
ಬೆಂಗಳೂರು (ಆ.30): ನಮ್ಮ ದೇಶದ ಪ್ರಧಾನಮಂತ್ರಿ ಪ್ರತಿ ವರ್ಷ ಅಜ್ಮೇರ್ ಶರೀಫ್‌ಗೆ ಒಂದು ಚಾದರ ಕಳುಹಿಸುತ್ತಾರೆ. ಅಲ್ಲಿಂದ ಆಶೀರ್ವಾದ ಪಡೆಯುತ್ತಾರೆ. ಚಾದರ ಕಳುಹಿಸಿದ ಮಾತ್ರಕ್ಕೆ ಪ್ರಧಾನಮಂತ್ರಿ ಮುಸ್ಲಿಂ ಆಗಿಬಿಟ್ಟರೇ? ಹಾಗೆಯೇ ಬುಕರ್ ಪ್ರಶಸ್ತಿ ವಿಜೇತ ಬಾನು ಮುಷ್ತಾಕ್ ಅವರು ದಸರಾ ಉದ್ಘಾಟನೆ ಮಾಡುವುದು ಅಥವಾ ಮಾಡದಿರುವುದು ಅವರ ವೈಯಕ್ತಿಕ ವಿಚಾರ. ನಾವು ಮಧ್ಯ ಪ್ರವೇಶಿಸುವುದಿಲ್ಲ ಎಂದು ನಗರದ ಜಾಮಿಯಾ ಮಸೀದಿಯ ಮೌಲಾನಾ ಇಮ್ರಾನ್ ಮಕ್ಸೂದ್ ಹೇಳಿದ್ದಾರೆ.
ಬಾನು ಮುಷ್ತಾಕ್ ವಿರುದ್ಧ ಫತ್ವಾ ಹೊರಡಿಸಬೇಕು ಎಂದು ಕೆಲ ಮುಸ್ಲಿಮರು ಜಾಲತಾಣಗಳಲ್ಲಿ ನೀಡಿದ್ದಾರೆ ಎನ್ನಲಾದ ಹೇಳಿಕೆ ಕುರಿತು ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟಪಡಿಸಿದ ಅವರು, ದಸರಾ ಉದ್ಘಾಟನೆ ಸಂಬಂಧಿಸಿ ಲೇಖಕಿ ವಿರುದ್ಧ ನಾವು ಯಾವುದೇ ಫತ್ವಾ ಹೊರಡಿಸುವುದಿಲ್ಲ. ಮುಸ್ಲಿಂ ವಿಚಾರಗಳಿಗೆ ಸಂಬಂಧಿಸಿ ಏನಾದರೂ ಸಮಸ್ಯೆ ಇದ್ದರೆ ಫತ್ವಾ ಹೊರಡಿಸಲಾಗುತ್ತದೆ. ಅದಕ್ಕೆ ಲಿಖಿತ ದೂರು ನೀಡಬೇಕಾಗುತ್ತದೆ. ಅಂತಹ ಅಗತ್ಯವೇ ಬಂದಿಲ್ಲ. ಅದಕ್ಕೂ ರೀತಿ ರಿವಾಜುಗಳಿವೆ. ಯಾರು ಬೇಕಾದವರೂ ಫತ್ವಾ ಹೊರಡಿಸಲಾಗದು ಎಂದರು.
