ಕೋವಿಡ್‌ ಮಧ್ಯೆ ಇಂದು ಮತ; ಬಿಜೆಪಿ, ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆ!

By Kannadaprabha NewsFirst Published Apr 17, 2021, 7:51 AM IST
Highlights

ಕೋವಿಡ್‌ ಮಧ್ಯೆ ಇಂದು ಮತ| ಬೆಳಗಾವಿ, ಮಸ್ಕಿ, ಬಸವಕಲ್ಯಾಣ ಕ್ಷೇತ್ರಗಳಲ್ಲಿ ಉಪ ಚುನಾವಣೆ ಮತದಾನ| ಬಿಜೆಪಿ, ಕಾಂಗ್ರೆಸ್‌ಗೆ ಪ್ರತಿಷ್ಠೆಯ ಪ್ರಶ್ನೆ| ಮೇ 2ರಂದು ಮತ ಎಣಿಕೆ, ರಿಸಲ್ಟ್‌

ಬೆಂಗಳೂರು(ಏ.17): ಕೋವಿಡ್‌ ಸಂಕಷ್ಟದ ನಡುವೆಯೂ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿರುವ ಬೆಳಗಾವಿ ಲೋಕಸಭಾ ಕ್ಷೇತ್ರ ಹಾಗೂ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನ ಶನಿವಾರ ನಡೆಯಲಿದೆ.

ಬೆಳಗ್ಗೆ 7ರಿಂದ ಸಂಜೆ 7ಗಂಟೆವರೆಗೆ ಮತದಾನಕ್ಕೆ ಸಮಯ ನಿಗದಿ ಮಾಡಿದ್ದು, ಸಂಜೆ 6ರಿಂದ 7ಗಂಟೆವರೆಗೆ ಕೇವಲ ಕೋವಿಡ್‌ ಸೋಂಕಿತರಿಗೆ ಮಾತ್ರ ಮತದಾನಕ್ಕೆ ಅವಕಾಶ ಕಲ್ಪಿಸಲಾಗುತ್ತಿದೆ. ಮತ ಎಣಿಕೆ ಬರುವ ಮೇ 2ರಂದು ನಡೆಯಲಿದೆ.

ಮೂರು ಕ್ಷೇತ್ರಗಳ ಪೈಕಿ ಬೆಳಗಾವಿ ಮತ್ತು ಮಸ್ಕಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಸವಕಲ್ಯಾಣ ಕ್ಷೇತ್ರದಲ್ಲಿ ಮಾತ್ರ ಕಾಂಗ್ರೆಸ್‌ ಮತ್ತು ಬಿಜೆಪಿ ಜೊತೆಗೆ ಪಕ್ಷೇತರ ನಡುವೆ ತ್ರಿಕೋನ ಸ್ಪರ್ಧೆ ಇದೆ. ಈ ಮೂರು ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಶನಿವಾರ ನಿರ್ಧಾರವಾಗಲಿದ್ದು, ಮತದಾರ ಯಾರ ಪರ ಒಲವು ತೋರುತ್ತಾನೆ ಎಂಬುದನ್ನು ಕಾದು ನೋಡಬೇಕು.

1ರಲ್ಲಿ ಬಿಜೆಪಿ, 2ರಲ್ಲಿ ಕಾಂಗ್ರೆಸ್‌ ಇತ್ತು:

ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಈ ಮೂರು ಕ್ಷೇತ್ರಗಳ ಪೈಕಿ ಬೆಳಗಾವಿ ಲೋಕಸಭಾ ಕ್ಷೇತ್ರ ಬಿಜೆಪಿ ವಶದಲ್ಲಿದ್ದರೆ, ಮಸ್ಕಿ ಮತ್ತು ಬಸವಕಲ್ಯಾಣ ವಿಧಾನಸಭಾ ಕ್ಷೇತ್ರಗಳು ಕಾಂಗ್ರೆಸ್‌ ತೆಕ್ಕೆಯಲ್ಲಿದ್ದವು. ಬೆಳಗಾವಿ ಸಂಸದರಾಗಿದ್ದ ಬಿಜೆಪಿಯ ಸುರೇಶ್‌ ಅಂಗಡಿ ಹಾಗೂ ಬಸವಕಲ್ಯಾಣ ಶಾಸಕರಾಗಿದ್ದ ಕಾಂಗ್ರೆಸ್‌ನ ನಾರಾಯಣರಾವ್‌ ಅವರು ಕೋವಿಡ್‌ನಿಂದಾಗಿ ಅಕಾಲಿಕವಾಗಿ ನಿಧನ ಹೊಂದಿದ್ದರಿಂದ ಆ ಕ್ಷೇತ್ರಗಳು ತೆರವಾಗಿದ್ದವು. ಆ ಎರಡೂ ಕ್ಷೇತ್ರಗಳಲ್ಲಿ ಅಗಲಿದ ಮುಖಂಡರ ಪತ್ನಿಯರೇ ಇದೀಗ ಕಣದಲ್ಲಿದ್ದಾರೆ. ಇನ್ನು ಮಸ್ಕಿ ಶಾಸಕರಾಗಿದ್ದ ಪ್ರತಾಪ್‌ಗೌಡ ಪಾಟೀಲ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿಗೆ ವಲಸೆ ಬಂದಿದ್ದರಿಂದ ಚುನಾವಣೆ ಎದುರಾಗಿದೆ.

