ಇಂದಿರಾ ಕ್ಯಾಂಟೀನ್‌ನಲ್ಲಿ ಪ್ರತಿದಿನ 1,675 ನಿರ್ಗತಿಕರಿಂದ ಊಟ, ಸಮೀಕ್ಷೆಯಲ್ಲಿ ಬಹಿರಂಗ!

By Kannadaprabha NewsFirst Published Feb 18, 2020, 8:47 AM IST
Highlights

ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡುವ 1,675 ನಿರ್ಗತಿಕರು| ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ಸಮೀಕ್ಷೆಯಲ್ಲಿ ಬಹಿರಂಗ

ಬೆಂಗಳೂರು[ಫೆ.18]: ಬಿಬಿಎಂಪಿ 198 ವಾರ್ಡ್‌ಗಳಲ್ಲಿ ಗುರುತಿಸಿದ ನಾಲ್ಕು ಸಾವಿರ ನಿರ್ಗತಿಕರ ಪೈಕಿ 1,675 ಮಂದಿ ಪ್ರತಿ ನಿತ್ಯ ಇಂದಿರಾ ಕ್ಯಾಂಟೀನ್‌ನಲ್ಲಿ ಉಪಹಾರ ಹಾಗೂ ಊಟ ಸೇವಿಸುತ್ತಿದ್ದಾರೆ.

ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದಡಿ ಬಿಬಿಎಂಪಿಯ 198 ವಾರ್ಡ್‌ಗಳಲ್ಲಿ ಬಿಬಿಎಂಪಿ ಕಳೆದ ನವೆಂಬರ್‌ನಲ್ಲಿ ವಾರ್ಡ್‌ವಾರು ಸಮೀಕ್ಷೆ ನಡೆಸಿ ವರದಿ ಸಿದ್ಧಪಡಿಸಿದೆ. ಈ ವೇಳೆ ನಗರದಲ್ಲಿ ಒಟ್ಟು 4,158 ಮಂದಿ ನಿರ್ಗತಿಕರು ಇದ್ದಾರೆ ಎಂದು ತಿಳಿದು ಬಂದಿತ್ತು.

ನಿರ್ಗತಿಕರ ಸಮೀಕ್ಷೆ ವೇಳೆ ನಿರ್ಗತಿಕರ ಹೆಸರು, ವಯಸ್ಸು, ಎಷ್ಟುದಿನದಿಂದ ನಗರದಲ್ಲಿ ವಾಸ?, ಇನ್ನು ಎಷ್ಟುದಿನ ಬೆಂಗಳೂರಿನಲ್ಲಿ ಇರುತ್ತೀರಾ?, ಮನೆ ಬಿಟ್ಟು ಬಂದ ಕಾರಣ?, ಸರ್ಕಾರಿ ದಾಖಲಾತಿ?, ನಿತ್ಯ ಊಟ, ತಿಂಡಿ ಎಲ್ಲಿ ಮಾಡುತ್ತೀರಾ? ಶೌಚಾಲಯ ಬಳಕೆ ಎಲ್ಲಿ? ಕಾಯಿಲೆ ವಿವರ? ಮಾನಸಿಕ ಅಸ್ವಸ್ಥರಾ? ಸೇರಿದಂತೆ ಮೊದಲಾದ ಮಾಹಿತಿ ಸಂಗ್ರಹಿಸಲಾಗಿತ್ತು. ಅದರಲ್ಲಿ ಊಟ, ತಿಂಡಿ ಎಲ್ಲಿ ಮಾಡುತ್ತೀರಾ ಎಂಬ ಪ್ರಶ್ನೆಗೆ 1,675 ನಿರ್ಗತಿಕರು ಪ್ರತಿನಿತ್ಯ ಬಿಬಿಎಂಪಿ ನಿರ್ಮಿಸಿದ ಇಂದಿರಾ ಕ್ಯಾಂಟೀನ್‌ನಲ್ಲಿ ಸೇವಿಸುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ಉಳಿದ 925 ಮಂದಿ ಹೋಟೆಲ್‌ಗಳಲ್ಲಿ, 125 ಮಂದಿ ಉಚಿತ ಊಟ ನೀಡುವ ಸ್ಥಳದಲ್ಲಿ, 192 ಮಂದಿ ಕಲ್ಯಾಣ ಮಂಟಪ ಹಾಗೂ ದೇವಸ್ಥಾನದಲ್ಲಿ, 661 ಮಂದಿ ತಾವೇ ರಸ್ತೆ ಬದಿ ಹಾಗೂ ಇನ್ನಿತರ ಕಡೆಯಲ್ಲಿ ಆಹಾರ ತಯಾರಿಸಿಕೊಂಡು ಊಟ ಮಾಡುವುದಾಗಿ ಮಾಹಿತಿ ನೀಡಿದ್ದಾರೆ. ಇನ್ನುಳಿದ 580 ಮಂದಿ ನಿರ್ದಿಷ್ಟಸ್ಥಳದಲ್ಲಿ ಆಹಾರ ಸೇವನೆ ಬಗ್ಗೆ ಮಾಹಿತಿ ನೀಡಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

click me!