ಪೊಲೀಸ್‌ ಕಮಿಷನರ್‌ಗೆ ವಿಧಾನಸಭೆಯಲ್ಲಿ ತಡೆ!

By Kannadaprabha NewsFirst Published Feb 18, 2020, 12:09 PM IST
Highlights

ಪೊಲೀಸ್‌ ಕಮಿಷನರ್‌ಗೆ ವಿಧಾನಸಭೆಯಲ್ಲಿ ತಡೆ| ಮಾರ್ಷಲ್‌ಗಳಿಂದ ತಡೆ: ಹಿಂದೆ ಹೋದ ಭಾಸ್ಕರ ರಾವ್‌| ಪ್ರತಿಪಕ್ಷಗಳ ಆಕ್ಷೇಪ: ತನಿಖೆ ನಡೆಸಲು ಸ್ಪೀಕರ್‌ಗೆ ಆಗ್ರಹ| ಪೊಲೀಸರು ಸಮವಸ್ತ್ರದಲ್ಲಿ ವಿಧಾನಸಭೆ ಪ್ರವೇಶಿಸುವಂತಿಲ್ಲ

ಬೆಂಗಳೂರು[ಫೆ.18]: ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲು ಆಗಮಿಸಿದ್ದ ರಾಜ್ಯಪಾಲ ವಿ.ಆರ್‌. ವಾಲಾ ಅವರೊಂದಿಗೆ ವಿಧಾನಸಭೆ ಮೊಗಸಾಲೆಗೆ ಬೆಂಗಳೂರು ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಅವರು ಪೊಲೀಸ್‌ ಸಮವಸ್ತ್ರದಲ್ಲೇ ಪ್ರವೇಶಿಸಿದ್ದು, ಕೆಲ ಕಾಲ ಮಾರ್ಷಲ್‌ಗಳು ತಡೆದ ಪ್ರಸಂಗ ನಡೆಯಿತು.

ಭಾಸ್ಕರ್‌ರಾವ್‌ ಅವರು ವಿಧಾನಸಭೆ ಮೊಗಸಾಲೆ ಆವರಣಕ್ಕೆ ಪ್ರವೇಶಿಸಿ ಸದನಕ್ಕೂ ಪ್ರವೇಶಿಸಲು ಮುಂದಾದರು ಎನ್ನಲಾಗಿದ್ದು, ಈ ಬಗ್ಗೆ ಮಾಜಿ ಸಚಿವ ಯು.ಟಿ. ಖಾದರ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸ್ಪೀಕರ್‌ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯಪಾಲರನ್ನು ಬರಮಾಡಿಕೊಂಡ ವಿಧಾನಸಭೆ ಸಭಾಧ್ಯಕ್ಷ, ವಿಧಾನ ಪರಿಷತ್‌ ಸಭಾಪತಿ, ಮುಖ್ಯಮಂತ್ರಿಗಳು, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಉಭಯ ಸದನಗಳ ಕಾರ್ಯದರ್ಶಿಗಳು ರಾಜ್ಯಪಾಲರೊಂದಿಗೆ ವಿಧಾನಸಭೆಗೆ ಪ್ರವೇಶಿಸಿದರು. ಈ ವೇಳೆ ರಾಜ್ಯಪಾಲರು ಪ್ರವೇಶಿಸಿದ ತಕ್ಷಣ ಮಾರ್ಷಲ್‌ಗಳು ಪ್ರಮುಖ ದ್ವಾರ ಬಂದ್‌ ಮಾಡಿದರು. ಬಳಿಕ ಆಗಮಿಸಿದ ಪೊಲೀಸ್‌ ಆಯುಕ್ತರನ್ನು ಮಾರ್ಷಲ್‌ಗಳು ತಡೆದರು. ಈ ವೇಳೆ ಪೊಲೀಸ್‌ ಆಯುಕ್ತರು ಮಾರ್ಷಲ್‌ಗಳೊಂದಿಗೆ ಚರ್ಚಿಸಿ ಒಳ ಹೋದರು. ಬಳಿಕ ವಿಧಾನಸಭೆ ಆವರಣಕ್ಕೂ ಪ್ರವೇಶಿಸಲೂ ಮುಂದಾದರೂ ಈ ವೇಳೆ ಮಾರ್ಷಲ್‌ಗಳು ತಡೆದರು.

ಇದು ವಿವಾದವಾಗುತ್ತಿದ್ದಂತೆಯೇ ವಿಧಾನಸಭೆ ಕಾರ್ಯದರ್ಶಿ ಕೆ. ವಿಶಾಲಾಕ್ಷಿ ಅವರು ಮಾರ್ಷಲ್‌ಗಳನ್ನು ಕರೆದು ವರದಿ ಪಡೆದುಕೊಂಡಿದ್ದಾರೆ. ಈ ವೇಳೆ ಮಾಹಿತಿ ಇಲ್ಲದೆ ಆಯುಕ್ತರು ಒಳಪ್ರವೇಶಿಸಲು ಮುಂದಾದರು. ಬಳಿಕ ವಿಷಯ ತಿಳಿದು ಹಿಂದೆ ಸರಿದರು ಎಂದು ಮಾರ್ಷಲ್‌ಗಳು ವರದಿ ನೀಡಿದರು ಎಂದು ತಿಳಿದುಬಂದಿದೆ.

ತನಿಖೆಗೆ ಆಗ್ರಹ:

ವಿಧಾನಸೌಧದಲ್ಲಿ ಮಾತನಾಡಿದ ಮಾಜಿ ಸಚಿವ ಯು.ಟಿ. ಖಾದರ್‌, ಸಮವಸ್ತ್ರದಲ್ಲಿ ಪೊಲೀಸರು ವಿಧಾನಸಭೆ ಪ್ರವೇಶಿಸುವಂತಿಲ್ಲ. ಹೀಗಾಗಿ ವಿಧಾನಸಭೆಗೆ ಪ್ರತ್ಯೇಕವಾಗಿ ಮಾರ್ಷಲ್‌ಗಳನ್ನು ನೇಮಕ ಮಾಡಲಾಗುತ್ತಿದೆ. ಹೀಗಿದ್ದರೂ ಭಾಸ್ಕರ್‌ರಾವ್‌ ಅವರು ಏಕೆ ಒಳ ಪ್ರವೇಶಿಸಿದರು ಎಂದು ಗೊತ್ತಿಲ್ಲ. ವಿಧಾನಸಭೆ ಗೌರವ ಉಳಿಸಲು ಕೂಡಲೇ ಸಭಾಧ್ಯಕ್ಷರು ಈ ಬಗ್ಗೆ ತನಿಖೆಗೆ ಆದೇಶಿಸಬೇಕು ಎಂದು ಆಗ್ರಹ ಮಾಡಿದರು.

click me!