜ್ಯದಲ್ಲಿ ಪಿಎಫ್‌ಐಗೆ ಮರು ಜೀವ ನೀಡಲು ಯತ್ನಿಸುತ್ತಿದ್ದ ಮುಸ್ಲಿಂ ಧರ್ಮಗುರುವನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕು ಉಪ್ಪಿನಂಗಡಿಯ ರಾಮಕುಂಜ ಗ್ರಾಮದ ಬೀಜಾತಳಿ ಹೌಸ್ ಸಯ್ಯದ್ ಇಬ್ರಾಹಿಂ ತಂಞಳ್ (55) ಬಂಧಿತ ಆರೋಪಿ.
ಈತನ ವಿರುದ್ಧ ಬಂದರು ಪೊಲೀಸ್ ಠಾಣೆಯಲ್ಲಿ ಠಾಣೆಯ ಪಿಎಸ್‌ಐ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿತ್ತು. ಬಳಿಕ, ಮಂಗಳೂರಿನ ಉರ್ವಾಸ್ಟೋರ್ ಬಳಿ ಆತನನ್ನು ಬಂಧಿಸಿ, ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಿ, ಬೆಂಗಳೂರಿನ 49ನೇ ಹೆಚ್ಚುವರಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಮತ್ತು ಎನ್‌ಐಎ ಪ್ರಕರಣಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಆತನನ್ನು ಅ.24 ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿದೆ.
ಕೇಂದ್ರ ಸರ್ಕಾರ 2022ರ ಸೆ.28ರಂದು ಪಿಎಫ್‌ಐ ಸಂಘಟನೆಯನ್ನು ನಿಷೇಧಿಸಿತ್ತು. ಅದನ್ನು ಕಾನೂನು ಬಾಹಿರ ಸಂಘಟನೆ ಎಂದು ಘೋಷಿಸಿತ್ತು. ಆದರೂ, ಆರೋಪಿ ‘ಸಲಾಮನ್ ಸಲಾಮ್’ ಎನ್ನುವ ವಾಟ್ಸಾಪ್ ಗ್ರೂಪ್ ರಚಿಸಿ, ಅದರ ಮೂಲಕ ಪಿಎಫ್‌ಐ ಸದಸ್ಯರಿಗೆ ಮತ್ತೆ ಚಟುವಟಿಕೆ ಆರಂಭಿಸಲು ಪ್ರಚೋದನೆ ನೀಡುತ್ತಿದ್ದ. ಸಂಘಟನೆ ಬಗ್ಗೆ ಪ್ರಚಾರ ಮಾಡಿ, ಸಂಘಟನೆಗೆ ನೂತನ ಸದಸ್ಯರನ್ನು ಸೆಳೆಯಲು ಯತ್ನಿಸುತ್ತಿದ್ದ. ಇದರ ಮೂಲಕ ಭೂಗತರಾಗಿರುವ ಪಿಎಫ್‌ಐ ಸದಸ್ಯರನ್ನು ಸಂಪರ್ಕಿಸಿದ್ದ. ಆ ಮೂಲಕ ಕರಾವಳಿಯಲ್ಲಿ ಪಿಎಫ್‌ಐಗೆ ಮರುಜೀವ ನೀಡಲು ಯತ್ನಿಸುತ್ತಿದ್ದ ಎಂದು ಆರೋಪಿಸಲಾಗಿದೆ.
ದೇಶ ವಿರೋಧಿ ಕೃತ್ಯಗಳಲ್ಲಿ ಭಾಗಿಯಾಗಿರುವ ಆರೋಪದ ಹಿನ್ನೆಲೆಯಲ್ಲಿ 2022ರಲ್ಲಿ ಕೇಂದ್ರ ಸರ್ಕಾರದಿಂದ ಪಿಎಫ್‌ಗೆ ನಿಷೇಧಇದರ ಹೊರತಾಗಿಯೂ ‘ಸಲಾಮನ್ ಸಲಾಮ್’ ಎನ್ನುವ ವಾಟ್ಸಾಪ್ ಗ್ರೂಪ್ ರಚಿಸಿ ಸಂಘಟನೆಗೆ ಮರುಜೀವಕ್ಕೆ ಇಬ್ರಾಹಿಂ ಯತ್ನ
ಸುಳಿವು ಪಡೆದು ಆರೋಪಿ ವಶಕ್ಕೆ. ಬೆಂಗಳೂರು ಎನ್‌ಐಎ ನ್ಯಾಯಾಲಯಕ್ಕೆ ಹಾಜರು. ಅ.24ರವರೆಗೂ ಆರೋಪಿ ನ್ಯಾಯಾಂಗ ವಶಕ್ಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