ಈ ಮೂರು ಕ್ಷೇತ್ರಗಳನ್ನು ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಗಂಭೀರವಾಗಿ ಪರಿಗಣಿಸಿ ಪ್ರಚಾರ ನಡೆಸಿವೆ. ಮತ್ತೊಂದು ಪ್ರತಿಪಕ್ಷ ಜೆಡಿಎಸ್‌ ಕೇವಲ ಬಸವಕಲ್ಯಾಣ ಕ್ಷೇತ್ರದಲ್ಲಿ ಮಾತ್ರ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ.

ಸುಮಾರು ಮೂರು ವಾರಗಳ ಕಾಲ ಬಿಜೆಪಿ ಪರವಾಗಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಸಚಿವರಾದ ಜಗದೀಶ್‌ ಶೆಟ್ಟರ್‌, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಬಿ.ಶ್ರೀರಾಮುಲು, ಕಾಂಗ್ರೆಸ್‌ನಿಂದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಜೆಡಿಎಸ್‌ನಿಂದ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಅವರು ಸತತ ಪ್ರಚಾರ ಕೈಗೊಂಡು ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಂಡಿದ್ದರು.

ಕಣದಲ್ಲಿರುವ ಪ್ರಮುಖ ಅಭ್ಯರ್ಥಿಗಳು

ಬೆಳಗಾವಿ: ಬಿಜೆಪಿ- ಮಂಗಲ ಸುರೇಶ್‌ ಅಂಗಡಿ, ಕಾಂಗ್ರೆಸ್‌- ಸತೀಶ್‌ ಜಾರಕಿಹೊಳಿ.

ಮಸ್ಕಿ: ಬಿಜೆಪಿ- ಪ್ರತಾಪ್‌ಗೌಡ ಪಾಟೀಲ್‌, ಕಾಂಗ್ರೆಸ್‌- ಬಸನಗೌಡ ತುರ್ವಿಹಾಳ

ಬಸವಕಲ್ಯಾಣ: ಬಿಜೆಪಿ- ಶರಣು ಸಲಗಾರ, ಕಾಂಗ್ರೆಸ್‌- ಮಲ್ಲಮ್ಮ ನಾರಾಯಣರಾವ್‌, ಪಕ್ಷೇತರ- ಮಲ್ಲಿಕಾರ್ಜುನ ಖೂಬಾ

ಮತದಾರರ ವಿವರ

* ಬೆಳಗಾವಿ ಲೋಕಸಭಾ ಕ್ಷೇತ್ರ:

ಪುರುಷರು​​​- 9,11,033, ಮಹಿಳೆಯರು- 9,02,476, ಇತರರು- 58, ಒಟ್ಟು- 18,13,567.

* ಮಸ್ಕಿ ವಿಧಾನಸಭಾ ಕ್ಷೇತ್ರ:

ಪುರುಷರು​​​-1,01,340, ಮಹಿಳೆಯರು- 1,05,076, ಇತರರು- 13, ಒಟ್ಟು- 2,06,429.

* ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ:

ಪುರುಷರು​​​- 1,24,984, ಮಹಿಳೆಯರು- 1,14,794, ಇತರರು- 04, ಒಟ್ಟು- 2,39,782.

ಸುರಕ್ಷಿತ ಮತದಾನ

ಮತದಾನ ಮಾಡಲು ಬರುವವರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಮತಗಟ್ಟೆಸಿಬ್ಬಂದಿಗೆ ಮಾಸ್ಕ್‌, ಸ್ಯಾನಿಟೈಸರ್‌ ನೀಡಲಾಗಿದೆ. ಮತಗಟ್ಟೆಸಿಬ್ಬಂದಿಗೆ ಥರ್ಮಲ್‌ ಸ್ಕಾ್ಯನಿಂಗ್‌ ಮಾಡಲಾಗಿದೆ. ಮತ ಕೇಂದ್ರಗಳನ್ನು ಸ್ಯಾನಿಟೈಸ್‌ ಮಾಡಲಾಗಿದೆ.

ಸೋಂಕಿತರಿಗೂ ಅವಕಾಶ

ಬೆಳಗಾವಿಯಲ್ಲಿ ಮತಗಟ್ಟೆಅಧಿಕಾರಿಗಳೇ ಸೋಂಕಿತರು ಇರುವ ಕಡೆಗೆ ತೆರಳಿ ಬ್ಯಾಲೆಟ್‌ ಪೇಪರ್‌ ನೀಡಿ ಮತ ಪಡೆಯಲಿದ್ದಾರೆ. ಬಸವಕಲ್ಯಾಣದಲ್ಲಿ ಕೊನೆಯ 1 ತಾಸನ್ನು ಸೋಂಕಿತರಿಂದ ಮತದಾನಕ್ಕಾಗಿ ಮೀಸಲಿರಿಸಲಾಗಿದೆ. ಮಸ್ಕಿಯಲ್ಲಿ ಸೋಂಕಿತರಿಗೆ ಪಿಪಿಇ ಕಿಟ್‌ ನೀಡಿ ಮತಗಟ್ಟೆಗೆ ಕರೆದುಕೊಂಡು ಬರಲಾಗುತ್ತದೆ.

click me!