ಬಿಜೆಪಿ ಶಾಸಕ ಗರುಡಾಚಾರ್ ಅವರು ಶುಕ್ರವಾರ ಮಸೀದಿಗೆ ಬಂದು ಪ್ರಾರ್ಥನೆ ಮಾಡುತ್ತಾರೆ. ಹಾಗಂತ ಅವರು ಮುಸ್ಲಿಮರಾದರೇ? ಅದೇ ರೀತಿ ಅನೇಕ ಮುಸ್ಲಿಮರು ಹಿಂದೂ ದೇಗುಲಕ್ಕೆ ಹೋಗುತ್ತಾರೆ. ಅವರು ಅಲ್ಲಿ ಪ್ರಾರ್ಥನೆ ಮಾಡಿದರೆ ಹಿಂದೂ ಆಗುವುದಿಲ್ಲ. ಹಾಗೆಯೇ ಹಿಂದೂಗಳು ಮಸೀದಿಗೆ ಹೋದರೆ ಮುಸ್ಲಿಂ ಆಗುವುದಿಲ್ಲ. ಅದೆಲ್ಲ ಅವರವರ ವೈಯಕ್ತಿಕ ವಿಚಾರಗಳು. ನಮ್ಮ ದೇಶದಲ್ಲಿ ದೇವಸ್ಥಾನ, ಮಸೀದಿ, ಗುರುದ್ವಾರ, ಚರ್ಚ್ ಎಲ್ಲವೂ ಇವೆ. ಅವರವರ ನಂಬಿಕೆಗೆ ತಕ್ಕಂತೆ ಒಟ್ಟಾಗಿ ನಡೆದುಕೊಳ್ಳುತ್ತಾರೆ ಎಂದು ಮೌಲಾನಾ ಮಕ್ಸೂದ್ ಹೇಳಿದರು.
ಗೌರವದಿಂದ ಕರೆದಿದ್ದಾರೆ:
ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್ ಮಾತನಾಡಿ, ಬುಕರ್ ಪ್ರಶಸ್ತಿ ಮೂಲಕ ಕನ್ನಡಕ್ಕೆ ಅಂತಾರಾಷ್ಟ್ರೀಯ ಗೌರವ ತಂದ ಹೆಮ್ಮೆಯ ಕನ್ನಡತಿ ಬಾನು ಮುಷ್ತಾಕ್ ಅವರನ್ನು ಮುಖ್ಯಮಂತ್ರಿಯವರು ಗೌರವದಿಂದ ದಸರಾ ಉದ್ಘಾಟನೆಗೆ ಕರೆದಿದ್ದಾರೆ. ಮೈಸೂರು ಸಂಸ್ಥಾನದ ಮಿರ್ಜಾ ಇಸ್ಮಾಯಿಲ್ ಅವರು ಬೆಂಗಳೂರಿಗೆ ಅನೇಕ ಕೊಡುಗೆ ಕೊಟ್ಟಿದ್ದಾರೆ. ಒಡೆಯರ್ ಅವರು ಇಸ್ಮಾಯಿಲ್ ಅವರನ್ನು ಕರೆದು ದಸರಾ ಮಾಡಿಲ್ಲವೇ? ಆನೆಗಳಿಗೆ ಇಂದಿಗೂ ಮುಸ್ಲಿಮರೇ ಅಂಬಾರಿ ಕಟ್ಟುತ್ತಾರೆ ಎಂದರು.
ರಾಜರ ಕಾಲದಲ್ಲಿ ಯುದ್ದಕ್ಕೆ ಹೋಗುವ ಮೊದಲು ರಾಜರು ದರ್ಗಾಕ್ಕೆ ಬಂದು ಹೋಗುತ್ತಿದ್ದರು. ದಸರಾ ಬರೀ ಧಾರ್ಮಿಕ ಹಬ್ಬ ಮಾತ್ರವಲ್ಲ. ನಾಡ ಹಬ್ಬ. 1442ರಲ್ಲಿ ಪರ್ಷಿಯನ್ ಪ್ರವಾಸಿಗರೊಬ್ಬರು ದಸರಾ ಕುರಿತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬರೆದಿದ್ದಾರೆ. ಈ ಹಿಂದೆ ಕವಿ ಕೆ.ಎಸ್ ನಿಸಾರ್ ಅಹ್ಮದ್ ಅವರು ದಸರಾ ಉದ್ಘಾಟನೆ ಮಾಡಿದ್ದರು. ಬಿಜೆಪಿ ಮುಖಂಡರು ಅನಗತ್ಯವಾಗಿ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅಬ್ದುಲ್ ರಜಾಕ್ ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